
ಪಣಜಿ: ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ ಅವರು ಎರಡು ಬಾರಿಯ ವಿಜೇತ ಲೆವೋನ್ ಅರೋನಿಯನ್ ಅವರನ್ನು ಐದನೇ ಸುತ್ತಿನ ಎರಡನೇ ಕ್ಲಾಸಿಕಲ್ ಆಟದಲ್ಲಿ ಸೋಲಿಸಿ, ವಿಶ್ವಕಪ್ ಚೆಸ್ ಟೂರ್ನಿಯ ಎಂಟರ ಘಟ್ಟಕ್ಕೆ ದಾಪುಗಾಲಿಟ್ಟರು. ಇವರಿಬ್ಬರ ನಡುವಣ ಮೊದಲ ಆಟ ಡ್ರಾ ಆಗಿದ್ದು, ಅರ್ಜುನ್ ಪಂದ್ಯವನ್ನು 1.5–0.5ರಲ್ಲಿ ಗೆದ್ದರು.
ಶನಿವಾರ ಕಪ್ಪು ಕಾಯಿಗಳಲ್ಲಿ ಆಡಿದ ಅರ್ಜುನ್ ಆಟದುದ್ದಕ್ಕೂ ನಿಯಂತ್ರಣ ಸಾಧಿಸಿದ್ದರು. 39ನೇ ನಡೆಯಲ್ಲಿ ಅಮೆರಿಕದ ಅರೋನಿಯನ್ ಸೋಲೊಪ್ಪಿಕೊಂಡರು. ಅರೋನಿಯನ್ ಟೂರ್ನಿಯುದ್ದಕ್ಕೂ ಅಮೋಘ ಫಾರ್ಮ್‌ನಲ್ಲಿದ್ದರು. ಅರ್ಜುನ್ ಈಗ ವಿಶ್ವಕಪ್‌ನಿಂದ ಮೂರು ಹೆಜ್ಜೆ ದೂರದಲ್ಲಿದ್ದಾರೆ.
ಕಣದಲ್ಲಿರುವ ಭಾರತದ ಇನ್ನೊಬ್ಬ ಆಟಗಾರ ಪೆಂಟಾಲ ಹರಿಕೃಷ್ಣ, ಮೆಕ್ಸಿಕೊದ ಜೋಸ್ ಎಡ್ವರ್ಡೊ ಮಾರ್ಟಿನೆಝ್ ಅಲ್ಕಾಂತರ ಜೊತೆ ಎರಡನೇ ಆಟವನ್ನೂ ಡ್ರಾ ಮಾಡಿಕೊಂಡರು. ಇವರಿಬ್ಬರು ಭಾನುವಾರ ಟೈಬ್ರೇಕರ್ ಆಡಲಿದ್ದಾರೆ.
ಅರ್ಜುನ್ ಜೊತೆ, ಉಜ್ಬೇಕಿಸ್ತಾನದ ನದಿರ್ಬೆಕ್ ಯಾಕುಬೊಯೆವ್, ಚೀನಾದ ವೀ ಯಿ ಸಹ ಎಂಟರ ಘಟ್ಟ ತಲುಪಿದರು. ಯಾಕುಬೊಯೆವ್ ಅವರು ಅರ್ಮೇನಿಯಾದ ಗೇಬ್ರಿಯಲ್ ಸರ್ಗೆಸಿಯಾನ್ ಅವರನ್ನು 1.5–0.5 ರಿಂದ, ವೀ ಯಿ 1.5–0.5 ರಿಂದ ಜರ್ಮನಿಯ ಸ್ಯಾಮುಯೆಲ್ ಸೆವಿನ್ ಅವರನ್ನು ಮಣಿಸಿದರು. ಯಾಕುಬೊಯೆವ್, ವೀ ಯಿ ಇಬ್ಬರೂ ಎರಡನೇ ಆಟದಲ್ಲಿ ಗೆದ್ದರು.
ಅಮೆರಿಕದ ಸ್ಯಾಮ್ ಶಂಕ್ಲಾಂಡ್– ರಷ್ಯಾದ ಡೇನಿಯಲ್ ದುಬೋವ್, ರಷ್ಯಾದ ಆಂಡ್ರಿ ಇಸಿಪೆಂಕೊ– ಮತ್ತು ಅಲೆಕ್ಸಿ ಗ್ರೆಬ್ನೆವ್, ಜರ್ಮನಿಯ ಅಲೆಕ್ಸಾಂಡರ್ ಡೊನ್ಚೆಂಕೊ– ವಿಯೆಟ್ನಾಮಿನ ಲೀಮ್ ಲೆ ಕ್ವಾಂಗ್ ಸಹ ಟೈಬ್ರೇಕರ್ ಆಡಬೇಕಾಗಿದೆ. ಗೆದ್ದವರು ಎಂಟರ ಘಟ್ಟ ತಲುಪಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.