ADVERTISEMENT

ಕ್ರೀಡೆ: ಹೋರಾಟದ ಕಸುವಿಗೆ ಮುಪ್ಪಿಲ್ಲ

ಬಸವರಾಜ ದಳವಾಯಿ
Published 30 ನವೆಂಬರ್ 2020, 19:30 IST
Last Updated 30 ನವೆಂಬರ್ 2020, 19:30 IST
ಪ್ರದರ್ಶನ ಪಂದ್ಯದಲ್ಲಿ ಸೆಣಸಿದ ಮೈಕ್‌ ಟೈಸನ್‌ (ಬಲ) ಹಾಗೂ ರಾಯ್‌ ಜೋನ್ಸ್ ಜೂನಿಯರ್‌–ಎಎಫ್‌ಪಿ ಚಿತ್ರ
ಪ್ರದರ್ಶನ ಪಂದ್ಯದಲ್ಲಿ ಸೆಣಸಿದ ಮೈಕ್‌ ಟೈಸನ್‌ (ಬಲ) ಹಾಗೂ ರಾಯ್‌ ಜೋನ್ಸ್ ಜೂನಿಯರ್‌–ಎಎಫ್‌ಪಿ ಚಿತ್ರ   

‘ನನ್ನಲ್ಲಿ ಹೋರಾಟದ ಕಸುವುಇನ್ನೂ ಕುಂದಿಲ್ಲ. ಬಹಳಷ್ಟು ಬೌಟ್‌ಗಳಲ್ಲಿ ಎದುರಾಳಿಗೆ ಸವಾಲೆಸೆಯುವ ಭರವಸೆ ಇದೆ. ನನ್ನ ತಾಕತ್ತಿಗೆ ಮುಪ್ಪು ಬಂದಿಲ್ಲ...’ ಖ್ಯಾತ ಬಾಕ್ಸಿಂಗ್ ತಾರೆ ಮೈಕ್‌ ಟೈಸನ್‌ ಮಾತು ಇದು.

ಅಮೆರಿಕದ 54ರ ಹರೆಯದ ಟೈಸನ್‌ ಹಾಗೂ 51ರ ರಾಯ್‌ ಜೋನ್ಸ್ ಜೂನಿಯರ್‌ ನಡುವೆ ಕಳೆದ ವಾರಾಂತ್ಯದಲ್ಲಿ ಪ್ರದರ್ಶನ ಪಂದ್ಯ ಏರ್ಪಡಿಸಲಾಗಿತ್ತು. ಲಾಸ್‌ ಏಂಜಲೀಸ್‌ನ ಸ್ಟ್ಯಾಪಲ್ಸ್ ಸೆಂಟರ್‌ನಲ್ಲಿ ನಡೆದ ಈ ಹಣಾಹಣಿ ಡ್ರಾನಲ್ಲಿ ಅಂತ್ಯವಾದರೂ ಬಹಳ ದಿನಗಳ ಬಳಿಕ ದಿಗ್ಗಜ ಆಟಗಾರರ ಪೈಪೋಟಿಯನ್ನುಅಭಿಮಾನಿಗಳು ಕಣ್ತುಂಬಿಕೊಳ್ಳಲು ಸಾಧ್ಯವಾಯಿತು. ಎರಡು ನಿಮಿಷಗಳಿಗೆ ಒಂದರಂತೆ ಒಟ್ಟು ಎಂಟು ಸುತ್ತುಗಳ ಬೌಟ್‌ನಲ್ಲಿ ಜಯ ಯಾರಿಗೂ ಒಲಿಯಲಿಲ್ಲ.

15 ವರ್ಷಗಳ ಹಿಂದೆ (2005) ನಿವೃತ್ತಿ ಘೋಷಿಸಿದ ಬಳಿಕ ಟೈಸನ್‌ ಇಲ್ಲಿ ಕಣಕ್ಕಿಳಿದಿದ್ದರು. ಜೋನ್ಸ್ 2018ರ ಫೆಬ್ರುವರಿಯಲ್ಲಿ ಬೌಟ್‌ವೊಂದರಲ್ಲಿ ಕೊನೆಯ ಬಾರಿ ಸ್ಪರ್ಧಿಸಿದ್ದರು. ‘ಬೌಟ್‌ ಫಲಿತಾಂಶ ಏನು ಬೇಕಾದರೂ ಆಗಲಿ, ನನಗಂತೂ ಖುಷಿಯಾಗಿದೆ. ಮುಂದಿನ ಪಂದ್ಯದಲ್ಲಿ ಇನ್ನೂ ಉತ್ತಮ ಸಾಮರ್ಥ್ಯ ತೋರಬಲ್ಲೆ’ ಎಂಬುದು ಟೈಸನ್‌ ವಿಶ್ವಾಸದ ಮಾತು.

ADVERTISEMENT

ಟೈಸನ್‌ ಹೋರಾಟಕ್ಕೆ ಎದುರಾಳಿ ಮಾಜಿ ವಿಶ್ವಹೆವಿವೇಟ್‌ ಚಾಂಪಿಯನ್‌ ಜೋನ್ಸ್ ಅವರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ‘ಬೌಟ್‌ನಲ್ಲಿ ನಾನು ಗೆಲುವು ಸಾಧಿಸಿದ್ದೇನೆ ಎಂದೆನಿಸಿತು. ಆದರೆ ಟೈಸನ್‌ ಅವರ ತಾಳ್ಮೆ ಹಾಗೂ ಶಕ್ತಿಯುತ ಪಂಚ್‌ಗಳಿಂದ ಪ್ರಭಾವಿತನಾಗಿದ್ದೇನೆ’ ಎಂಬುದು ಜೋನ್ಸ್ ನುಡಿ.

‘ಯಾವುದೂ ಅಸಾಧ್ಯವಲ್ಲ. ಆಕಾಶಕ್ಕೆ ಮೇರೆ ಇಲ್ಲ. ಬದುಕಿನಲ್ಲಿ ಹೆಚ್ಚಿನ ಗುರಿಗಳನ್ನೇನೂ ಇಟ್ಟುಕೊಂಡಿಲ್ಲ. ಐಷಾರಾಮಿ ಜೀವನ ಶೈಲಿಯನ್ನು ತ್ಯಜಿಸಿ ಬಹಳ ದಿನಗಳಾದವು. ಸೇವಾ ಕಾರ್ಯಗಳಿಗಾಗಿ ಹಣ ಸಂಗ್ರಹದಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ’ ಎನ್ನುತ್ತಾರೆ ಟೈಸನ್‌.

1987ರಿಂದ 1990ರವರೆಗೆ ಟೈಸನ್‌ ಅವರು ಹೆವಿವೇಟ್‌ ವಿಶ್ವಚಾಂಪಿಯನ್‌ ಪಟ್ಟ ಅಲಂಕರಿಸಿದ್ದರು.ಅತಿ ಕಿರಿಯ ವಯಸ್ಸಿನಲ್ಲಿ (20 ವರ್ಷ, ನಾಲ್ಕು ತಿಂಗಳು, 22 ದಿನಗಳು) ಹೆವಿವೇಟ್‌ ಟ್ರೋಫಿ ಗೆದ್ದ ದಾಖಲೆಯೂ ಅವರ ಹೆಸರಲ್ಲಿದೆ.ಖ್ಯಾತಿಯೊಂದಿಗೆ ಸಾಕಷ್ಟು ವಿವಾದಗಳೂ ಅವರ ಬೆನ್ನಿಗಂಟಿಕೊಂಡಿವೆ. 1992ರಲ್ಲಿ ಅತ್ಯಾಚಾರ ಪ್ರಕರಣವೊಂದರಲ್ಲಿ ಟೈಸನ್‌ ಆರು ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದರು. ಮೂರು ವರ್ಷಗಳ ನಂತರ ಪೆರೋಲ್‌ ಮೇಲೆ ಬಿಡುಗಡೆಯಾಗಿದ್ದರು. ‘ಭೂಮಿ ಮೇಲಿನ ಅತ್ಯಂತ ಕ್ರೂರ ಮನುಷ್ಯ’ (ದ ಬ್ಯಾಡೆಸ್ಟ್ ಮ್ಯಾನ್ ಆನ್‌ ದ ಪ್ಲಾನೆಟ್‌) ಎಂಬ ಹೆಸರಿನ ಕುಖ್ಯಾತಿಯೂ ಅವರಿಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.