ADVERTISEMENT

ಡೇವಿಸ್ ಕಪ್‌: ಭಾರತಕ್ಕೆ ಪಾಕ್ ಎದುರಾಳಿ

ಪಿಟಿಐ
Published 21 ಸೆಪ್ಟೆಂಬರ್ 2023, 14:35 IST
Last Updated 21 ಸೆಪ್ಟೆಂಬರ್ 2023, 14:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತವು ಡೇವಿಸ್ ಕಪ್ ವಿಶ್ವ ಒಂದನೇ ಗುಂಪಿನ ಪ್ಲೇ ಆಫ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಅದೇ ದೇಶದಲ್ಲಿ ಎದುರಿಸಲಿದೆ. ಆದರೆ ಈ ಬಾರಿ ತಟಸ್ಥ ತಾಣಕ್ಕೆ ಈ ಪಂದ್ಯವನ್ನು ಸ್ಥಳಾಂತರಿಸಲು ಯಾವುದೇ ಕಾರಣಕ್ಕೆ ಒಪ್ಪುವುದಿಲ್ಲ ಎಂದು ಪಾಕಿಸ್ತಾನ ಟೆನಿಸ್‌ ಫೆಡರೇಷನ್ (ಪಿಟಿಎಫ್‌) ಸ್ಪಷ್ಟಮಾತುಗಳಲ್ಲಿ ಹೇಳಿದೆ.

ಬುಧವಾರ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್ ಡೇವಿಸ್‌ ಕಪ್‌ ‘ಡ್ರಾ’ಗಳನ್ನು ಅಂತಿಮಗೊಳಿಸಿದ್ದು, ಇದರಂತೆ ಏಷ್ಯಾದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮತ್ತೆ ಮುಖಾಮುಖಿ ಆಗಿದ್ದಾರೆ.

2019ರಲ್ಲಿ ಕೊನೆಯ ಬಾರಿ ಭಾರತ– ಪಾಕ್ ತಂಡಗಳು ಮುಖಾಮುಖಿ ಆಗಿದ್ದವು. ಭಾರತ, ಪಾಕಿಸ್ತಾನದಲ್ಲಿ ಪಂದ್ಯವನ್ನು ಆಡಬೇಕಾಗಿತ್ತು. ಆದರೆ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರಿಂದ ಕೊನೆಗೆ ಏಷ್ಯಾ– ಒಷಾನಿಯಾ ಒಂದನೇ ಗುಂಪಿನ ಈ ಪಂದ್ಯವನ್ನು ಕಜಕಸ್ತಾನಕ್ಕೆ ಸ್ಥಳಾಂತರಿಸಲಾಗಿತ್ತು.

ADVERTISEMENT

ಇದನ್ನು ಪ್ರತಿಭಟಿಸಿ ಪಾಕಿಸ್ತಾನದ ಪ್ರಮುಖ ಆಟಗಾರರಾದ ಐಸಾಮ್–ಉಲ್–ಹಕ್ ಖುರೇಷಿ ಮತ್ತು ಅಖೀಲ್ ಖಾನ್ ಅವರು ಪಂದ್ಯದಿಂದ ಹಿಂದೆ ಸರಿದಿದ್ದರು. ಅವರ ಬದಲು ಮೊಹಮ್ಮದ್ ಶೋಯೆಬ್, ಹುಸೈಫಾ ಅಬ್ದುಲ್ ರೆಹಮಾನ್ ಮತ್ತು ಯೂಸಫ್ ಖಲೀಲ್ ಆಡಿದ್ದರು. ಭಾರತ, ದುರ್ಬಲಗೊಂಡ ಎದುರಾಳಿ ತಂಡವನ್ನು 4–0ಯಿಂದ ಸೋಲಿಸಿತ್ತು. ಇಡೀ ಪಂದ್ಯದಲ್ಲಿ ಪಾಕ್‌ ಏಳು ಗೇಮ್‌ಗಳನ್ನು ಮಾತ್ರ ಪಡೆದಿತ್ತು.

ಈ ಬಾರಿ ಭಾರತ ತಂಡ ತಮ್ಮ ದೇಶಕ್ಕೆ ಪ್ರಯಾಣಿಸಲಿದೆ ಎಂಬ ವಿಶ್ವಾಸವನ್ನು ಪಾಕಿಸ್ತಾನದ ಹಿರಿಯ ಆಟಗಾರ ಅಖೀಲ್ ಖಾನ್ ವ್ಯಕ್ತಪಡಿಸಿದ್ದಾರೆ.

ಹೋದ ವಾರ ಇಸ್ಲಾಮಾಬಾದ್‌ನ ಹುಲ್ಲಿನಂಕಣದಲ್ಲಿ ನಡೆದ ಹಣಾಹಣಿಯಲ್ಲಿ ಪಾಕಿಸ್ತಾನ 4–0 ಯಿಂದ ಇಂಡೊನೇಷ್ಯಾ ತಂಡವನ್ನು ಸದೆಬಡಿದಿತ್ತು. ಭಾರತ, ಇನ್ನೊಂದೆಡೆ ಲಖನೌದಲ್ಲಿ ಮೊರೊಕ್ಕೊ ತಂಡವನ್ನು 4–1 ರಿಂದ ಸೋಲಿಸಿತ್ತು.

ಭಾರತ ವಿರುದ್ಧದ ಪಂದ್ಯವೂ ಹುಲ್ಲಿನ ಅಂಕಣದಲ್ಲಿ ನಡೆಯಲಿದೆ ಎಂದು ಪಿಟಿಎಫ್‌ ಅಧ್ಯಕ್ಷ ಸಲೀಮ್‌ ಸೈಫುಲ್ಲಾ ಖಾನ್ ತಿಳಿಸಿದ್ದಾರೆ.

‘ಅವರು (ಭಾರತ ತಂಡ) ಪಾಕಿಸ್ತಾನಕ್ಕೆ ಬರಬೇಕು. ಪಾಕಿಸ್ತಾನಕ್ಕೆ ಅವರು ಬರದೇ ಇರುವುದು ಸರಿಯಲ್ಲ. ಸ್ಟೇಡಿಯಂ ಪಕ್ಕದಲ್ಲೇ ಒಳ್ಳೆಯ ಹೋಟೆಲ್ ಇದೆ. ಭಾರತ ತಂಡವು ಆಡಲು ಬಂದಲ್ಲಿ ನಾವು ಒಳ್ಳೆಯ ನೆರೆಹೊರೆಯವರು ಎಂಬ ಉತ್ತಮ ಸಂದೇಶ ರವಾನೆಯಾಗುತ್ತದೆ’ ಎಂದು ಸೈಫುಲ್ಲಾ ಪಿಟಿಐಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.