ಚೆನ್ನೈ: ಭಾರತದ ಗ್ರ್ಯಾಂಡ್‌ಮಾಸ್ಟರ್ ವಿದಿತ್ ಗುಜರಾತಿ ಜೊತೆ ಡ್ರಾ ಮಾಡಿಕೊಂಡ ಜರ್ಮನಿಯ ವಿನ್ಸೆಂಟ್ ಕೀಮರ್ ಅವರು ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್ ಟೂರ್ನಿಯ ಐದನೇ ಸುತ್ತಿನ ನಂತರವೂ ಅಗ್ರಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಒಂಬತ್ತು ಸುತ್ತುಗಳ ಈ ಟೂರ್ನಿಯ ಅರ್ಧಭಾಗ ಮುಗಿದಿದ್ದು ಕೀಮರ್ ನಾಲ್ಕು ಪಾಯಿಂಟ್ಸ್ ಸಂಗ್ರಹಿಸಿದ್ದಾರೆ.
ಅಗ್ರ ಶ್ರೇಯಾಂಕದ ಅರ್ಜುನ್ ಇರಿಗೇಶಿ ಕೂಡ ಸೋಮವಾರ ನಡೆದ ಐದನೇ ಸುತ್ತಿನ ಪಂದ್ಯ ಡ್ರಾ ಮಾಡಿಕೊಂಡಿದ್ದು ಮೂರು ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಸ್ವದೇಶದ ವಿ.ಪ್ರಣವ್ (2) ಜೊತೆ ಪಾಯಿಂಟ್ ಹಂಚಿಕೊಂಡರು. ಆರನೇ ಸುತ್ತಿನಲ್ಲಿ ಅರ್ಜುನ್ ಮತ್ತು ಕೀಮರ್ ಮುಖಾಮುಖಿಯಾಗಲಿದ್ದಾರೆ. ಈ ಮಹತ್ವದ ಪಂದ್ಯದಲ್ಲಿ ಜರ್ಮನಿಯ ಆಟಗಾರ ಬಿಳಿ ಕಾಯಿಗಳಲ್ಲಿ ಆಡಲಿದ್ದಾರೆ.
ಎಂಜಿಡಿ1 ಆಶ್ರಯದಲ್ಲಿ ನಡೆಯುತ್ತಿರುವ ಮೂರನೇ ವರ್ಷದ ಈ ಟೂರ್ನಿಯು ಮಾಸ್ಟರ್ಸ್ ಮತ್ತು ಚಾಲೆಂಜರ್ಸ್ ವಿಭಾಗಗಳಲ್ಲಿ ನಡೆಯುತ್ತಿದ್ದು, ತಲಾ 10 ಆಟಗಾರರು ಭಾಗವಹಿಸುತ್ತಿದ್ದಾರೆ. ಮಾಸ್ಟರ್ಸ್ ವಿಭಾಗದ ವಿಜೇತ ಆಟಗಾರ ₹25 ಲಕ್ಷ ಹಾಗೂ ಚಾಲೆಂಜರ್ ವಿಭಾಗದ ವಿಜೇತ ಆಟಗಾರ ₹7 ಲಕ್ಷ ನಗದು ಬಹುಮಾನ ಪಡೆಯಲಿದ್ದಾರೆ.
ನೆದರ್ಲೆಂಡ್ಸ್‌ನ ಜೋರ್ಡನ್ ವಾನ್ ಫೊರೀಸ್ಟ್ (2), ಅಮೆರಿಕದ ರೇ ರಾಬ್ಸನ್ (2) ಅವರನ್ನು ಸೋಲಿಸಿದ್ದು ಮಾತ್ರ ದಿನದ ನಿರ್ಣಾಯಕ ಫಲಿತಾಂಶ ಎನಿಸಿತು. ಉಳಿದ ನಾಲ್ಕು ಪಂದ್ಯಗಳು ಡ್ರಾ ಆದವು. ಲಿಯಾಂಗ್ ಅವೊಂಡರ್ (2.5), ಭಾರತದ ನಿಹಾಲ್ ಸರಿನ್(2) ಜೊತೆ; ಅನಿಶ್ ಗಿರಿ (2.5), ಭಾರತದ ಮುರಳಿ ಕಾರ್ತಿಕೇಯನ್ (2.5) ಜೊತೆ ಡ್ರಾ ಮಾಡಿಕೊಂಡರು. ವಿದಿತ್ ಖಾತೆಯಲ್ಲೂ 2.5 ಪಾಯಿಂಟ್ಸ್ ಇದೆ.
ಚಾಲೆಂಜರ್ಸ್ ವಿಭಾಗ:
ಅಭಿಮನ್ಯು ಪುರಾಣಿಕ್ (4.5) ಅವರು ಐದನೇ ಸುತ್ತಿನಲ್ಲಿ ದ್ರೋಣವಲ್ಲಿ ಹಾರಿಕಾ (0.5) ಅವರನ್ನು ಸೋಲಿಸಿ ಅಗ್ರಸ್ಥಾನವನ್ನು ಬಲಪಡಿಸಿಕೊಂಡರು. ವೈಶಾಲಿ ಆರ್ (1), ಇನ್ನೊಂದು ಪಂದ್ಯದಲ್ಲಿ ಜಿ.ಬಿ. ಹರ್ಷವರ್ಧನ್ (1.5) ಅವರಿಗೆ ಮಣಿಸಿದರು. ಈ ವಿಭಾಗದ ಇತರ ಮೂರು ಪಂದ್ಯಗಳು ಡ್ರಾ ಆದವು. ಪ್ರಾಣೇಶ್ ಮತ್ತು ಲಿಯಾನ್ ಮೆಂಡೋನ್ಸಾ ನಡುವಣ ಪಂದ್ಯ ಡ್ರಾ ಆದರೆ, ಆರ್ಯನ್ ಚೋಪ್ರಾ ಮತ್ತು ಅಧಿಬನ್ ನಡುವಣ ಪಂದ್ಯವೂ ಇದೇ ಹಾದಿ ಹಿಡಿಯಿತು. ದೀಪ್ತಾಯನ ಘೋಸಷ್ ಮತ್ತು ಪಾ.ಇನಿಯನ್ ಸಹ ಪಾಯಿಂಟ್ ಹಂಚಿಕೊಂಡರು.
ಪ್ರಾಣೇಶ್, ದೀಪ್ತಾಯನ್, ಲಿಯಾನ್ ಮೆಂಡೋನ್ಸಾ ತಲಾ 3.5 ಪಾಯಿಂಟ್ಸ್ ಸಂಗ್ರಹಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಇನಿಯನ್ (3), ಅಧಿಬನ್ (2.5) ನಂತರದ ಸ್ಥಾನಗಳಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.