ದಿವ್ಯಾ ದೇಶಮುಖ್ (ಎಡಗಡೆ) ಮತ್ತು ಹಂಪಿ ಆಟದ ಆರಂಭಕ್ಕೆ ಮೊದಲು ಹಸ್ತಲಾಘವ ನೀಡಿದರು.
ಫಿಡೆ ಚಿತ್ರ
ಬಟುಮಿ (ಜಾರ್ಜಿಯಾ): ಇಂಟರ್‌ನ್ಯಾಷನಲ್ ಮಾಸ್ಟರ್ ದಿವ್ಯಾ ದೇಶಮುಖ್ ಅವರು ಫಿಡೆ ಮಹಿಳಾ ಚೆಸ್ ವಿಶ್ವಕಪ್ ಫೈನಲ್ ಪಂದ್ಯದ ಎರಡನೇ ಕ್ಲಾಸಿಕಲ್ ಆಟದಲ್ಲಿ ಅಪಾಯಕ್ಕೆ ಆಹ್ವಾನ ನೀಡದೇ ಸ್ವದೇಶದ ಗ್ರ್ಯಾಂಡ್‌ಮಾಸ್ಟರ್ ಕೋನೇರು ಹಂಪಿ ಜೊತೆ ಭಾನುವಾರ ಸುಲಭವಾಗಿ ಡ್ರಾ ಮಾಡಿಕೊಂಡರು. ಇದರಿಂದ ಎರಡು ಕ್ಲಾಸಿಕಲ್ ಪಂದ್ಯಗಳ ನಂತರ ಸ್ಕೋರ್ 1–1 ಸಮಬಲವಾಗಿದ್ದು, ಸೋಮವಾರ ನಡೆಯುವ ಟೈಬ್ರೇಕರ್ ಮೂಲಕ ವಿಜೇತರ ನಿರ್ಧಾರವಾಗಲಿದೆ.
ಭಾರತೀಯ ಆಟಗಾರ್ತಿಯರ ನಡುವೆ ಮೊದಲ ಬಾರಿ ನಡೆಯುತ್ತಿರುವ ಈ ಫೈನಲ್‌ನ ಮೊದಲ ಆಟದಲ್ಲಿ (ಶನಿವಾರ) ದಿವ್ಯಾ ತನಗೆ ದೊರಕಿದ್ ಭರವಸೆಯ ಆರಂಭವನ್ನು ಮೇಲುಗೈಯಾಗಿ ಪರಿವರ್ತಿಸಲು ವಿಫಲರಾಗಿದ್ದರು. ಆ ಪಂದ್ಯ ಡ್ರಾ ಆಗಿತ್ತು. ಆದರೆ ಎರಡನೇ ದಿನ ಕಪ್ಪು ಕಾಯಿಗಳಲ್ಲಿ ಆಡಿದ ದಿವ್ಯಾ, ‘ಕ್ವೀನ್ ಪಾನ್ ಓಪನಿಂಗ್’ ಕಂಡ ಎರಡನೇ ಆಟದಲ್ಲಿ ಹೆಚ್ಚಿನ ತೊಂದರೆ ಎದುರಿಸಲಿಲ್ಲ.
ಆಟ ಮಧ್ಯಮ ಹಂತ ತಲುಪಿದಾಗ ಹಂಪಿ ಬಳಿ ಜೋಡಿ ಬಿಷಪ್‌ಗಳಿದ್ದವು. ಆದರೆ ಇದಕ್ಕೆ ಬದಲಿಯಾಗಿ ನೈಟ್‌ಗಳನ್ನು (ಕುದುರೆಗಳನ್ನು) ಹೊಂದಿದ್ದ ದಿವ್ಯಾ ಅವರಿಗೆ ಅವುಗಳನ್ನು ಕರಾರುವಾಕ್ ಆಗಿ ನಡೆಸಿದರೆ ಹಂಪಿ ಅವರಿಂದ ತೊಂದರೆ ಎದುರಾಗದು ಎಂಬುದು ಮನವರಿಕೆಯಾಗಿತ್ತು. ಅವುಗಳನ್ನು ಪರಿಪೂರ್ಣ ನಡೆಸಿದರು. ಕೆಲವು ‘ಎಕ್ಸ್‌ಚೇಂಜ್’ಗಳೂ ನಡೆದವು. 34 ನಡೆಗಳ ನಂತರ ‘ನಡೆಗಳ ಪುನರಾವರ್ತನೆ’ (ಫೊಟೊಗ್ರಾಫಿಕ್ ಪೊಸಿಷನ್) ಆಧಾರದಲ್ಲಿ ಆಟ ಡ್ರಾ ಆಯಿತು.
ಟೈಬ್ರೇಕರ್‌ನಲ್ಲಿ 15 ನಿಮಿಷಗಳ ತಲಾ ಎರಡು ಆಟಗಳಿರುತ್ತವೆ. ಪ್ರತಿ ನಡೆಗೆ 10 ಸೆಕೆಂಡುಗಳ ‘ಇಂಕ್ರಿಮೆಂಟ್’ ನೀಡಲಾಗುತ್ತದೆ. ನಂತರವೂ ಸ್ಕೋರ್ ಸಮನಾದಲ್ಲಿ 10 ನಿಮಿಷಗಳ ಎರಡು ಆಟಗಳು ನಡೆಯುತ್ತವೆ. ಬಳಿಕವೂ ವಿಜೇತರ ಇತ್ಯರ್ಥವಾಗದಿದ್ದಲ್ಲಿ ಐದು ನಿಮಿಷಗಳ ತಲಾ ಎರಡು ಪಂದ್ಯಗಳು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.