ಮೈಸೂರು: ಅಖಾಡದಲ್ಲಿ ಮದಗಜಗಳಂತೆ ಹೋರಾಡಿ, ಆಕ್ರಮಣಕಾರಿ ಪಟ್ಟುಗಳಿಂದ ಪ್ರಾಬಲ್ಯ ಮೆರೆದ ಬೆಳಗಾವಿಯ ಪೈಲ್ವಾನ್ ಕಾಮೇಶ್ ಪಾಟೀಲ ಹಾಗೂ ಉತ್ತರ ಕನ್ನಡದ ಪೈಲ್ವಾನ್ ಮಂಜುನಾಥ ಕ್ರಮವಾಗಿ ‘ದಸರಾ ಕಂಠೀರವ’ ಹಾಗೂ ‘ದಸರಾ ಕೇಸರಿ’ ಪ್ರಶಸ್ತಿ ಗೆದ್ದರು.
ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಅಖಾಡದಲ್ಲಿ ಭಾನುವಾರ ನಡೆದ ದಸರಾ ಕುಸ್ತಿ ಸ್ಪರ್ಧೆಯ 86 ಕೆ.ಜಿ ವಿಭಾಗದ ಹಣಾಹಣಿಯಲ್ಲಿ ಕಾಮೇಶ್ ಅವರು ಭದ್ರಾವತಿಯ ಪೈಲ್ವಾನ್ ಕಿರಣ್ ಅವರನ್ನು 2–1ರಿಂದ ಮಣಿಸಿದರು.
ಮೊದಲ 20 ನಿಮಿಷಗಳ ಹೋರಾಟದಲ್ಲಿ ಇಬ್ಬರೂ ಸಮಬಲ ಪ್ರದರ್ಶಿಸಿದರು. ಹೆಚ್ಚುವರಿಯಾಗಿ ನೀಡಿದ 5 ನಿಮಿಷದಲ್ಲಿ ಪಾರಮ್ಯ ಮೆರೆದ ಕಾಮೇಶ್ ರೋಚಕ ಜಯ ಸಾಧಿಸಿದರು.
ದಸರಾ ಕೇಸರಿ: 74–86 ಕೆ.ಜಿ ವಿಭಾಗದಲ್ಲಿ ಉತ್ತರ ಕನ್ನಡದ ಮಂಜುನಾಥ ಅವರು ಬೆಳಗಾವಿಯ ಪರಮಾನಂದ ಅವರನ್ನು 10 ನಿಮಿಷದಲ್ಲಿ 4–2 ಅಂಕಗಳ ಅಂತರದಲ್ಲಿ ಸೋಲಿಸಿದರು.
‘ಮೈಸೂರು ದಸರಾ ಕುಮಾರ’ ಪ್ರಶಸ್ತಿಗೆ (86 ಕೆ.ಜಿ) ನಡೆದ 30 ನಿಮಿಷಗಳ ಹೋರಾಟದಲ್ಲಿ ಮೈಸೂರು ವಿಶ್ವವಿದ್ಯಾಲಯದ ಚೇತನ್ ಅವರು ನಗರದ ನಜರ್‌ಬಾದ್‌ನ ಚೇತನ್ ಅವರನ್ನು 22–3ರಿಂದ ಮಣಿಸಿದರು.
‘ದಸರಾ ಕಿಶೋರ’ ಪ್ರಶಸ್ತಿಯ 57–65 ಕೆ.ಜಿ ವಿಭಾಗದಲ್ಲಿ ದಾವಣಗೆರೆಯ ಕೊರವರ ಸಂಜೀವ ಅವರು ಬಾಗಲಕೋಟೆಯ ಕುಮಾರ ನಾಗಲೂರು ವಿರುದ್ಧ 12–0 ಪಾಯಿಂಟ್‌ಗಳಿಂದ ಗೆದ್ದರು.
ಮಹಿಳೆಯರ 57– 76 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಬೆಳಗಾವಿ ಸ್ವಾತಿ ಪಾಟೀಲ ಅವರು ಹಳಿಯಾಳದ ಪ್ರತೀಕ್ಷಾ ಅವರನ್ನು 6–2 ಪಾಯಿಂಟ್‌ಗಳಿಂದ ಸೋಲಿಸಿ ‘ದಸರಾ ಕಿಶೋರಿ’ ಆದರು.
ದಾವಣಗೆರೆಯ ಆರ್.ಪ್ರಜ್ವಲ್– ದಸರಾ ಬಾಲ ಕಿಶೋರ, ಅರ್ಜುನ್ ಕೊರವರ– ಬಾಲ ಕೇಸರಿ, ಧಾರವಾಡದ ಚೇತನ್– ಬಾಲ ಕುಮಾರ್, ದಾವಣಗೆರೆಯ ಬನ್ನೂರಿನ ಜಾನ್ಹವಿ– ಬಾಲ ಕಿಶೋರಿ ಪ್ರಶಸ್ತಿ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.