ADVERTISEMENT

ವಿಶ್ವಕಪ್ ಹಾಕಿ ಟೂರ್ನಿ: ಭರವಸೆಯಲ್ಲಿ ಭಾರತ ತಂಡ

ಪಿಟಿಐ
Published 31 ಮಾರ್ಚ್ 2022, 14:18 IST
Last Updated 31 ಮಾರ್ಚ್ 2022, 14:18 IST
ಸಲೀಮಾ ಟೆಟೆ
ಸಲೀಮಾ ಟೆಟೆ   

ಪೊಚೆಫ್‌ಸ್ಟ್ರೂಮ್: ಮೂವರು ಒಲಿಂಪಿಯನ್ನರ ಬಲ ಹೊಂದಿರುವ ಭಾರತ ತಂಡ ಮಹಿಳೆಯರ ಎಫ್‌ಐಎಚ್ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಸಾಧನೆಯ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿಯಲಿದೆ.

ಶುಕ್ರವಾರ ಆರಂಭವಾಗಲಿರುವ ಟೂರ್ನಿಯಲ್ಲಿ ಭಾರತ ಮೊದಲ ಪಂದ್ಯ ಶನಿವಾರ ನಡೆಯಲಿದೆ. ‘ಡಿ’ ಗುಂಪಿನ ಹಣಾಹಣಿಯಲ್ಲಿ ತಂಡ ವೇಲ್ಸ್ ವಿರುದ್ಧ ಸೆಣಸಲಿದೆ. ಭಾನುವಾರದ ಪಂದ್ಯದಲ್ಲಿ ಜರ್ಮನಿ ವಿರುದ್ಧ ಆಡಲಿದೆ. ನಾಯಕಿ ಸಲಿಮಾ ಟೆಟೆ, ಮಿಡ್‌ಫೀಲ್ಡರ್ ಶರ್ಮಿಳಾ ದೇವಿ ಮತ್ತು ಸ್ಟ್ರೈಕರ್ ಲಾಲ್‌ರೆಮ್ಸಿಯಾಮಿ ಅವರು ಒಲಿಂಪಿಕ್ಸ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಆದ್ದರಿಂದ ಅವರ ಮೇಲೆ ನಿರೀಕ್ಷೆ ಮೂಡಿದೆ.

ಗುಂಪು ಹಂತದಲ್ಲಿ ಭಾರತ ಮೂರು ಪಂದ್ಯಗಳಲ್ಲಿ ಆಡಲಿದೆ. ಕೊನೆಯ ಪಂದ್ಯದಲ್ಲಿ ತಂಡಕ್ಕೆ ಮಲೇಷ್ಯಾ ಎದುರಾಳಿ. ಕ್ವಾರ್ಟರ್ ಫೈನಲ್ ಪಂದ್ಯಗಳು ಏಪ್ರಿಲ್‌ 8ರಿಂದ ನಡೆಯಲಿವೆ.

ADVERTISEMENT

20 ವರ್ಷದ ಸಲಿಮಾ ಟೆಟೆ ಭಾರತ ತಂಡದ ಮಿಡ್‌ಫೀಲ್ಡ್ ವಿಭಾಗದ ಶಕ್ತಿಯಾಗಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಅವರ ಸಾಮರ್ಥ್ಯ ಪ್ರಕಟಗೊಂಡಿದೆ. ಒಲಿಂಪಿಕ್ಸ್‌ನಲ್ಲಿ ಆಡಿದ ಮಿಜೋರಾಂನ ಮೊದಲ ಆಟಗಾರ್ತಿಯಾಗಿರುವ ಲಾಲ್‌ರೆಮ್ಸಿಯಾಮಿ ಅವರು ಚುರುಕಿನ ಆಟಕ್ಕೆ ಹೆಸರು ಗಳಿಸಿದ್ದಾರೆ. 20 ವರ್ಷದ ಶರ್ಮಿಳಾ ವೇಗದ ಡ್ರಿಬ್ಲಿಂಗ್ ಮೂಲಕ ಎದುರಾಳಿಗಳ ಪಾಳಯದಲ್ಲಿ ಆತಂಕ ಸೃಷ್ಟಿಸಬಲ್ಲರು.

ಉಪನಾಯಕಿ ಇಶಿಕಾ ಚೌಧರಿ, ಗೋಲ್‌ಕೀಪರ್ ಬಿಚು ದೇವಿ ಖಾರಿಬಂ, ಡಿಫೆಂಡರ್ ಅಕ್ಷತಾ ಅಬಾಸೊ ದೇಖಲೆ ಮತ್ತು ಸಂಗೀತಾ ಕುಮಾರಿ ಕೂಡ ಭರವಸೆ ಮೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.