ADVERTISEMENT

ಸೆಮೆನ್ಯಾ ಪ್ರಕರಣ| ವಿಚಾರಣೆ ನ್ಯಾಯೋಚಿತವಾಗಿಲ್ಲ: ಯುರೋಪ್‌ನ ಮಾನವಹಕ್ಕು ನ್ಯಾಯಾಲಯ

ಏಜೆನ್ಸೀಸ್
Published 10 ಜುಲೈ 2025, 13:08 IST
Last Updated 10 ಜುಲೈ 2025, 13:08 IST
<div class="paragraphs"><p>ದಕ್ಷಿಣ ಆಫ್ರಿಕಾದ ಅಥ್ಲೀಟ್ ಕಾಸ್ಟರ್‌ ಸೆಮೆನ್ಯಾ</p></div>

ದಕ್ಷಿಣ ಆಫ್ರಿಕಾದ ಅಥ್ಲೀಟ್ ಕಾಸ್ಟರ್‌ ಸೆಮೆನ್ಯಾ

   

ರಾಯಿಟರ್ಸ್‌ ಚಿತ್ರ

ಜಿನೀವಾ: ಅಥ್ಲೆಟಿಕ್ಸ್‌ನಲ್ಲಿ ಲಿಂಗತ್ವ ಅರ್ಹತಾ ನಿಯಮಗಳಿಗೆ ಸಂಬಂಧಿಸಿ ಏಳು ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿರುವ ದಕ್ಷಿಣ ಆಫ್ರಿಕಾದ ಅಥ್ಲೀಟ್ ಕಾಸ್ಟರ್‌ ಸೆಮೆನ್ಯಾ ಅವರಿಗೆ ಯುರೋಪಿನ ಮಾನವಹಕ್ಕು ನ್ಯಾಯಾಲಯದಲ್ಲಿ ಗುರುವಾರ ಭಾಗಶಃ ಗೆಲುವು ದೊರಕಿದೆ.

ADVERTISEMENT

ಸ್ವಿಟ್ಜರ್ಲೆಂಡ್‌ನ ಫೆಡರಲ್ ಕೋರ್ಟ್‌ನಲ್ಲಿ ನಡೆದ ಈ ಹಿಂದಿನ ವಿಚಾರಣೆಯು ಸೆಮೆನ್ಯಾ ಅವರ ಕೆಲವು ಹಕ್ಕುಗಳಿಗೆ ಸಂಬಂಧಿಸಿ ನ್ಯಾಯೋಚಿತವಾಗಿ ನಡೆದಿಲ್ಲ ಎಂದು 17 ಸದಸ್ಯರ ಪರಮೋಚ್ಚ ಪೀಠ ಬಹುಮತದ (15–2) ತೀರ್ಪಿನಲ್ಲಿ ತಿಳಿಸಿತು.

ಈ ಹಿಂದೆ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು ವಿಶ್ವ ಅಥ್ಲೆಟಿಕ್ಸ್ ಪರ ನೀಡಿದ ತೀರ್ಪನ್ನು ಪ್ರಶ್ನಿಸಿ 34 ವರ್ಷ ವಯಸ್ಸಿನ ಸೆಮೆನ್ಯಾ ಸ್ವಿಟ್ಜರ್ಲೆಂಡ್‌ ನ್ಯಾಯಾಲಯದ ಮೊರೆ ಹೋಗಿದ್ದರು.

ಸೆಮೆನ್ಯಾ ಅವರನ್ನು ‘ಲೈಂಗಿಕ ಬೆಳವಣಿಗೆಯಲ್ಲಿ ವ್ಯತಯವಿರುವ ಅಥ್ಲೀಟ್‌’ ಎಂದು ವರ್ಗೀಕರಿಸಲಾಗಿದೆ. ಆದರೆ ಮಹಿಳೆ ಎಂದು ಪರಿಗಣಿಸಿ ಆ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.

2018ರಿಂದೀಚೆ ಅವರಿಗೆ ನೆಚ್ಚಿನ ಸ್ಪರ್ಧೆಯಾದ 800 ಮೀ. ಓಟದಲ್ಲಿ ಸ್ಪರ್ಧಿಸಲು ಆಗುತ್ತಿಲ್ಲ.  ಅವರು ದೇಹದಲ್ಲಿನ ಟೆಸ್ಟೊಸ್ಟೆರೋನ್ ಮಟ್ಟವನ್ನು ಇಳಿಸುವ ಔಷಧ ಸೇವಿಸಲು ನಿರಾಕರಿಸುತ್ತಿದ್ದಾರೆ. ಇದು ವಿಶ್ವ ಅಥ್ಲೆಟಿಕ್ಸ್‌ನ ಹೊಸ ನಿಯಮಗಳಿಗೆ ವಿರುದ್ಧವಾಗಿದೆ.

ಯುರೋಪಿನ ಮಾನವ ಹಕ್ಕುಗಳ ನ್ಯಾಯಾಲಯದ ತೀರ್ಪು ‘ಸಕಾರಾತ್ಮಕ ಬೆಳವಣಿಗೆ’ ಎಂದು ನ್ಯಾಯಾಲಯದಲ್ಲಿ ಹಾಜರಿದ್ದ ಸೆಮೆನ್ಯಾ ಪ್ರತಿಕ್ರಿಯಿಸಿದರು.

ಈಗ ಈ ಪ್ರಕರಣದ ವಿಚಾರಣೆ ಮತ್ತೊಮ್ಮೆ ಲೂಸಾನ್‌ನಲ್ಲಿರುವ ಫೆಡರಲ್ ಕೋರ್ಟ್‌ಗೆ  ಬರಲಿದೆ. ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಲು ಇರುವ ಅರ್ಹತಾ ನಿಯಮಗಳಿಗೆ ಸಂಬಂಧಿಸಿ ಪರಾಮರ್ಶೆಯಲ್ಲಿ ತೊಡಗಿರುವ ಇತರ ಕ್ರೀಡಾಸಂಸ್ಥೆಗಳೂ ಈ ತೀರ್ಪಿನ ಬಗ್ಗೆ ಕುತೂಹಲ ಹೊಂದಿವೆ.

ಹಿನ್ನೆಲೆ:

ತಮ್ಮಂತೆಯೇ ಪುರುಷ ವರ್ಣತಂತು ಮಾದರಿ ಮತ್ತು ಟೆಸ್ಟೊಸ್ಟೆರೋನ್ ಮಟ್ಟ ಅಧಿಕ ಪ್ರಮಾಣದಲ್ಲಿರುವ ಅಥ್ಲೀಟುಗಳಿಗೆ ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಲು ಮುಕ್ತ ಅವಕಾಶ ನೀಡಬೇಕು ಎಂಬುದು ಸೆಮೆನ್ಯಾ ವಾದವಾಗಿದೆ. ಮೊನಾಕೊದಲ್ಲಿ ಕೇಂದ್ರ ಕಚೇರಿ ಹೊಂದಿರುವ ವಿಶ್ವ ಅಥ್ಲೆಟಿಕ್ಸ್‌ ವಿರುದ್ಧ ಅವರು ನ್ಯಾಯಾಲಯದ ಮೊರೆಹೋಗಿದ್ದಾರೆ.

ಫ್ರಾನ್ಸ್‌ನ ಸ್ಟ್ರಾಸ್‌ಬರ್ಗ್‌ನಲ್ಲಿರುವ ಮಾನವ ಹಕ್ಕು ನ್ಯಾಯಾಲಯವು ಸೆಮೆನ್ಯಾ ಅವರ ಮನವಿಯ ಇತರ ಅಂಶಗಳನ್ನು ತಿರಸ್ಕರಿಸಿತು. ಕೋರ್ಟ್‌ ಖರ್ಚುವೆಚ್ಚವಾಗಿ ಅವರಿಗೆ ಸುಮಾರು ₹80 ಲಕ್ಷ ನೀಡುವಂತೆ ಆದೇಶಿಸಿತು.

2009ರಲ್ಲಿ ವಿಶ್ವ ಮಟ್ಟದಲ್ಲಿ ಪ್ರವರ್ಧಮಾನಕ್ಕೆ ಬಂದ ಮೇಲೆ ಅವರು ಎರಡು ಒಲಿಂಪಿಕ್‌ ಮತ್ತು ಮೂರು ವಿಶ್ವ ಚಾಂಪಿಯನ್‌ಷಿಪ್ ಪ್ರಶಸ್ತಿ ಗೆದ್ದಿದ್ದಾರೆ.

ಆದರೆ ಯುರೋಪಿನ ಕೋರ್ಟ್‌ ವಿಶ್ವ ಅಥ್ಲೆಟಿಕ್ಸ್‌ ನಿಯಮಗಳನ್ನು ಪ್ರಶ್ನಿಸಿಲ್ಲ. ಹೀಗಾಗಿ 800 ಮೀ. ಓಟದಲ್ಲಿ ಸೆಮೆನ್ಯಾ ಅವರ ವೃತ್ತಿಜೀವನ ಬಹುತೇಕ ಕೊನೆಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.