ADVERTISEMENT

ಹಾಕಿ ಇಂಡಿಯಾಗೆ ಆಡಳಿತ ಸಮಿತಿ ಕಣ್ಗಾವಲು

ಐಒಎ ಅಧ್ಯಕ್ಷ ನರಿಂದರ್ ಬಾತ್ರಾ ಪ್ರಕರಣದಲ್ಲಿ ತೀರ್ಪು: ಆಜೀವ ಸದಸ್ಯತ್ವ ಅಮಾನ್ಯ

ಪಿಟಿಐ
Published 25 ಮೇ 2022, 16:51 IST
Last Updated 25 ಮೇ 2022, 16:51 IST
ನರಿಂದರ್ ಬಾತ್ರಾ
ನರಿಂದರ್ ಬಾತ್ರಾ   

ನವದೆಹಲಿ: ರಾಷ್ಟ್ರೀಯ ಕ್ರೀಡಾ ನೀತಿಯನ್ನು ಗಾಳಿಗೆ ತೂರಿದ ಆರೋಪದ ಹಿನ್ನೆಲೆಯಲ್ಲಿ ಹಾಕಿ ಇಂಡಿಯಾವನ್ನು ಆಡಳಿತ ಸಮಿತಿಯ ಕಣ್ಗಾವಲಿನಲ್ಲಿರಿಸಲು ದೆಹಲಿ ಹೈಕೋರ್ಟ್ ಆದೇಶಹೊರಡಿಸಿದೆ.

ಸಂಸ್ಥೆಯ ದೈನಂದಿನ ಕಾರ್ಯಗಳನ್ನು ಮೂವರ ಸದಸ್ಯರನ್ನು ಒಳಗೊಂಡ ಸಮಿತಿ ನೋಡಿಕೊಳ್ಳಬೇಕು ಎಂದು ಸೂಚಿಸಿದೆ. ಸುಪ್ರಿಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಆರ್ ದಾವೆ, ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ ಖುರೇಷಿ ಮತ್ತು ಭಾರತ ಹಾಕಿ ತಂಡದ ಮಾಜಿ ನಾಯಕ ಜಫರ್ ಇಕ್ಬಾಲ್ ಸಮಿತಿಯಲ್ಲಿರುವರು.

ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಅಧ್ಯಕ್ಷ ನರಿಂದರ್ ಬಾತ್ರಾ ಅವರನ್ನು ಹಾಕಿ ಇಂಡಿಯಾದ ಆಜೀವ ಸದಸ್ಯರನ್ನಾಗಿ ನೇಮಕ ಮಾಡಿರುವುದರನ್ನು ಪ್ರಶ್ನಿಸಿ 1975ರ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತ ಹಾಕಿ ತಂಡದಲ್ಲಿದ್ದ ಅಸ್ಲಾಂ ಶೇರ್ ಖಾನ್ ನ್ಯಾಯಾಲಯದಲ್ಲಿ ದಾವೆಹೂಡಿದ್ದರು.

ADVERTISEMENT

ವಾದ–ಪ್ರತಿವಾದ ಆಲಿಸಿದ ಹೈಕೋರ್ಟ್ ಬುಧವಾರ ತೀರ್ಪು ನೀಡಿದೆ. ನರಿಂದರ್ ಬಾತ್ರಾ ಅವರ ಆಜೀವ ಸದಸ್ಯತ್ವ ಅಮಾನ್ಯ ಎಂದು ನ್ಯಾಯಾಲಯ ತಿಳಿಸಿತ್ತು. ಎಲೆನಾ ನಾರ್ಮನ್ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ನೇಮಕ ಮಾಡಿರುವುದು ಕೂಡ ತಪ್ಪು ಎಂದು ಅಭಿಪ್ರಾಯಪಟ್ಟಿದೆ. ತೀರ್ಪಿನಿಂದಾಗಿ ಬಾತ್ರಾ ಅವರ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಸದಸ್ಯತ್ವಕ್ಕೂ ಕುತ್ತು ಬರಲಿದೆ.

ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ಗೆ (ಎಐಎಫ್‌ಎಫ್‌) ಸಂಬಂಧಿಸಿದ ಪ್ರಕರಣವನ್ನು ಉಲ್ಲೇಖಿಸಿರುವ ಹೈಕೋರ್ಟ್ ಪೀಠ ‘ಮತ್ತೊಂದು ರಾಷ್ಟ್ರೀಯ ಕ್ರೀಡಾ ಫೆಡರೇಷನ್ ಆಗಿರುವ ಎಐಎಫ್‌ಎಫ್‌ಗೆ ಇದೇ ತಿಂಗಳ 18ರಂದು ಸುಪ್ರೀಂ ಕೋರ್ಟ್ ಸಿಒಎ ನೇಮಕ ಮಾಡಿದೆ. ಹೀಗಾಗಿ ಇದನ್ನೊಂದು ಸಾರ್ವಜನಿಕ ಹಿತಾಸಕ್ತಿಯ ಪ್ರಕರಣವೆಂದು ಪರಿಗಣಿಸಲಾಗಿದೆ’ ಎಂದು ತಿಳಿಸಿದೆ. ಪೀಠದಲ್ಲಿ ನಜ್ಮಿ ವಜೀರಿ ಮತ್ತು ಸ್ವರಾನಾ ಕಂಠ ಶರ್ಮಾ ಇದ್ದರು.

ಕ್ರೀಡಾ ನೀತಿಯನ್ನು ಅನುಸರಿಸದ ಕ್ರೀಡಾ ಫೆಡರೇಷನ್‌ಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡಬಾರದು. ಅಕ್ರಮವಾಗಿ ಮಾಡಿರುವ ನೇಮಕಾತಿಗಳನ್ನೆಲ್ಲ ರದ್ದು ಮಾಡಬೇಕು ಪೀಠ ಸೂಚಿಸಿದೆ.

ನರಿಂದರ್‌ ಬಾತ್ರಾ ವಜಾ; ಖನ್ನಾಗೆ ಸ್ಥಾನ
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಐಒಎ ಅಧ್ಯಕ್ಷ ನರಿಂದರ್ ಬಾತ್ರಾ ಅವರನ್ನು ಆ ಸ್ಥಾನದಿಂದ ವಜಾ ಮಾಡಲಾಗಿದೆ. ಉಪಾಧ್ಯಕ್ಷ ಅನಿಲ್ ಖನ್ನಾ ಅವರನ್ನು ಹಂಗಾಮಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಹಾಕಿ ಇಂಡಿಯಾದ ಪ್ರತಿನಿಧಿಯಾಗಿ ನರಿಂದರ್ ಬಾತ್ರಾ ಅವರು 2017ರಲ್ಲಿ ಐಒಎ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಜಯ ಗಳಿಸಿದ್ದರು. ಅವರನ್ನು ಹಾಕಿ ಇಂಡಿಯಾದ ಆಜೀವ ಸದಸ್ಯರನ್ನಾಗಿ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಅಸ್ಲಾಂ ಶೇರ್ ಖಾನ್ ನ್ಯಾಯಾಲಯದಲ್ಲಿ ದಾವೆ
ಹೂಡಿದ್ದರು.

ತೀರ್ಪು ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ಬಾತ್ರಾ ಇನ್ನೊಂದು ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ. ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನಲ್ಲಿ ಹೆಚ್ಚು ಕಾಲ ಕಾರ್ಯನಿರ್ವಹಿಸಲು ಬಯಸುವುದಾಗಿ ಅವರು ತಿಳಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆಯಬೇಕಾಗಿದ್ದ ಐಒಎ ಚುನಾವಣೆಯನ್ನು ಮತ್ತೊಂದು ಪ್ರಕರಣದ ವಿಚಾರಣೆ ಬಾಕಿ ಇರುವುದರಿಂದ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.