ADVERTISEMENT

ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌: ಫೈನಲ್‌ಗೆ ದಿವ್ಯಾಂಶ್‌, ಅಂಜುಮ್‌

ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌: ಅಂತಿಮ ಸುತ್ತಿಗೆ ಅರ್ಜುನ್‌

ಪಿಟಿಐ
Published 19 ಮಾರ್ಚ್ 2021, 13:26 IST
Last Updated 19 ಮಾರ್ಚ್ 2021, 13:26 IST
ಅಂಜುಮ್ ಮೌದ್ಗಿಲ್‌–ಪಿಟಿಐ ಚಿತ್ರ
ಅಂಜುಮ್ ಮೌದ್ಗಿಲ್‌–ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ಟೋಕಿಯೊ ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿರುವ ಭಾರತದ ದಿವ್ಯಾಂಶ್ ಸಿಂಗ್ ಪನ್ವರ್‌, ಅಂಜುಮ್‌ ಮೌದ್ಗಿಲ್‌ ಹಾಗೂ ಅರ್ಜುನ್ ಬಬುತಾ ಅವರು ಐಎಸ್‌ಎಸ್‌ಎಫ್‌ ಶೂಟಿಂಗ್ ವಿಶ್ವಕಪ್ ಟೂರ್ನಿಯ 10 ಮೀಟರ್ ಏರ್ ರೈಫಲ್‌ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.

ಇಲ್ಲಿಯ ಕರ್ಣಿ ಸಿಂಗ್‌ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ದಿನವಾದ ಶುಕ್ರವಾರ 18 ವರ್ಷದ ದಿವ್ಯಾಂಶ್‌, ಅರ್ಹತಾ ಸುತ್ತಿನಲ್ಲಿ 629.1 ಪಾಯಿಂಟ್‌ಗಳೊಂದಿಗೆ ಆರನೇ ಸ್ಥಾನ ಗಳಿಸಿದರು. ಅರ್ಜುನ್‌ (631.8) ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು. ದೀಪಕ್ ಕುಮಾರ್‌ (626) ಅವರು ಅಂತಿಮ ಸುತ್ತು ತಲುಪುವಲ್ಲಿ ವಿಫಲರಾದರು.

ಈ ವಿಭಾಗದ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನವು ದಕ್ಷಿಣ ಕೊರಿಯಾದ ತೇಯುನ್ ನ್ಯಾಮ್ (632.1) ಅವರ ಪಾಲಾಯಿತು. ಇಸ್ರೇಲ್‌ನ ಸೆರ್ಜಿ ರಿಕ್ಟರ್‌ 631.8 ಪಾಯಿಂಟ್‌ನೊಂದಿಗೆ ಎರಡನೇ ಸ್ಥಾನ ಗಳಿಸಿದರು.

ADVERTISEMENT

ಭಾರತದ ದಿವ್ಯಾಂಶ್‌ ಅವರು 2019ರಲ್ಲಿ ಬೀಜಿಂಗ್‌ನಲ್ಲಿ ನಡೆದ ವಿಶ್ವಕಪ್‌ನ 10 ಮೀ. ಏರ್ ರೈಫಲ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ.

ಮಹಿಳಾ ವಿಭಾಗದ 10 ಮೀ. ಏರ್‌ ರೈಫಲ್‌ ಅರ್ಹತಾ ಸುತ್ತಿನಲ್ಲಿ ಅಂಜುಮ್‌ ಅವರು ಎರಡನೇ ಸ್ಥಾನ ಗಳಿಸುವ ಮೂಲಕ ಫೈನಲ್‌ ತಲುಪಿದರು. ಅವರು 629.6 ಪಾಯಿಂಟ್‌ ಗಳಿಸಿದರು. ಈ ವಿಭಾಗದಲ್ಲಿ ವಿಶ್ವದ ಅಗ್ರಕ್ರಮಾಂಕದ ಶೂಟರ್ ಆಗಿರುವ ಇಳವೆನಿಲ್ ವಾಳರಿವನ್‌ 626.7 ಪಾಯಿಂಟ್ಸ್‌ನೊಂದಿಗೆ 12ನೇ ಸ್ಥಾನ ಗಳಿಸುವ ಮೂಲಕ ಫೈನಲ್‌ ಅವಕಾಶ ತಪ್ಪಿಸಿಕೊಂಡರು. ಒಲಿಂಪಿಕ್‌ ಟಿಕೆಟ್ ಗಿಟ್ಟಿಸಿರುವ ಅಪೂರ್ವಿ ಚಾಂಡೇಲ 26ನೇ ಸ್ಥಾನ ಗಳಿಸಿ ನಿರಾಸೆ ಅನುಭವಿಸಿದರು.

ಈ ವಿಭಾಗದಲ್ಲಿ ಹಂಗರಿಯ ಈಸ್ತರ್‌ ಡೆನೆಸ್‌ (629.8 ಪಾಯಿಂಟ್ಸ್) ಅಗ್ರಸ್ಥಾನ ಗಳಿಸಿದರು. ಅಮೆರಿಕದ ಕರೊಲಿನ್‌ ಮೇರಿ (629.1) ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ಮಹಿಳೆಯರ, ಕನಿಷ್ಠ ಅರ್ಹತಾ ಸ್ಕೋರ್ (ಎಂಕ್ಯೂಸ್‌) ವಿಭಾಗದಲ್ಲಿ ಭಾರತದ ನಿಶಾ ಕುಮಾರ್ ಹಾಗೂ ಶ್ರೀಯಾಂಕಾ ಶಾದಂಗಿ ಕ್ರಮವಾಗಿ 629.4 ಹಾಗೂ 626.4 ಪಾಯಿಂಟ್‌ ಗಳಿಸಿದರು. ಪುರುಷರ ವಿಭಾಗದಲ್ಲಿ ಐಶ್ವರಿ ಪ್ರತಾಪ್ ಸಿಂಗ್‌ ತೋಮರ್ 632.4 ಹಾಗೂ ಪಂಕಜ್ ಕುಮಾರ್‌ 627.1 ಪಾಯಿಂಟ್‌ಗಳಿಗೆ ಗುರಿ ಇಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.