ಭಾರತ ಮಹಿಳಾ ಹಾಕಿ ತಂಡದ ಆಟಗಾರ್ತಿ ದೀಪಿಕಾ
–ಪಿಟಿಐ ಚಿತ್ರ
ಭುವನೇಶ್ವರ್: ಡ್ರ್ಯಾಗ್ ಫ್ಲಿಕರ್ ದೀಪಿಕಾ ಅವರು ಗಳಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ ಮಹಿಳಾ ಹಾಕಿ ತಂಡವು ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಶನಿವಾರ ಜರ್ಮನಿಯ ವಿರುದ್ಧ ಜಯಿಸಿತು.
ಇಲ್ಲಿ ನಡೆದ ರಿಟರ್ನ್ ಲೆಗ್ ಪಂದ್ಯದ 12ನೇ ನಿಮಿಷದಲ್ಲಿ ದೊರಕಿದ ಪೆನಾಲ್ಟಿ ಕಾರ್ನರ್‌ನಲ್ಲಿ ದೀಪಿಕಾ ಫ್ಲಿಕ್ ಮಾಡಿದ ರಭಸಕ್ಕೆ ಗೋಲು ಒಲಿಯಿತು. ತಂಡವು 1–0ಯಿಂದ ಜರ್ಮನಿಯನ್ನು ಮಣಿಸಿತು.
ಶುಕ್ರವಾರ ನಡೆದಿದ್ದ ಮೊದಲ ಲೆಗ್‌ನಲ್ಲಿ ಭಾರತವು 0–4ರಿಂದ ಜರ್ಮನಿಯ ವಿರುದ್ಧ ಭಾರತ ತಂಡವು ಸೋತಿತ್ತು. ಇದೇ 24ರಂದು ನಡೆಯುವ ಪಂದ್ಯದಲ್ಲಿ ಆತಿಥೇಯರು ನೆದರ್ಲೆಂಡ್ಸ್ ಎದುರು ಆಡಲಿದೆ.
ಜರ್ಮನಿಯ ಎದುರಿನ ಪಂದ್ಯದಲ್ಲಿ ಭಾರತದ ವನಿತೆಯರು ಆರಂಭದಿಂದಲೇ ಜರ್ಮನಿ ಪಡೆಯ ರಕ್ಷಣಾ ವಿಭಾಗಕ್ಕೆ ಕಠಿಣ ಸವಾಲೊಡ್ಡಿದರು. ನಾಯಕಿ ಸಲೀಮಾ ಟೆಟೆ ಆರಂಭಿಕ ಹಂತದಲ್ಲಿಯೇ ಸುನಿಲಿಟಾ ಟೊಪೊ ಅವರಿಂದ ಪಾಸ್ ಪಡೆದು ಸ್ನ್ಯಾಪ್ ಶಾಟ್ ಪ್ರಯೋಗಿಸಿದರು. ಆದರೆ ಅದು ಗೋಲುಪೆಟ್ಟಿಗೆಯ ಎಡದಿಂದ ಹಾದುಹೋಯಿತು. ಜರ್ಮನಿ ಗೋಲ್‌ಕೀಪರ್ ಫೀಂಜಾ ಸ್ಟಾರ್ಕ್ ಅವರು ಕೂಡ ಹೆಚ್ಚು ಶ್ರಮವಹಿಸದೇ ನಿಂತರು.
ಆದರೆ 12ನೇ ನಿಮಿಷದಲ್ಲಿ ಜರ್ಮನಿ ತಂಡದವರ ಚಿತ್ತ ಕಲಕುವಲ್ಲಿ ದೀಪಿಕಾ ಯಶಸ್ವಿಯಾದರು. ಅಮೋಘ ಡ್ರಿಬ್ಲಿಂಗ್ ಕೌಶಲ ತೋರಿದ ನೇಹಾ ಅವರಿಂದಾಗಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಲಭಿಸಿತು. ದೀಪಿಕಾ ಅವರು ಡ್ರ್ಯಾಗ್ ಫ್ಲಿಕ್ ಮೂಲಕ ಚೆಂಡನ್ನು ಗುರಿಮುಟ್ಟಿಸುವಲ್ಲಿ ಯಾವುದೇ ತಪ್ಪೆಸಗಲಿಲ್ಲ. ಅಂತರರಾಷ್ಟ್ರೀಯ ಹಾಕಿ ಯಲ್ಲಿ ತಮ್ಮ 26ನೇ ಗೋಲು ಹೊಡೆದ ದೀಪಿಕಾ ಜೊತೆಗೆ ತಂಡದ ಆಟಗಾರ್ತಿಯರು ಸಂಭ್ರಮಿಸಿದರು. ನಂತರದ ಆಟದಲ್ಲಿ ಉಭಯ ತಂಡಗಳ ಆಟಗಾರ್ತಿಯರು ಜಿದ್ದಾಜಿದ್ದಿಯ ಆಟವಾಡಿದರು. ಆದರೆ ಉಭಯ ತಂಡಗಳಿಗೂ ಗೋಲು ಒಲಿಯಲಿಲ್ಲ.
53ನೇ ನಿಇಷದಲ್ಲಿ ಜರ್ಮನಿಯ ಆಟಗಾರ್ತಿ ಲಿನಾ ಮಿಚೀಲ್ ಅವರು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಿನಲ್ಲಿ ಪರಿವರ್ತಿಸುವಲ್ಲಿ ವಿಫಲರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.