ADVERTISEMENT

Commonwealth Games: ಬೆಳ್ಳಿ ಗೆದ್ದ ಸಂಕೇತ್‌ ಸರ್ಗರ್‌ಗೆ ಗಣ್ಯರಿಂದ ಅಭಿನಂದನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2022, 14:40 IST
Last Updated 30 ಜುಲೈ 2022, 14:40 IST
ಸಂಕೇತ್ ಮಹಾದೇವ್‌ ಸರ್ಗರ್‌ (ಚಿತ್ರ ಕೃಪೆ – ಭಾರತೀಯ ಕ್ರೀಡಾ ಪ್ರಾಧಿಕಾರದ ಟ್ವಿಟರ್ ಖಾತೆ)
ಸಂಕೇತ್ ಮಹಾದೇವ್‌ ಸರ್ಗರ್‌ (ಚಿತ್ರ ಕೃಪೆ – ಭಾರತೀಯ ಕ್ರೀಡಾ ಪ್ರಾಧಿಕಾರದ ಟ್ವಿಟರ್ ಖಾತೆ)   

ನವದೆಹಲಿ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕದ ಸಿಹಿ ನೀಡಿದ ಸಂಕೇತ್ ಮಹಾದೇವ್‌ ಸರ್ಗರ್‌ ಅವರಿಗೆ ಕೇಂದ್ರ ಸಚಿವರಾದ ಕಿರಣ್ ರಿಜಿಜು, ಪ್ರಲ್ಹಾದ್ ಜೋಶಿ, ಪೀಯೂಷ್ ಗೋಯಲ್ ಅಭಿನಂದನೆ ಸಲ್ಲಿಸಿದ್ದಾರೆ.

ಸಂಕೇತ್ ಮಹಾದೇವ್‌ ಸರ್ಗರ್‌ ಅವರು ಪುರುಷರ 55 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

‘ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕ ತಂದುಕೊಟ್ಟ ಸಂಕೇತ್ ಸರ್ಗರ್‌ಗೆ ಅಭಿನಂದನೆಗಳು’ ಎಂದು ಕಿರಣ್ ರಿಜಿಜು ‘ಕೂ’ ಮಾಡಿದ್ದಾರೆ.

‘ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಸಂದಿದೆ. ವೇಟ್‌ಲಿಫ್ಟರ್ ಸಂಕೇತ್ ಮಹಾದೇವ್‌ ಸರ್ಗರ್‌ ಬೆಳ್ಳಿ ಪದಕ ಗೆದ್ದಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಬಗ್ಗೆ ಭಾರತ ಹೆಮ್ಮೆಪಡುತ್ತದೆ’ ಎಂದು ಪ್ರಲ್ಹಾದ್ ಜೋಶಿ ‘ಕೂ’ ಮಾಡಿದ್ದಾರೆ.

‘ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಮಗೆ ಮೊದಲ ಪದಕ ದೊರೆತಿದೆ. ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಸಂಕೇತ್ ಸರ್ಗರ್‌ ಭಾರತದ ಭರವಸೆಯನ್ನು ಎತ್ತಿಹಿಡಿದಿದ್ದಾರೆ. ಇನ್ನಷ್ಟು ದೂರ ಕ್ರಮಿಸಬೇಕಿದೆ’ ಎಂದು ಪೀಯೂಷ್ ಗೋಯಲ್ ‘ಕೂ’ ಮಾಡಿದ್ದಾರೆ.

ಒಟ್ಟು 248 ಕೆಜಿ ಭಾರ (113 ಸ್ನ್ಯಾಚ್‌ + 135 ಕ್ಲೀನ್ ಮತ್ತು ಜರ್ಕ್‌) ಎತ್ತಿದ ಸಂಕೇತ್‌, ಚಿನ್ನದ ಪದಕದಿಂದ ಕೂದಲೆಳೆ ಅಂತರದಲ್ಲಿ ವಂಚಿತರಾದರು. 139 ಕೆಜಿ ಕ್ಲೀನ್ ಮತ್ತು ಜೆರ್ಕ್‌ ವಿಭಾಗದ ಭಾರ ಎತ್ತುವ ವೇಳೆ ಮೊಣಕೈ ನೋವಿನಿಂದ ಬಳಲಿದರು. ಹೀಗಾಗಿ ಅವರಿಗೆ ಕೇವಲ ಒಂದು ಕೆಜಿ ಅಂತರದಿಂದ ಅಗ್ರಸ್ಥಾನ ಕೈತಪ್ಪಿತು.

ಸಂಕೇತ್ ಮಹಾದೇವ್‌ ಸರ್ಗರ್‌ಬೆಳ್ಳಿ ಪದಕ ಗೆದ್ದ ಬೆನ್ನಲ್ಲೇ,ಕನ್ನಡಿಗ, ಉಡುಪಿ ಜಿಲ್ಲೆಯ ಕುಂದಾಪುರದಗುರುರಾಜ್ ಪೂಜಾರಿ ಅವರು ಪುರುಷರವೇಟ್ ಲಿಫ್ಟಿಂಗ್ ಕ್ರೀಡೆಯ 61 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ. 269 ಕೆಜಿ ಭಾರ ಎತ್ತುವ ಮೂಲ ಗುರುರಾಜ್ ಈ ಸಾಧನೆ ಮಾಡಿದ್ದಾರೆ. ಈ ವಿಭಾಗದಲ್ಲಿ ಮಲೇಷ್ಯಾದ ಕ್ರೀಡಾಪಟು ಚಿನ್ನ ಹಾಗೂ ಪಪುವಾ ನ್ಯೂಗಿನಿಯಾ ಕ್ರೀಡಾಪಟು ಬೆಳ್ಳಿ ಗೆದ್ದಿದ್ದಾರೆ.ಆಸ್ಟ್ರೇಲಿಯಾದಲ್ಲಿ 2018ರಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿಕೂಡ ಗುರುರಾಜ್ ಪೂಜಾರಿ ಬೆಳ್ಳಿ ಗೆದ್ದಿದ್ದರು. ಈ ಮೂಲಕ ಸತತವಾಗಿ ಎರಡನೇ ಬಾರಿಗೆ ಅವರು ಪದಕ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.