
ಚೆನ್ನೈ: ಎಫ್‌ಐಎಚ್ ಪುರುಷರ ಜೂನಿಯರ್ವಿಶ್ವಕಪ್ ಹಾಕಿ ಟೂರ್ನಿಯ ಗುಂಪು ಹಂತದಲ್ಲಿ ಸುಲಭ ಎದುರಾಳಿಗಳನ್ನು ಸೋಲಿಸಿದ್ದ ಭಾರತ ತಂಡಕ್ಕೆ ನೈಜ ಸತ್ವ ಪರೀಕ್ಷೆ ಎದುರಾಗಿದೆ. ಆತಿಥೇಯ ತಂಡವು ಶುಕ್ರವಾರ ನಡೆಯಲಿರುವ ಕ್ವಾರ್ಟರ್‌ಫೈನಲ್‌ನಲ್ಲಿ ಪ್ರಬಲ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.
‘ಬಿ’ ಗುಂಪಿನಲ್ಲಿದ್ದ ಭಾರತ, ಲೀಗ್ ಪಂದ್ಯಗಳಲ್ಲಿ ಚಿಲಿ, ಒಮಾನ್, ಸ್ವಿಟ್ಜರ್ಲೆಂಡ್ ತಂಡಗಳ ವಿರುದ್ಧ ನಿರಾಯಾಸವಾಗಿ ಜಯಗಳಿಸಿತ್ತು. ಈ ಮೂರು ಪಂದ್ಯಗಳಲ್ಲಿ 29 ಗೋಲುಗಳನ್ನು ಗಳಿಸಿದ್ದ ಭಾರತ ತಂಡ, ಎದುರಾಳಿಗಳಿಗೆ ಒಂದೂ ಗೋಲು ಬಿಟ್ಟುಕೊಟ್ಟಿರಲಿಲ್ಲ. ಕಣದಲ್ಲಿರುವ 24 ತಂಡಗಳಲ್ಲೇ ಇದು ಅತ್ಯುತ್ತಮ ಸಾಧನೆ ಎನಿಸಿದೆ.
ಆದರೆ ಈ ದೊಡ್ಡ ಗೆಲುವುಗಳು ಹೆಚ್ಚಿನ ಮಹತ್ವ ಪಡೆಯುವುದಿಲ್ಲ ಎಂಬುದು ಪಿ.ಆರ್.ಶ್ರೀಜೇಶ್ ಗರಡಿಯಲ್ಲಿರುವ ತಂಡಕ್ಕೆ ತಿಳಿಯದ ವಿಷಯವೇನಲ್ಲ. ಪ್ರಬಲ ತಂಡಗಳಿರುವ ನಾಕೌಟ್‌ನಲ್ಲಿ ಭಾರತ ತಂಡವು ಈಗ ನೈಜ ಪರೀಕ್ಷೆ ಎದುರಿಸಬೇಕಾಗಿದೆ.
ಆದರೆ ಭಾರತ ತಂಡಕ್ಕೆ ಮುಂದಿನ ಹಾದಿ ಸುಲಭವಲ್ಲ. ಸಣ್ಣ ಲೋಪವೂ ದುಬಾರಿಯಾಗಬಲ್ಲದು. 2016ರಲ್ಲಿ ಲಖನೌದಲ್ಲಿ ಈ ಟೂರ್ನಿಯ ಕಿರೀಟವನ್ನು ಕೊನೆಯ ಬಾರಿ ಧರಿಸಿದ್ದ ಭಾರತ 9 ವರ್ಷಗಳ ನಂತರ ತವರಿನಲ್ಲಿ ಮತ್ತೆ ಚಾಂಪಿಯನ್ ಆಗಬೇಕಾದರೆ ಮೈಯೆಲ್ಲಾ ಕಣ್ಣಾಗಿ ಆಡಬೇಕಾಗುತ್ತದೆ.
ಈವರೆಗೆ ಭಾರತ ಅಮೋಘವಾಗಿಯೇ ಆಡಿದೆ. ಗಳಿಸಿದ 29 ಗೋಲಗಳ ಪೈಕಿ 18 ಫೀಲ್ಡ್ ಗೋಲುಗಳಾಗಿವೆ. ಒಂಬತ್ತು ಪೆನಾಲ್ಟಿ ಕಾರ್ನರ್‌ಗಳಲ್ಲಿ ಮತ್ತು ಎರಡು ಪೆನಾಲ್ಟಿ ಸ್ಟ್ರೋಕಗಳ ಪರಿವರ್ತನೆಯಿಂದ ದಾಖಲಾಗಿವೆ.
ಚಿಲಿ ಮತ್ತು ಒಮಾನ್ ವಿರುದ್ಧ ತಂಡವು ಮನಬಂದಂತೆ ಗೋಲುಗಳನ್ನು ಗಳಿಸಿತ್ತು. ಭಾರತ ಕೊನೆಯ ಲೀಗ್ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ವಿರುದ್ಧ 5–0 ಯಿಂದ ಜಯಗಳಿಸಿದರೂ, ರಕ್ಷಣಾ ವಿಭಾಗಕ್ಕೆ ಮೊದಲ ಬಾರಿ ಪರೀಕ್ಷೆ ಎದುರಾಗಿತ್ತು. ಗೋಲ್ ಕೀಪರ್ ಪ್ರಿನ್ಸ್ ದೀಪ್ ಸಿಂಗ್ ಮತ್ತು ವಿಕ್ರಮ್‌ಜಿತ್ ಕೆಲವು ಉತ್ತಮ ತಡೆಗಳನ್ನು ಪ್ರದರ್ಶಿಸಿದ್ದರು.
ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಸುಧಾರಣೆಗೆ ಅವಕಾಶವಿದೆ. ಕೊನೆಯ ಲೀಗ್ ಪಂದ್ಯದಲ್ಲಿ ಶಿಲಾನಂದ ಲಾಕ್ರಾ ಸುಧಾರಿತ ಆಟವಾಡಿದ್ದಾರೆ. ನಾಯಕ ರೋಹಿತ್ ಮತ್ತು ಅನ್ಮೋಲ್ ಎಕ್ಕಾ ಅವರಿಂದ ಉತ್ತಮ ಆಟ ಇನ್ನೂ ಹೊರಬಂದಿಲ್ಲ.
ದಿಲ್‌ರಾಜ್ 6 ಗೋಲುಗಳನ್ನು, ಮನ್ಮೀತ್ 5 ಗೋಲುಗಳನ್ನು, ಅರ್ಷದೀಪ್ ಸಿಂಗ್ ನಾಲ್ಕು ಗೋಲುಗಳನ್ನು ಗಳಿಸಿದ್ದಾರೆ. ರೋಸನ್ ಕುಜೂರ್, ಅದ್ರೋಯಿ ಎಕ್ಕಾ, ಅಂಕಿತ್ ಪಾಲ್ ಇರುವ ಮಿಡ್‌ಫೀಲ್ಡ್‌ನಲ್ಲೂ ಭಾರತ ಪರಿಣಾಮಕಾರಿ ಆಟ ಪ್ರದರ್ಶಿಸಿದೆ.
‘ನಾವು ಸುಧಾರಿಸಬೇಕಾದ ಕ್ಷೇತ್ರಗಳಿವೆ. ಮುಂದಿನ ಪಂದ್ಯದಿಂದ ಟೂರ್ನಿಯ ನೈಜ ಆರಂಭ ಕಾಣಲಿದೆ. ಹೀಗಾಗಿ ಈ ಕ್ಷೇತ್ರಗಳಲ್ಲಿ ನಮ್ಮ ಗಮನ ಕೇಂದ್ರೀಕರಿಸಬೇಕಾದ ಅಗತ್ಯವಿದೆ’ ಎನ್ನುತ್ತಾರೆ ಶ್ರೀಜೇಶ್.
‘ನಾವು ಎದುರಾಳಿ ಗೋಲು ವೃತ್ತದೊಳಗೆ ನುಗ್ಗಿದ ನಂತರ ಪೆನಾಲ್ಟಿ ಕಾರ್ನರ್ ಪರಿವರ್ತನೆ, ಗೋಲಿನತ್ತ ಹೊಡೆತಗಳ ಕಡೆ ಚಿತ್ತ ಹರಿಸಬೇಕಾಗಿದೆ’ ಎಂದಿದ್ದಾರೆ.
ಬೆಲ್ಜಿಯಂ ತಂಡವು, ಸ್ಪೇನ್ ಬಳಿಕ ಎರಡನೇ ಅತ್ಯುತ್ತಮ ರನ್ನರ್ ಅಪ್ ತಂಡವಾಗಿ ಕ್ವಾರ್ಟರ್‌ಫೈನಲ್‌ಗೆ ತಲುಪಿದೆ. ಆದರೆ ಯುರೋಪ್‌ನ ಈ ತಂಡವನ್ನು ಭಾರತ ಲಘುವಾಗಿ ಪರಿಗಣಿಸುವಂತಿಲ್ಲ. ಬೆಲ್ಜಿಯಂ ತಂಡವು ಗುಂಪು ಹಂತದಲ್ಲಿ 11 ಫೀಲ್ಡ್ ಗೋಲು ಸೇರಿದಂತೆ 22 ಗೋಲುಗಳನ್ನು ಗಳಿಸಿದೆ. 11 ಪೆನಾಲ್ಟಿ ಕಾರ್ನರ್‌ಗಳ ಮೂಲಕ ಬಂದಿವೆ.
ಪಂದ್ಯ ಆರಂಭ: ರಾತ್ರಿ 8
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಹಾಟ್‌ಸ್ಟಾರ್
ಇತರ ಕ್ವಾರ್ಟರ್‌ಫೈನಲ್ ಪಂದ್ಯಗಳು
ಸ್ಪೇನ್– ನ್ಯೂಜಿಲೆಂಡ್, ಮಧ್ಯಾಹ್ನ 12.30
ಫ್ರಾನ್ಸ್– ಜರ್ಮನಿ, ಮಧ್ಯಾಹ್ನ 3.00
ನೆದರ್ಲೆಂಡ್ಸ್– ಅರ್ಜೆಂಟೀನಾ, ಸಂಜೆ 5.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.