ADVERTISEMENT

ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್‌ ಚೆಸ್‌: ಅರ್ಜುನ್‌ಗೆ ವಿದಿತ್‌, ಗಿರಿ ಸವಾಲು ಸಂಭವ

ಪಿಟಿಐ
Published 5 ಆಗಸ್ಟ್ 2025, 14:41 IST
Last Updated 5 ಆಗಸ್ಟ್ 2025, 14:41 IST
ಅರ್ಜುನ್‌ ಇರಿಗೇಶಿ
ಅರ್ಜುನ್‌ ಇರಿಗೇಶಿ   

ಚೆನ್ನೈ: ಭಾರತದ ಅಗ್ರಮಾನ್ಯ ಆಟಗಾರ ಅರ್ಜುನ್‌ ಇರಿಗೇಶಿ ಅವರಿಗೆ ಸೋಮವಾರ ಆರಂಭವಾಗುವ ಮೂರನೇ ವರ್ಷದ ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್ ಟೂರ್ನಿಯಲ್ಲಿ  ಸ್ವದೇಶದ ವಿದಿತ್‌ ಗುಜರಾತಿ, ನೆದರ್ಲೆಂಡ್ಸ್‌ನ ದಿಗ್ಗಜ ಅನಿಶ್‌ ಗಿರಿ ಅವರಿಂದ ತೀವ್ರ ಸ್ಪರ್ಧೆ ಎದುರಾಗುವ ಸಾಧ್ಯತೆಯಿದೆ.

ಒಂದು ಕೋಟಿ ರೂಪಾಯಿ ಬಹುಮಾನ ಹಣ ಹೊಂದಿರುವ ಈ ಟೂರ್ನಿಯು ಮಾಸ್ಟರ್ಸ್‌ ಮತ್ತು ಚಾಲೆಂಜರ್ಸ್‌ ವಿಭಾಗದಲ್ಲಿ 9 ಸುತ್ತುಗಳಲ್ಲಿ ನಡೆಯಲಿದೆ. 

ಈ ಹಿಂದೆ ಏಳು ಸುತ್ತುಗಳು ಇರುತ್ತಿದ್ದವು. ಈ ಬಾರಿ 19 ಗ್ರ್ಯಾಂಡ್‌ಮಾಸ್ಟರ್‌ಗಳು ಕಣದಲ್ಲಿದ್ದು, ಫಿಡೆ ಸರ್ಕಿಟ್‌ ಅಮೂಲ್ಯ ಪಾಯಿಂಟ್‌ಗಳನ್ನು ಗಳಿಸಲು ಅವಕಾಶವಿದೆ.  ಅತಿ ಹೆಚ್ಚು ಸರ್ಕಿಟ್‌ ಪಾಯಿಂಟ್‌ ಪಡೆಯುವ ಆಟಗಾರ ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ಆಡುವ ಅವಕಾಶ ಪಡೆಯುತ್ತಾರೆ. ಹೀಗಾಗಿ ಈ ಟೂರ್ನಿಯಲ್ಲಿ ಪಡೆಯುವ ಪಾಯಿಂಟ್ಸ್‌ ಸಹ ಮಹತ್ವದ್ದಾಗಲಿದೆ.

ADVERTISEMENT

2023ರಲ್ಲಿ ಈ ಟೂರ್ನಿಯಲ್ಲಿ ‍ಪಡೆದ ‍ಪಾಯಿಂಟ್‌ಗಳು ಡಿ.ಗುಕೇಶ್ ಅವರ ಪಾಲಿಗೆ ನಿರ್ಣಾಯಕವಾಗಿದ್ದವು. ಅವರು ಫಿಡೆ ಸರ್ಕಿಟ್‌ನಲ್ಲಿ ಅತಿ ಹೆಚ್ಚು ಪಾಯಿಂಟ್ಸ್‌ ಪಡೆದು ಕ್ಯಾಂಡಿಡೇಟ್ಸ್‌ಗೆ ಆಯ್ಕೆಯಾಗಿದ್ದರು. ಅಲ್ಲಿ ವಿಜೇತರಾಗಿ ನಂತರ ವಿಶ್ವ ಚಾಂಪಿಯನ್‌ಗೆ (ಆಗ ಡಿಂಗ್ ಲಿರೆನ್‌ಗೆ) ಚಾಲೆಂಜರ್‌ ಆಗಿದ್ದರು.

2800ರ ರೇಟಿಂಗ್‌ ಕ್ಲಬ್‌ಗೆ ಸೇರ್ಪಡೆಯಾಗಿರುವ ಇರಿಗೇಶಿ, ಸ್ವದೇಶದ ಯುವ ಆಟಗಾರ ನಿಹಾಲ್ ಸರಿನ್‌, ಜರ್ಮನಿಯ ಯುವತಾರೆ ವಿನ್ಸೆಂಟ್‌ ಕೀಮರ್ ಅವರನ್ನೂ ಎದುರಿಲಿಸದ್ದಾರೆ. ಕೀಮರ್‌, ವಿಶ್ವ ಚಾಂಪಿಯನ್‌ಷಿಪ್‌ ವೇಳೆ ಗುಕೇಶ್‌ ಅವರ ನೆರವು ತಂಡದಲ್ಲಿ ‘ಸೆಕೆಂಡ್’ ಆಗಿದ್ದರು.

ಆದರೆ ಅನಿಶ್‌ ಗಿರಿ ಅವರಿಂದ ಇರಿಗೇಶಿ ಪ್ರಬಲ ಪೈಪೋಟಿ ಎದುರಿಸುವ ನಿರೀಕ್ಷೆಯಿದೆ. ಪ್ರಬಲ ಆಟ ಹೊಂದಿರುವ ಗಿರಿ ಈ ಟೂರ್ನಿಯ ಫೇವರಿಟ್‌ಗಳಲ್ಲಿ ಒಬ್ಬರಾಗಿದ್ದಾರೆ. ಭಾರತದ ಪ್ರಣವ್‌ ವಿ ಮತ್ತು ಕಾರ್ತಿಕೇಯನ್ ಮುರಳಿ ಅವರೂ ಈ ಟೂರ್ನಿಯಲ್ಲಿ ಆಡಲಿದ್ದಾರೆ.

ಚಾಲೆಂಜರ್ ವಿಭಾಗದಲ್ಲಿ ಗೆಲ್ಲುವ ಆಟಗಾರ, 2026ರ ಮಾಸ್ಟರ್ಸ್‌ ವಿಭಾಗದಲ್ಲಿ ಆಡುವ ಅವಕಾಶ ಗಳಿಸಲಿದ್ದಾರೆ.

ಚಾಲೆಂಜರ್ಸ್ ವಿಭಾಗದಲ್ಲೂ ಪ್ರತಿಭಾನ್ವಿತರಿದ್ದಾರೆ. ಡಿ.ಹಾರಿಕಾ, ಆರ್.ವೈಶಾಲಿ, ಹರ್ಷವರ್ಧನ ಜಿ.ಬಿ., ಅಭಿಮನ್ಯು ಪುರಾಣಿಕ್‌, ಗ್ರ್ಯಾಂಡ್‌ಮಾಸ್ಟರ್‌ ಭಾಸ್ಕರನ್ ಅಧಿಬನ್ ಮೊದಲಾದವರು ಪೈಪೋಟಿಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.