ಬಟುಮಿ(ಜಾರ್ಜಿಯಾ): ಫಿಡೆ ಮಹಿಳಾ ಚೆಸ್ ವಿಶ್ವಕಪ್ ಫೈನಲ್ ಪಂದ್ಯ ಗೆಲ್ಲುವ ಮೂಲಕ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿರುವ 19 ವರ್ಷದ ದಿವ್ಯಾ ದೇಶಮುಖ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿವೆ.
ದಿವ್ಯಾ ದೇಶಮುಖ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ.
ದಿವ್ಯಾ ದೇಶಮುಖ್‌ಗೆ ಅಭಿನಂದನೆ ಸಲ್ಲಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಫಿಡೆ ಮಹಿಳಾ ಚೆಸ್ ವಿಶ್ವಕಪ್ –2025ರಲ್ಲಿ ಗೆಲುವು ಸಾಧಿಸಿರುವ ದಿವ್ಯಾ ದೇಶಮುಖ್ ಅವರಿಗೆ ಅಭಿನಂದನೆಗಳು. ಅವರ ಈ ಸಾಧನೆಯು ಯುವ ಜನಾಂಗಕ್ಕೆ ಮಾದರಿಯಾಗಿದೆ. ಐತಿಹಾಸಿಕ ಫೈನಲ್ ಪಂದ್ಯದಲ್ಲಿದ್ದ ಇಬ್ಬರು ಕೂಡ ಭಾರತೀಯ ಆಟಗಾರ್ತಿಯರಾಗಿದ್ದರು. ಟೂರ್ನಿಯಲ್ಲಿ ಅದ್ಭುತ ಸಾಧನೆ ತೋರಿರುವ ಕೋನೇರು ಹಂಪಿ ಅವರಿಗೆ ಕೂಡ ಅಭಿನಂದನೆಗಳು. ಇಬ್ಬರಿಗೂ ಒಳ್ಳೆಯದಾಗಲಿ’ ಎಂದಿದ್ದಾರೆ.
‘ಕೇವಲ 19 ವರ್ಷಕ್ಕೆ ಪ್ರತಿಷ್ಠಿತ ಫಿಡೆ ಮಹಿಳಾ ಚೆಸ್ ವಿಶ್ವಕಪ್‌ನ ಚಾಂಪಿಯನ್ ಆಗಿರುವ ದಿವ್ಯಾ ದೇಶಮುಖ್ ಅವರಿಗೆ ಅಭಿನಂದನೆಗಳು. ಈ ಸಾಧನೆ ಮಾಡಿರುವ ಮೊದಲ ಭಾರತೀಯ ನಾರಿ ಅವರಾಗಿದ್ದಾರೆ. ಫೈನಲ್ ಪ್ರವೇಶಿಸಿದ ಇಬ್ಬರೂ ಕೂಡ ಭಾರತೀಯರಾಗಿದ್ದು, ಕೋನೇರು ಹಂಪಿ ಅವರಿಗೆ ಕೂಡ ಅಭಿನಂದನೆಗಳು. ಇದು ಭಾರತೀಯರ ಪ್ರತಿಭೆಗೆ ಸಾಕ್ಷಿಯಾಗಿದೆ, ಅದರಲ್ಲೂ ಮಹಿಳೆಯರೂ ಕೂಡ ಸಾಧನೆ ಮಾಡುತ್ತಿದ್ದಾರೆ. ಇವರಿಬ್ಬರೂ ಕೂಡ ಇನ್ನೂ ಸಾಧನೆ ಮಾಡುವ ಮೂಲಕ ಯುವ ಜನರಿಗೆ ಸ್ಫೂರ್ತಿ ತುಂಬಲಿ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
‘ಫಿಡೆ ಮಹಿಳಾ ಚೆಸ್ ವಿಶ್ವಕಪ್‌ನಂತಹ ದೊಡ್ಡ ಕ್ರೀಡಾಕೂಟದಲ್ಲಿ ಇಬ್ಬರು ಭಾರತೀಯ ಮಹಿಳೆಯರು ಭಾರತವನ್ನು ಫೈನಲ್‌ನಲ್ಲಿ ಪ್ರತಿನಿಧಿಸಿದ್ದು ಹೆಮ್ಮೆಯ ವಿಷಯ. ಕೇವಲ 19 ವರ್ಷಕ್ಕೆ ಚಾಂಪಿಯನ್ ಆದ ದಿವ್ಯಾ ದೇಶಮುಖ್ ಅವರ ಸಾಧನೆ ದೊಡ್ಡದು. ಕೋನೇರು ಹಂಪಿ ಅವರು ಕೂಡ ಫೈನಲ್ ಪ್ರವೇಶಿಸುವ ಮೂಲಕ, ಐತಿಹಾಸಿಕ ಘಟನೆಗೆ ಕಾರಣವಾದರು. ಇಬ್ಬರಿಗೂ ಅಭಿನಂದನೆಗಳು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ‘ಎಕ್ಸ್’ನಲ್ಲಿ ಅಭಿನಂದನೆ ತಿಳಿಸಿದ್ದಾರೆ.
‘ಈ ದಿನವು ಭಾರತೀಯ ಚೆಸ್ ಇತಿಹಾಸದ ಪ್ರಮುಖ ದಿನವಾಗಿದೆ. ಫಿಡೆ ಮಹಿಳಾ ಚೆಸ್ ವಿಶ್ವಕಪ್ –2025 ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆಯಾಗಿರುವ ದಿವ್ಯಾ ದೇಶಮುಖ್ ಅವರಿಗೆ ಅಭಿನಂದನೆಗಳು. ಫೈನಲ್‌ನಲ್ಲಿದ್ದ ಇನ್ನೊರ್ವ ಭಾರತೀಯ ಅನುಭವಿ ಆಟಗಾರ್ತಿ ಕೋನೇರು ಹಂಪಿ ಅವರಿಗೂ ಅಭಿನಂದನೆಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಫೈನಲ್ ಪಂದ್ಯದಲ್ಲಿ ಭಾರತದ ಅನುಭವಿ ಚೆಸ್ ಆಟಗಾರ್ತಿ ಕೋನೇರು ಹಂಪಿ ವಿರುದ್ಧ ದಿವ್ಯಾ ದೇಶಮುಖ್ ಅವರು ಗೆಲುವು ಸಾಧಿಸಿದರು. ಈ ಮೂಲಕ ನೂತನ ಗ್ರ್ಯಾಂಡ್‌ಮಾಸ್ಟರ್ ಆಗಿ ಕೂಡ ಹೊರಹೊಮ್ಮಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.