
ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ
ಹಾಂಗ್ಜು: ಭಾರತದ ತಾರಾ ವರ್ಚಸ್ಸಿನ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಬುಧವಾರ ಇಲ್ಲಿ ಆರಂಭವಾದ ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್‌ನಲ್ಲಿ ಶುಭಾರಂಭ ಮಾಡಿದರು.
ವಿಶ್ವ ಬ್ಯಾಡ್ಮಿಂಟನ್ ರ‍್ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿರುವ ಭಾರತದ ಜೋಡಿಯು ಪಂದ್ಯದ ಆರಂಭಿಕ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿತ್ತು. ನಂತರ ಪುಟಿದೆದ್ದು ಚೀನಾದ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ ಜೋಡಿಯನ್ನು 12–21, 22–20, 21–14ರಿಂದ ಮಣಿಸಿದರು.
ಏಷ್ಯನ್ ಗೇಮ್ಸ್ ಚಾಂಪಿಯನ್ ಜೋಡಿಯು ಈ ವರ್ಷ ಹಾಂಗ್‌ಕಾಂಗ್ ಓಪನ್ ಮತ್ತು ಚೀನಾ ಮಾಸ್ಟರ್ಸ್ ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿತ್ತು. ಇಲ್ಲಿಯೂ ತಮ್ಮ ಅಮೋಘ ಲಯದಲ್ಲಿ ಮುಂದುವರಿದಿದ್ದಾರೆ.
ಗುರುವಾರ ಎರಡನೇ ಸುತ್ತಿನ ಪಂದ್ಯದಲ್ಲಿ ಸಾತ್ವಿಕ್ ಮತ್ತು ಚಿರಾಗ್ ಜೋಡಿಯು ಇಂಡೊನೇಷ್ಯಾದ ಫಜರ್ ಅಲ್ಫಿಯಾನ್ ಮತ್ತು ಮೊಹಮ್ಮದ್ ಶೋಹಿಬುಲ್ ಫಿಕ್ರಿ ಜೋಡಿಯನ್ನು ಎದುರಿಸಲಿದೆ.
ಮೊದಲ ಸುತ್ತಿನ ಪಂದ್ಯವು ಆರಂಭದಿಂದಲೂ ತೀವ್ರ ಪೈಪೋಟಿಯಿಂದ ಕೂಡಿತ್ತು. ಚುಟುಕಾದ ರ‍್ಯಾಲಿಗಳು ಗಮನ ಸೆಳೆದವು. ಆರಂಭದ ಗೇಮ್‌ನಲ್ಲಿ ಚೀನಾ 3–7ರ ಮುನ್ನಡೆಯಲ್ಲಿದ್ದರು. ಇದಕ್ಕೆ ತಿರುಗೇಟು ನೀಡಿದ ಭಾರತದ ಜೋಡಿಯು 7–7ರ ಸಮಬಲ ಸಾಧಿಸಿತು. ಚೀನಾದ ಜೋಡಿಯು ಆಟದ ವೇಗ ಹೆಚ್ಚಿಸಿ ಸತತ ನಾಲ್ಕು ಅಂಕಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತು. ವಾಂಗ್ ಅವರು ನೆಟ್ ಬಳಿ ತೋರಿದ ಚುರುಕುತನದ ಆಟದಿಂದಾಗಿ ಚೀನಾ 14–9ರ ಮುನ್ನಡೆ ಸಾಧಿಸಿತು.
ಗೇಮ್ ಮೇಲಿನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದ ಚೀನಾ ಜೋಡಿಯು ಶಟಲ್ ಅನ್ನು ಚಾಣಾಕ್ಷತೆಯಿಂದ ಡ್ರಾಪ್ ಮಾಡುವ ಮೂಲಕ ಪಾಯಿಂಟ್ಸ್ ಹೆಕ್ಕಿಕೊಂಡಿತು. 19–11ರ ಮುನ್ನಡೆ ಹೊಂದಿತು. ಈ ಸಂದರ್ಭದಲ್ಲಿ ಲಿಯಾಂಗ್ ಅವರು ಒಂದು ರ‍್ಯಾಲಿ ಮತ್ತು ಒಂದು ಶರವೇಗದ ಸ್ಮ್ಯಾಷ್ ಹೊಡೆಯುವ ಮೂಲಕ ಗೆಲುವಿನತ್ತ ಸಾಗಿದರು.
ಎರಡನೇ ಗೇಮ್‌ನಲ್ಲಿಯೂ ಭಾರತದ ಜೋಡಿಯು 2–4ರ ಹಿನ್ನಡೆಯ ಆತಂಕ ಎದುರಿಸಿತು. ಅದು 3–6ಕ್ಕೂ ವಿಸ್ತರಿಸಿತು. ಈ ಹಂತದಲ್ಲಿ ಆಟ ತುರುಸುಗೊಂಡಿತು. ಉಭಯ ಜೋಡಿಗಳು 31 ಶಾಟ್‌ಗಳ ರ‍್ಯಾಲಿ ಆಡಿದವು. ಫ್ಲ್ಯಾಟ್ ಲಿಫ್ಟ್‌ಗಳನ್ನು ಪ್ರಯೋಗಿಸಿದ ಸಾತ್ವಿಕ್–ಚಿರಾಗ್ ಜೋಡಿಯು ಪಾಯಿಂಟ್‌ನಲ್ಲಿ ಸಮಬಲ ಸಾಧಿಸಿತು. ನಂತರ ಮುನ್ನಡೆ ಸಾಧಿಸಿತು. ಆದರೆ ಈ ಗೇಮ್ ಕೊನೆಯವರೆಗೂ ಸಮಬಲದ ಪೈಪೋಟಿ ನಡೆಯಿತು. 20–20ರವರೆಗೂ ಸಮಬಲವಿತ್ತು. ಟೈಬ್ರೇಕರ್‌ನಲ್ಲಿ ಭಾರತದ ಜೋಡಿ ಮೇಲುಗೈ ಸಾಧಿಸಿತು.
ನಿರ್ಣಾಯಕವಾಗಿದ ಮೂರನೇ ಗೇಮ್‌ನಲ್ಲಿ ಆರಂಭದಲ್ಲಿ ಕಠಿಣ ಪೈಪೋಟಿಯನ್ನು ಭಾರತ ಎದುರಿಸಿತು. ಆದರೆ ಅದರಿಂದ ಮೇಲೆ ಬಂದ ಜೋಡಿಯು 13–10ರ ಮುನ್ನಡೆ ಪಡೆಯಿತು. ಈ ಮುನ್ನಡೆಯನ್ನು ಕಾಪಾಡಿಕೊಂಡು ಗೆಲುವಿನತ್ತ ಸಾಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.