
ಪಣಜಿ (ಪಿಟಿಐ): ಈ ತಿಂಗಳ 1ರಂದು ಚೆಸ್ ವಿಶ್ವಕಪ್ ಆರಂಭವಾದಾಗ ಆತಿಥೇಯ ಭಾರತದ 24 ಆಟಗಾರರು ಕಣದಲ್ಲಿದ್ದರು. ವಿಶ್ವ ಚಾಂಪಿಯನ್ ಗುಕೇಶ್ ಡಿ, ಅರ್ಜುನ್ ಇರಿಗೇಶಿ ಮತ್ತು ಪ್ರಜ್ಞಾನಂದ ಆರ್. ಅವರು ಕ್ರಮವಾಗಿ ಮೊದಲ ಮೂರು ಶ್ರೇಯಾಂಕ ಪಡೆದಿದ್ದರು. ಆದರೆ ಈ ಪ್ರತಿಷ್ಠಿತ ಟೂರ್ನಿ ಸೆಮಿಫೈನಲ್ ಹಂತ ತಲುಪುವ ಮೊದಲೇ ಭಾರತದ ಸವಾಲು ಅಂತ್ಯಗೊಂಡಿದೆ.
ಗುರುವಾರ ವಿಶ್ವಕಪ್‌ಗೆ ವಿರಾಮದ ದಿನವಾಗಿದ್ದು, ಶುಕ್ರವಾರ ಸೆಮಿಫೈನಲ್ ಪಂದ್ಯಗಳು ಆರಂಭವಾಗಲಿವೆ.
ಉಜ್ಬೇಕಿಸ್ತಾನದ ಆಟಗಾರರೇ ಇರುವ ಮೊದಲ ಸೆಮಿಫೈನಲ್‌ನಲ್ಲಿ ಜಾವೊಖಿರ್ ಸಿಂಧರೋವ್ ಅವರು 23 ವರ್ಷ ವಯಸ್ಸಿನ ನದಿರ್ಬೆಕ್ ಯಾಕುಬೊಯೇವ್ ಅವರನ್ನು ಎದುರಿಸಲಿದ್ದಾರೆ. ಇನ್ನೊಂದು ಸೆಮಿಫೈನಲ್‌ನಲ್ಲಿ ವಿಶ್ವ ಕ್ರಮಾಂಕದಲ್ಲಿ 11ನೇ ಸ್ಥಾನದಲ್ಲಿರುವ ಚೀನಾದ ವೀ ಯಿ ಅವರು ರಷ್ಯಾದ ಆ್ಯಂಡ್ರಿ ಇಸಿಪೆಂಕೊ ಅವರನ್ನು ಎದುರಿಸಲಿದ್ದಾರೆ.
ಭಾರತ ಬಿಟ್ಟರೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಾವಂತ ಆಟಗಾರರನ್ನು ಹೊಂದಿರುವ ದೇಶ ಉಜ್ಬೇಕಿಸ್ತಾನ. ‘ನಾನು ಮತ್ತು ಎದುರಾಳಿ ನೊದಿರ್ಬೆಕ್ ಯಾಕುಬೊಯೇವ್ ಇಬ್ಬರೂ ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆದರೆ ನನಗೆ ಅತೀವ ಸಂತಸವಾಗಲಿದೆ’ ಎಂದು 19 ವರ್ಷ ವಯಸ್ಸಿನ ಸಿಂಧರೋವ್ ಹೇಳಿದ್ದಾರೆ.
ವಿಶ್ವಕಪ್‌ನಲ್ಲಿ ಮೊದಲ ಮೂರು ಸ್ಥಾನ ಪಡೆದವರು ಸೈಪ್ರಸ್‌ನಲ್ಲಿ ಮುಂದಿನ ವರ್ಷ (ಮಾರ್ಚ್–ಏಪ್ರಿಲ್‌ನಲ್ಲಿ) ನಡೆಯಲಿರುವ ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆಯುತ್ತಾರೆ. ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ನಡೆಯುವ ಪಂದ್ಯದ ವಿಜೇತ ಆಟಗಾರ ಸಹ ಅರ್ಹತೆ ಪಡೆಯಲಿದ್ದಾರೆ.
ಉಜ್ಬೇಕಿಸ್ತಾನದ ಅಗ್ರ ಆಟಗಾರ, 21 ವರ್ಷ ವಯಸ್ಸಿನ ನೊದಿರ್ಬೆಕ್ ಅಬ್ದುಸತ್ತಾರೋವ್ ಅವರು ಮೂರನೇ ಸುತ್ತಿನಲ್ಲಿ ಮೆಕ್ಸಿಕೊದ ಹೊಸೆ ಮಾರ್ಟಿನೆಝ್ ಅಲ್ಕಂತಾರ ಅವರಿಗೆ ಅಚ್ಚರಿಯ ರೀತಿ ಮಣಿದಿದ್ದರು.
23 ವರ್ಷ ವಯಸ್ಸಿನ ಇಸಿಪೆಂಕೊ ಈ ಟೂರ್ನಿಯಲ್ಲಿ ಉತ್ತಮವಾಗಿ ಆಡಿದ್ದು, ಚೀನಾದ ಪ್ರಬಲ ಆಟಗಾರರನ ವಿರುದ್ಧ ಅವರ ಹಣಾಹಣಿ ಕುತೂಹಲ ಕೆರಳಿಸಿದೆ. 26 ವರ್ಷ ವಯಸ್ಸಿನ ವೀ ಯಿ ಸದ್ಯ ಕಣದಲ್ಲಿರುವ ಗರಿಷ್ಠ (ಏಳನೇ) ಶ್ರೇಯಾಂಕದ ಆಟಗಾರ ಎನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.