ADVERTISEMENT

ಮುರಳಿ ಶ್ರೀಶಂಕರ್ ಒಲಿಂಪಿಕ್ಸ್‌ ಕನಸು ಭಗ್ನ

ತರಬೇತಿ ವೇಳೆ ಮೊಣಕಾಲು ನೋವು

ಪಿಟಿಐ
Published 18 ಏಪ್ರಿಲ್ 2024, 15:48 IST
Last Updated 18 ಏಪ್ರಿಲ್ 2024, 15:48 IST
ಪ್ಯಾರಿಸ್‌ ಒಲಿಂಪಿಕ್ಸ್‌ ಲೋಗೊ
ಪ್ಯಾರಿಸ್‌ ಒಲಿಂಪಿಕ್ಸ್‌ ಲೋಗೊ   

ನವದೆಹಲಿ: ಭಾರತದ ಅಗ್ರ ಲಾಂಗ್‌ಜಂಪ್‌ ಸ್ಪರ್ಧಿ ಮುರಳಿ ಶ್ರೀಶಂಕರ್‌ ಅವರು ತರಬೇತಿಯ ವೇಳೆ ಮೊಣಕಾಲು ನೋವಿಗೆ ಒಳಗಾಗಿದ್ದು, ಇದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಕಾರಣ ಪ್ಯಾರಿಸ್‌ ಒಲಿಂಪಿಕ್ಸ್‌ ಸೇರಿದಂತೆ ಈ ವರ್ಷದ ಪ್ರಮುಖ ಕೂಟಗಳನ್ನು ಕಳೆದುಕೊಳ್ಳಲಿದ್ದಾರೆ.

ಇದರೊಂದಿಗೆ ಅವರ ಒಲಿಂಪಿಕ್ಸ್‌ ಕನಸು ಭಗ್ನಗೊಂಡಿತು. 2023ರ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಅವರು ಬೆಳ್ಳಿ ಪದಕ ಗೆಲುವಿನ ಹಾದಿಯಲ್ಲಿ 8.37 ಮೀ. ದೂರ ಜಿಗಿದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಹಾಂಗ್‌ಝೌ ಏಷ್ಯನ್‌ ಗೇಮ್ಸ್‌ನಲ್ಲೂ ಅವರು ಬೆಳ್ಳಿ ಗೆದ್ದಿದ್ದರು.

25 ವರ್ಷದ ಮುರಳಿ, ಶಾಂಘೈ ಮತ್ತು ದೋಹಾದಲ್ಲಿ (ಕ್ರಮವಾಗಿ ಏ. 27 ಮತ್ತು ಮೇ 10) ನಡೆಯಲಿರುವ ಡೈಮಂಡ್‌ ಲೀಗ್‌ ಕೂಟಗಳಲ್ಲಿ ಭಾಗವಹಿಸಿ ಈ ಋತುವಿನ ಸ್ಪರ್ಧೆ ಆರಂಭಿಸಬೇಕಾಗಿತ್ತು. ಮಂಗಳವಾರ ತರಬೇತಿ ವೇಳೆ ಅವರಿಗೆ ಮೊಣಕಾಲಿನ ನೋವು ಕಾಣಿಸಿಕೊಂಡಿತು.

ADVERTISEMENT

‘ದುರದೃಷ್ಟವಶಾತ್ ನನ್ನ ಪಾಲಿಗೆ ದುಃಸ್ವಪ್ನವೊಂದು ನಿಜವಾಗಿದೆ. ನನ್ನ ಪ್ಯಾರಿಸ್‌ ಒಲಿಂಪಿಕ್ಸ್‌ ಕನಸು ಕೊನೆಯಾಗಿದೆ’ ಎಂದು ಶ್ರೀಶಂಕರ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದಾರೆ.

‘ಮಂಗಳವಾರ ತರಬೇತಿ ವೇಳೆ ಮೊಣಕಾಲಿಗೆ ನೋವಿನ ಅನುಭವವಾಗಿದೆ. ಪರೀಕ್ಷೆಗಳು, ಸಮಾಲೋಚನೆಯ ನಂತರ ಇದಕ್ಕೆ ಶಸ್ತ್ರಚಿಕಿತ್ಸೆಯೇ ದಾರಿ ಎಂದು ಗೊತ್ತಾಗಿದೆ. ಇಷ್ಟೆಲ್ಲ ಸಮಯದಿಂದ ನಾನು ಕಾಯುತ್ತಿದ್ದ ಕೂಟವೊಂದರ ಕನಸು ಕೊನೆಯಾಗಿದೆ’ ಎಂದು ಭಾವನಾತ್ಮಕವಾಗಿ  ಬರೆದಿದ್ದಾರೆ.

ಕಳೆದ ಜೂನ್‌ನಲ್ಲಿ ಶ್ರೀಶಂಕರ್ ಅವರು ಡೈಮಂಡ್‌ ಲೀಗ್ ಕೂಟವೊಂದರಲ್ಲಿ ಮೊದಲ ಮೂರರೊಳಗೆ ಸ್ಥಾನ ಪಡೆದಿದ್ದರು. ಈ ಸಾಧನೆ ಮಾಡಿದ ಭಾರತದ ಮೂರನೇ ಅಥ್ಲೀಟ್‌ ಎನಿಸಿದ್ದರು. ಆದರೆ ಬುಡಾಪೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರು ಅರ್ಹತಾ ಸುತ್ತಿನಲ್ಲೇ ಹೊರಬಿದ್ದು ನಿರಾಸೆ ಮೂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.