ADVERTISEMENT

ಟೆನಿಸ್ ಟೂರ್ನಿ: ಇಗಾ, ಅಲ್ಕರಾಜ್‌ಗೆ ಗೆಲುವು

ಏಜೆನ್ಸೀಸ್
Published 14 ಮಾರ್ಚ್ 2023, 22:42 IST
Last Updated 14 ಮಾರ್ಚ್ 2023, 22:42 IST
ಇಗಾ ಶ್ವಾಂಟೆಕ್‌ ಆಟದ ವೈಖರಿ –ಎಎಫ್‌ಪಿ ಚಿತ್ರ
ಇಗಾ ಶ್ವಾಂಟೆಕ್‌ ಆಟದ ವೈಖರಿ –ಎಎಫ್‌ಪಿ ಚಿತ್ರ   

ಇಂಡಿಯನ್‌ ವೆಲ್ಸ್‌, ಅಮೆರಿಕ: ಯುವ ಆಟಗಾರ ಕಾರ್ಲೊಸ್‌ ಅಲ್ಕರಾಜ್‌ ಅವರು ಇಲ್ಲಿ ನಡೆಯುತ್ತಿರುವ ಬಿಎನ್‌ಪಿ ಪರಿಬಾಸ್‌ ಓಪನ್‌ ಟೆನಿಸ್ ಟೂರ್ನಿಯ ನಾಲ್ಕನೇ ಸುತ್ತು ಪ್ರವೇಶಿಸಿದರು.

ಸೋಮವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಅವರು 7–6, 6–3 ರಲ್ಲಿ ನೆದರ್ಲೆಂಡ್ಸ್‌ನ ಟಾಲೊನ್ ಗ್ರಿಕ್‌ಸ್ಪೂರ್‌ ಅವರನ್ನು ಮಣಿಸಿದರು.

19 ವರ್ಷದ ಅಲ್ಕರಾಜ್‌ ಮೊದಲ ಸೆಟ್‌ನಲ್ಲಿ ಎದುರಾಳಿಯಿಂದ ಅಲ್ಪ ಪೈಪೋಟಿ ಎದುರಿಸಿದರು. ಎರಡನೇ ಸೆಟ್‌ನ ಎರಡನೇ ಗೇಮ್‌ನಲ್ಲಿ ಗ್ರಿಕ್‌ಸ್ಪೂರ್‌ ಅವರ ಸರ್ವ್‌ ಬ್ರೇಕ್‌ ಮಾಡಿ 3–0 ರಲ್ಲಿ ಮೇಲುಗೈ ಪಡೆದರು. ಆ ಬಳಿಕ ತಮ್ಮ ಸರ್ವ್‌ಗಳಲ್ಲಿ ಪಾಯಿಂಟ್‌ ಗಿಟ್ಟಿಸಿ ಗೆದ್ದರು.

ADVERTISEMENT

ಮರೆಗೆ ಸೋಲು: ಬ್ರಿಟನ್‌ನ ಆ್ಯಂಡಿ ಮರೆ ಅವರು ನಿರಾಸೆ ಅನುಭವಿಸಿದರು. ಬ್ರಿಟನ್‌ನವರೇ ಆದ ಜಾಕ್‌ ಡ್ರೇಪರ್‌ 7–6, 6–2 ರಲ್ಲಿ ಮರೆ ವಿರುದ್ಧ ಗೆದ್ದರು. ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಡ್ರೇಪರ್– ಅಲ್ಕರಾಜ್‌ ಎದುರಾಗಲಿದ್ದಾರೆ.

ಪುರುಷರ ವಿಭಾಗದ ಇತರ ಪಂದ್ಯಗಳಲ್ಲಿ ಹಾಲಿ ಚಾಂಪಿಯನ್‌ ಟೇಲರ್ ಫ್ರಿಟ್ಜ್‌ 6–1, 6–2 ರಲ್ಲಿ ಅರ್ಜೆಂಟೀನಾದ ಸೆಬಾಸ್ಟಿಯನ್‌ ಬೇಜ್‌ ವಿರುದ್ಧ ಗೆದ್ದರೆ, ಸ್ಟಾನಿಸ್ಲಾಸ್‌ ವಾರ್ವಿಂಕಾ 6–2, 6–7, 7–5 ರಲ್ಲಿ ಹೋಲ್ಕರ್‌ ರೂನ್‌ ಅವರನ್ನು ಪರಾಭವಗೊಳಿಸಿದರು.

ಇಗಾ ಜಯಭೇರಿ: ವಿಶ್ವದ ಅಗ್ರ ರ್‍ಯಾಂಕಿಂಗ್‌ನ ಆಟಗಾರ್ತಿ ಪೋಲೆಂಡ್‌ನ ಇಗಾ ಶ್ವಾಂಟೆಕ್‌ 6–3, 7–6 ರಲ್ಲಿ ಕೆನಡಾದ ಬಿಯಾಂಕ ಆಂಡ್ರೆಸ್ಕ್ಯು ವಿರುದ್ಧ ಗೆದ್ದರು.

ಮಾರ್ಟಿನಾ ನವ್ರಾಟಿಲೋವ ಬಳಿಕ ಇಲ್ಲಿ ಸತತ ಪ್ರಶಸ್ತಿ ಗೆದ್ದ ಮೊದಲ ಆಟಗಾರ್ತಿ ಎಂಬ ಸಾಧನೆ ಮಾಡುವ ಹಂಬಲದಲ್ಲಿರುವ ಇಗಾ, ಮುಂದಿನ ಸುತ್ತಿನಲ್ಲಿ ಬ್ರಿಟನ್‌ನ ಎಮಾ ರಡುಕಾನು ಅವರ ಸವಾಲು ಎದುರಿಸಲಿದ್ದಾರೆ. ಎಮಾ 6–1, 2–6, 6–4 ರಲ್ಲಿ ಬ್ರೆಜಿಲ್‌ನ ಬೆಟ್ರಿಜ್ ವಿರುದ್ಧ ಜಯಿಸಿದರು. ಮಾರ್ಟಿನಾ 1990 ಮತ್ತು 91 ರಲ್ಲಿ ಇಲ್ಲಿ ಚಾಂಪಿಯನ್‌ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.