ADVERTISEMENT

ವಿಶ್ವ ಬಾಕ್ಸಿಂಗ್‌: ಫೈನಲ್‌ ಮೇಲೆ ಚಿತ್ತ

ದೀಪಕ್‌, ನಿಶಾಂತ್‌ ಇಂದು ಕಣಕ್ಕೆ

ಪಿಟಿಐ
Published 11 ಮೇ 2023, 19:34 IST
Last Updated 11 ಮೇ 2023, 19:34 IST
ನಿಶಾಂತ್‌ ದೇವ್
ನಿಶಾಂತ್‌ ದೇವ್   

ತಾಷ್ಕೆಂಟ್‌: ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಭಾರತದ ದೀಪಕ್ ಬೊರಿಯಾ, ಮೊಹಮ್ಮದ್ ಹುಸಾಮುದ್ದೀನ್ ಮತ್ತು ನಿಶಾಂತ್ ದೇವ್‌ ಅವರು ಶುಕ್ರವಾರ ಕಣಕ್ಕಿಳಿಯಲಿದ್ದು, ಫೈನಲ್‌ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡುವ ವಿಶ್ವಾಸದಲ್ಲಿದ್ದಾರೆ.

ಬುಧವಾರ ಸೆಮಿಫೈನಲ್‌ ಪ್ರವೇಶಿಸಿದಾಗಲೇ ಈ ಮೂವರು ಪದಕ ಖಚಿತಪಡಿಸಿಕೊಂಡಿದ್ದರು. ಇನ್ನೊಂದು ಹೆಜ್ಜೆ ಮುಂದಿಟ್ಟು, ಚಿನ್ನ ಅಥವಾ ಬೆಳ್ಳಿ ಜಯಿಸಲು ಪ್ರಯತ್ನಿಸಲಿದ್ದಾರೆ. 2019ರ ಚಾಂಪಿಯನ್‌ಷಿಪ್‌ನಲ್ಲಿ ಅಮಿತ್‌ ಪಂಘಲ್‌ ಅವರು ಫೈನಲ್‌ ಪ್ರವೇಶಿಸಿದ್ದು ಭಾರತದ ಬಾಕ್ಸರ್‌ ಒಬ್ಬರ ಶ್ರೇಷ್ಠ ಸಾಧನೆ ಆಗಿದೆ.

ಶುಕ್ರವಾರ ನಡೆಯಲಿರುವ 51 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ದೀಪಕ್, ಫ್ರಾನ್ಸ್‌ನ ಬಿಲಾಲ ಬೆನ್ನಾಮಾ ಎದುರು ಕಣಕ್ಕಿಳಿಯುವರು. 2022ರ ಯುರೋಪಿಯನ್‌ ಚಾಂಪಿಯನ್‌ ಅಗಿರುವ ಬೆನ್ನಾಮಾ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಈ ಹಿಂದೆ ಎರಡು ಸಲ ಕಂಚು ಜಯಿಸಿದ್ದರು. ಅವರು ಕೂಡಾ ಈ ಬಾರಿ ಫೈನಲ್‌ ಮೇಲೆ ಕಣ್ಣಿಟ್ಟಿದ್ದಾರೆ.

ADVERTISEMENT

25 ವರ್ಷದ ದೀಪಕ್‌, 2019ರ ಏಷ್ಯನ್ ಚಾಂಪಿಯನ್‌ಷಿಪ್‌ ಮತ್ತು 2021ರ ಸ್ಟ್ರಾಂಜಾ ಮೆಮೋರಿಯಲ್‌ ಟೂರ್ನಿಯಲ್ಲಿ ಬೆಳ್ಳಿ ಗೆದ್ದಿದ್ದರು. ಈ ಚಾಂಪಿಯನ್‌ಷಿಪ್‌ನಲ್ಲಿ ಅವರು ಟೋಕಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಕಜಕಸ್ತಾನದ ಸಕೇನ್ ಬಿಬೊಸಿನೊವ್‌ ಅವರಿಗೆ ಆಘಾತ ನೀಡಿದ್ದರು.

ಹುಸಾಮುದ್ದೀನ್‌ ಅವರು 57 ಕೆ.ಜಿ. ವಿಭಾಗದ ನಾಲ್ಕರಘಟ್ಟದ ಹಣಾಹಣಿಯಲ್ಲಿ ಕ್ಯೂಬಾದ ಸೈದೆಲ್ ಹೊರ್ಟಾ ಅವರ ಸವಾಲು ಎದುರಿಸುವರು. ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ಹಾಗೂ ಏಷ್ಯನ್‌ ಚಾಂಪಿಯನ್‌ಷಿಪ್‌ನ ಬೆಳ್ಳಿ ಪದಕ ವಿಜೇತ ಕಜಕಸ್ತಾನದ ಸೆರಿಕ್ ತೆಮಿರ್ಜನೊವ್‌ ಅವರನ್ನು ಮಣಿಸಿದ್ದ ಹೊರ್ಟಾ, ಭಾರತದ ಬಾಕ್ಸರ್‌ಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ.

ನಿಶಾಂತ್ ಅವರು 71 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ 2022ರ ಏಷ್ಯನ್ ಚಾಂಪಿಯನ್‌, ಮತ್ತು 2018ರ ಏಷ್ಯನ್ ಗೇಮ್ಸ್‌ ಬೆಳ್ಳಿ ಪದಕ ವಿಜೇತ ಕಜಕಸ್ತಾನದ ಅಸ್ಲನ್‌ಬೆಕ್‌ ಶಿಂಬರ್ಜೆನೊವ್ ಅವರನ್ನು ಎದುರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.