ADVERTISEMENT

ಚೆಸ್‌ ಒಲಿಂಪಿಯಾಡ್‌ಗೆ ತೆರೆ: ಭಾರತ ತಂಡಗಳಿಗೆ ಕಂಚಿನ ಪದಕ

ಚೆಸ್‌ ಒಲಿಂಪಿಯಾಡ್‌ಗೆ ತೆರೆ; ಮುಕ್ತ ವಿಭಾಗದಲ್ಲಿ ‘ಬಿ’ ತಂಡಕ್ಕೆ ಮೂರನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 14:29 IST
Last Updated 9 ಆಗಸ್ಟ್ 2022, 14:29 IST
ಮಹಿಳೆಯರ ವಿಭಾಗದಲ್ಲಿ ಕಂಚು ಗೆದ್ದ ಭಾರತ ‘ಎ’ ತಂಡದ ಕೊನೇರು ಹಂಪಿ –ಪಿಟಿಐ ಚಿತ್ರ
ಮಹಿಳೆಯರ ವಿಭಾಗದಲ್ಲಿ ಕಂಚು ಗೆದ್ದ ಭಾರತ ‘ಎ’ ತಂಡದ ಕೊನೇರು ಹಂಪಿ –ಪಿಟಿಐ ಚಿತ್ರ   

ಮಹಾಬಲಿಪುರಂ (ಪಿಟಿಐ): ವಿಶ್ವದ ಶ್ರೇಷ್ಠ ಚೆಸ್‌ ತಂಡವನ್ನು ನಿರ್ಧರಿಸಲು ನಡೆದ ಚೆಸ್‌ ಒಲಿಂಪಿಯಾಡ್‌ನ ಮುಕ್ತ ವಿಭಾಗದಲ್ಲಿ ಭಾರತ ‘ಬಿ’ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಭಾರತ ‘ಎ’ ತಂಡಗಳು ಕಂಚಿನ ಪದಕ ಪಡೆದುಕೊಂಡವು.

ಚೆನ್ನೈ ಸಮೀಪದ ಮಹಾಬಲಿಪುರಂನಲ್ಲಿ ಆಯೋಜಿಸಲಾಗಿದ್ದ 44ನೇ ಚೆಸ್‌ ಒಲಿಂಪಿಯಾಡ್‌ಗೆ ಮಂಗಳವಾರ ತೆರೆಬಿತ್ತು. 

ಮುಕ್ತ ವಿಭಾಗದಲ್ಲಿ ಉಜ್ಬೆಕಿಸ್ತಾನ ಚಿನ್ನ ಹಾಗೂ ಅರ್ಮೇನಿಯಾ ಬೆಳ್ಳಿ ಜಯಿಸಿತು. ಮಹಿಳೆಯರ ವಿಭಾಗದಲ್ಲಿ ಉಕ್ರೇನ್‌ ಚಾಂಪಿಯನ್‌ ಆದರೆ, ಜಾರ್ಜಿಯ ಎರಡನೇ ಸ್ಥಾನ ಗಳಿಸಿತು.

ADVERTISEMENT

ಭಾರತ ‘ಬಿ’ ತಂಡ 11ನೇ ಹಾಗೂ ಕೊನೆಯ ಸುತ್ತಿನ ಪಂದ್ಯದಲ್ಲಿ 3–1 ಪಾಯಿಂಟ್‌ಗಳಿಂದ ಜರ್ಮನಿ ತಂಡವನ್ನು ಮಣಿಸಿ ಒಟ್ಟು 18 ಪಾಯಿಂಟ್‌ ಕಲೆಹಾಕಿತು. 17 ಪಾಯಿಂಟ್‌ ಸಂಗ್ರಹಿಸಿದ ಭಾರತ ‘ಎ’ ತಂಡ ನಾಲ್ಕನೇ ಸ್ಥಾನ ಪಡೆಯಿತು. ‘ಸಿ’ ತಂಡ 31ನೇ ಸ್ಥಾನ ಗಳಿಸಿತು.

ಚೆಸ್‌ ಒಲಿಂಪಿಯಾಡ್‌ನ ಮುಕ್ತ ವಿಭಾಗದಲ್ಲಿ ಭಾರತಕ್ಕೆ ಎರಡನೇ ಬಾರಿ ಕಂಚು ಲಭಿಸಿದೆ. ಈ ಹಿಂದೆ 2014 ರಲ್ಲೂ ಇದೇ ಸಾಧನೆ ಮಾಡಿತ್ತು. ಕಂಚು ಗೆದ್ದ ತಂಡದಲ್ಲಿ ನಿಹಾಲ್‌ ಸರೀನ್‌, ಡಿ.ಗುಕೇಶ್‌, ಬಿ.ಅಧಿಬನ್‌, ಆರ್‌.ಪ್ರಗ್ನಾನಂದ ಮತ್ತು ರೌನಕ್‌ ಸಾಧ್ವಾನಿ ಇದ್ದಾರೆ.

ಉಜ್ಬೆಕಿಸ್ತಾನ ಕೊನೆಯ ಸುತ್ತಿನಲ್ಲಿ 2–1 ರಲ್ಲಿ ನೆದರ್ಲೆಂಡ್ಸ್‌ಗೆ ಸೋಲುಣಿಸಿ ಅಗ್ರಸ್ಥಾನಕ್ಕೇರಿ ಅಚ್ಚರಿ ಮೂಡಿಸಿತು. ಅರ್ಮೇನಿಯ 2.5–1.5 ರಲ್ಲಿ ಸ್ಪೇನ್‌ ತಂಡವನ್ನು ಮಣಿಸಿತು. ಉಜ್ಬೆಕಿಸ್ತಾನ ಮತ್ತು ಅರ್ಮೇನಿಯಾ ತಂಡಗಳು ತಲಾ 19 ಪಾಯಿಂಟ್ಸ್‌ ಸಂಗ್ರಹಿಸಿದವು. ಆದರೆ ಟೈಬ್ರೇಕರ್‌ನಲ್ಲಿ ಚಿನ್ನ ಉಜ್ಬೆಕಿಸ್ತಾನಕ್ಕೆ ಲಭಿಸಿತು.

ಮಹಿಳೆಯರ ವಿಭಾಗದಲ್ಲಿ ಅಗ್ರಶ್ರೇಯಾಂಕ ಹೊಂದಿದ್ದ ಕೊನೇರು ಹಂಪಿ ನೇತೃತ್ವದ ಭಾರತ ‘ಎ’ ಕೊನೆಯ ಸುತ್ತಿನಲ್ಲಿ 1–3 ರಲ್ಲಿ ಅಮೆರಿಕ ಎದುರು ಪರಾಭವಗೊಂಡಿತು. ಇದರಿಂದ ಚಿನ್ನ ಗೆಲ್ಲುವ ಅವಕಾಶ ಕೈತಪ್ಪಿಹೋಯಿತು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.