ADVERTISEMENT

ಚೀನಾ ಮಾಸ್ಟರ್ಸ್‌: ಸಾತ್ವಿಕ್‌–ಚಿರಾಗ್‌ ಮತ್ತೆ ರನ್ನರ್ಸ್‌ ಅಪ್‌

ಕಿಮ್‌–ಸಿಯೋ ಜೋಡಿ ಚಾಂಪಿಯನ್‌

ಪಿಟಿಐ
Published 21 ಸೆಪ್ಟೆಂಬರ್ 2025, 16:09 IST
Last Updated 21 ಸೆಪ್ಟೆಂಬರ್ 2025, 16:09 IST
<div class="paragraphs"><p>ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ </p></div>

ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ

   

ಎಕ್ಸ್‌ ಚಿತ್ರ

ಶೆಂಜೆನ್‌ (ಚೀನಾ): ಭಾರತದ ಅಗ್ರಮಾನ್ಯ ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಭಾನುವಾರ ಚೀನಾ ಮಾಸ್ಟರ್ಸ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ನೊಂದಿಗೆ ಅಭಿಯಾನ ಮುಗಿಸಿದರು.

ADVERTISEMENT

ಎಂಟನೇ ಕ್ರಮಾಂಕದ ಭಾರತದ ಆಟಗಾರರು ಪುರುಷರ ಡಬಲ್ಸ್‌ ಫೈನಲ್‌ನಲ್ಲಿ 19-21, 15-21ರಿಂದ ವಿಶ್ವದ ಅಗ್ರಮಾನ್ಯ ಜೋಡಿ ಕಿಮ್ ವಾನ್ ಹೋ ಮತ್ತು ಸಿಯೋ ಸೆಯುಂಗ್ ಜೇ ಅವರಿಗೆ ಮಣಿದರು. ದಕ್ಷಿಣ ಕೊರಿಯಾದ ಈ ಆಟಗಾರರು 45 ನಿಮಿಷದಲ್ಲಿ ನೇರ ಗೇಮ್‌ಗಳಿಂದ ಮೇಲುಗೈ ಸಾಧಿಸಿದರು. 

ಏಷ್ಯನ್ ಗೇಮ್ಸ್ ಚಾಂಪಿಯನ್‌ ಜೋಡಿ ಈ ಟೂರ್ನಿಯ ಮೂಲಕ ತಮ್ಮ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳುವ ಛಲದಲ್ಲಿದ್ದರು. ಕಳೆದ ತಿಂಗಳು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಕಂಚಿನ ಪದಕ ಮತ್ತು ಕಳೆದ ವಾರ ಹಾಂಗ್‌ಕಾಂಗ್‌ ಓಪನ್‌ನಲ್ಲಿ ರನ್ನರ್ಸ್‌ ಅಪ್‌ ಆಗಿದ್ದ ಸಾತ್ವಿಕ್‌–ಚಿರಾಗ್‌ ಇಲ್ಲಿ ಒಂದೂ ಗೇಮ್‌ ಬಿಟ್ಟುಕೊಡದೆ ಪ್ರಶಸ್ತಿ ಸುತ್ತು ತಲುಪಿ, ಭರವಸೆ ಮೂಡಿಸಿದ್ದರು. 

ಇತರ ಜೊತೆಗಾರರೊಂದಿಗೆ ಪ್ರಯೋಗ ಮಾಡಿ ಮತ್ತೆ ಈ ಋತುವಿನಲ್ಲಿ ಒಂದಾದ ಕಿಮ್‌ ಮತ್ತು ಸಿಯೋ ಅವರು 2025ರಲ್ಲಿ ಒಂಬತ್ತನೇ ಟೂರ್ನಿಯಲ್ಲಿ ಫೈನಲ್‌ ಸ್ಪರ್ಧಿಸಿದ್ದಾರೆ. ಆ ಪೈಕಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ, ಆಲ್ ಇಂಗ್ಲೆಂಡ್ ಮತ್ತು ಇಂಡೋನೇಷ್ಯಾ ಓಪನ್‌ ಸೇರಿದಂತೆ ಆರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಮೊದಲ ಗೇಮ್‌ನ ಆರಂಭದಲ್ಲಿ ಕೊರಿಯಾ ಆಟಗಾರರು 3–0 ಮುನ್ನಡೆ ಗಳಿಸಿದರು. ಚಿರಾಗ್‌ ಮತ್ತು ಸಾತ್ವಿಕ್‌ ಆಕರ್ಷಕ ಸ್ಮ್ಯಾಷ್‌ ಮೂಲಕ ಸತತ ಆರು ಅಂಕಗಳನ್ನು ಗಳಿಸಿ ಎದುರಾಳಿಗಳಿಗೆ ಒತ್ತಡ ಹೇರಿದರು. ಒಂದು ಹಂತದಲ್ಲಿ 14–7 ಮುನ್ನಡೆಯೊಂದಿಗೆ ಸಂಪೂರ್ಣ ಹಿಡಿತ ಸಾಧಿಸಿದ್ದರು. ಆದರೆ. ಭಾರತದ ಆಟಗಾರರು ಎಸಗಿದ ತಪ್ಪಿನ ಲಾಭ ‍ಪಡೆದ ಕೊರಿಯಾ ಜೋಡಿ ಮರಳಿ ಹಿಡಿತ ಸಾಧಿಸಿತು. ಕೊನೆಯ ಹಂತದಲ್ಲಿ ತುರುಸಿನ ಪೈಪೋಟಿ ನಡೆದರೂ ಎರಡು ಅಂಕಗಳಿಂದ  ಕಿಮ್‌ ಮತ್ತು ಸಿಯೋ ಮೇಲುಗೈ ಸಾಧಿಸಿದರು.

ಎರಡನೇ ಗೇಮ್‌ನ ಆರಂಭದಲ್ಲಿ ಸಮಬಲ ಹೋರಾಟ ಕಂಡುಬಂತು. ಒಂದು ಹಂತದಲ್ಲಿ 8–6 ಮುನ್ನಡೆಯೊಂದಿಗೆ ಭಾರತ ಆಟಗಾರರು ಪುಟಿದೇಳುವ ಪ್ರಯತ್ನ ಮಾಡಿದರು. ಆದರೆ, ಎದುರಾಳಿ ಸಿಯೋ ಅವರ ರಕ್ಷಣಾತ್ಮಕ ಆಟ ಪ್ರದರ್ಶಿಸಿ ತಮ್ಮ ತಂಡಕ್ಕೆ ಮೇಲುಗೈ ಒದಗಿಸಿದರು. ಸಾತ್ವಿಕ್‌–ಚಿರಾಗ್‌ ಅವರಿಗೆ ಚೇತರಿಸಿಕೊಳ್ಳಲು ಅವಕಾಶ ನೀಡದ ಎದುರಾಳಿ ಜೋಡಿ ಆಕರ್ಷಕ ಡ್ರಾಪ್‌ ಶಾಟ್‌ಗಳ ಮೂಲಕ ಮುನ್ನಡೆಯನ್ನು ವಿಸ್ತರಿಸಿಕೊಂಡು ಜಯ ಸಾಧಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.