ADVERTISEMENT

ಸಿಂಕ್‌ಫೀಲ್ಡ್‌ ಚೆಸ್ ಟೂರ್ನಿ ಇಂದಿನಿಂದ: ಕಣದಲ್ಲಿ ಭಾರತದ ಗುಕೇಶ್, ಪ್ರಜ್ಞಾನಂದ

ಪಿಟಿಐ
Published 17 ಆಗಸ್ಟ್ 2025, 16:20 IST
Last Updated 17 ಆಗಸ್ಟ್ 2025, 16:20 IST
ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ  
ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ     

ಸೇಂಟ್ ಲೂಯಿಸ್, ಅಮೆರಿಕ: ವಿಶ್ವ ಚಾಂಪಿಯನ್ ಡಿ. ಗುಕೇಶ್ ಅವರು ಕ್ಲಾಸಿಕ್ ಚೆಸ್ ಮಾದರಿಗೆ ಮರಳಿದ್ದಾರೆ. ಸೋಮವಾರ ಆರಂಭವಾಗಲಿರುವ  ಖ್ಯಾತನಾಮ ಆಟಗಾರರು ಸ್ಪರ್ಧಿಸಲಿರುವ ‘ಸಿಂಕ್‌ಫೀಲ್ಡ್‌ ಕಪ್’ ಗ್ರ್ಯಾಂಡ್‌ ಚೆಸ್ ಟೂರ್‌ನಲ್ಲಿ (ಜಿಸಿಟಿ) ಗುಕೇಶ್ ಕಣಕ್ಕಿಳಿಯಲಿದ್ದಾರೆ. ಭಾರತದ ಮತ್ತೊಬ್ಬ ಪ್ರಮುಖ ಆಟಗಾರ ಆರ್. ಪ್ರಜ್ಞಾನಂದ ಅವರು ಈ ಟೂರ್ನಿಯಲ್ಲಿ ವಿಜಯವೇದಿಕೆ ಏರುವ ಛಲದಲ್ಲಿದ್ದಾರೆ. 

ವಿಶ್ವದ ಅಗ್ರಮಾನ್ಯ ಆಟಗಾರ, ನಾರ್ವೆ ದೇಶದ ಮ್ಯಾಗ್ನಸ್ ಕಾರ್ಲಸನ್ ಅವರಿಲ್ಲದೇ ಟೂರ್ನಿ ಅಪೂರ್ಣ ಎನ್ನುವ ಚರ್ಚೆಗಳು ನಡೆದಿವೆ. ಆದರೆ ಸ್ವತಃ ಮ್ಯಾಗ್ನಸ್ ಅವರೇ ಕ್ಲಾಸಿಕಲ್ ಚೆಸ್‌ನಲ್ಲಿ ತಮಗೆ ಮಜಾ ಬರುತ್ತಿಲ್ಲ ಎಂದೂ ಈಗಾಗಲೇ ಹೇಳಿದ್ದಾರೆ. ಕಾರ್ಲಸನ್ ಅವರಲ್ಲಿದ ಗ್ರ್ಯಾಂಡ್‌ ಚೆಸ್ ಟೂರ್ ಅನ್ನು ಈಚೆಗೆ ಪ್ರಕಟಿಸಲಾಯಿತು. ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಗ್ರ್ಯಾಂಡ್ ಫೈನಲ್‌ಗೆ ಕ್ವಾಲಿಫೈ ಆಗಲು ಈ ಟೂರ್ನಿಯು ಕೊನೆಯ ಅವಕಾಶವಾಗಿದೆ.

ಅಮೆರಿಕದ ಫ್ಯಾಬಿಯಾನೊ ಕರುವಾನಾ, ಫ್ರಾನ್ಸ್‌ನ ಅಲಿರೇಝಾ ಫಿರೋಜಾ, ಶ್ರೇಷ್ಠ ಲಯದಲ್ಲಿರುವ ಅರ್ಮೆನಿಯಾ–ಅಮೆರಿಕನ್ ಲೆವೊನ್ ಅರೊನಿಯನ್ ಅವರು ಭಾರತೀ ಸ್ಪರ್ಧಾಳುಗಳನ್ನು ಎದುರಿಸುವರು. 

ADVERTISEMENT

ರ‍್ಯಾಪಿಡ್ ಮತ್ತು ಬ್ಲಿಟ್ಜ್ ವಿಭಾಗಗಳಲ್ಲಿ ಗುಕೇಶ್ ಅವರು ಉತ್ತಮಪ್ರದರ್ಶನ ನೀಡಿದ್ದರು. ಆದರೆ ಕ್ಲಾಸಿಕಲ್ ಚೆಸ್‌ ಎಂದರೆ ಅವರಿಗೆ ಅಚ್ಚುಮೆಚ್ಚು ಹಾಗೂ ಈ ಮಾದರಿಯಲ್ಲಿ ಅವರದ್ದು ಹೆಚ್ಚಿನ ಪಾರಮ್ಯ ಇದೆ. 

ಪ್ರಜ್ಞಾನಂದ ಅವರು ಮುಂದಿನ ವರ್ಷ ನಡೆಯಲಿರುವ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಗೆ ಅರ್ಹತೆ ಪಡೆಯುವತ್ತ ದಾಪುಗಾಲಿಟ್ಟಿದ್ದಾರೆ.  

ಗುಕೇಶ್ ಮತ್ತು ಪ್ರಜ್ಞಾನಂದ ಅವರು ಮುಂದಿನ ತಿಂಗಳು ಉಜ್ಬೇಕಿಸ್ತಾನದಲ್ಲಿ ನಡೆಯಲಿರುವ ಗ್ರ್ಯಾಂಡ್ ಸ್ವಿಸ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. 

ಜಿ.ಸಿ.ಟಿ ಸ್ಟ್ಯಾಂಡಿಂಗ್‌ನಲ್ಲಿ ಪ್ರಜ್ಞಾನಂದ ಅವರು ಗುಕೇಶ್‌ಗಿಂತ ಮುಂದಿದ್ದಾರೆ.  ಆದರೆ ಸ್ಥಿರ ಪ್ರದರ್ಶನ ಮಾತ್ರ ಇಲ್ಲಿ ನಿರ್ಣಾಯಕವಾಗಲಿದದೆ. ಇಬ್ಬರೂ ಅನುಭವಿ ಆಟಗಾರರು ತೋರುವ ತಾಳ್ಮೆ ಮತ್ತು ಏಕಾಗ್ರತೆಯ ಮಟ್ಟವೇ ಫಲಿತಾಂಶವನ್ನು ನಿರ್ಧರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಲಿವೆ. 

ಸ್ಪರ್ಧಿಗಳು

ಡಿ. ಗುಕೇಶ್, ಆರ್. ಪ್ರಜ್ಞಾನಂದ (ಇಬ್ಬರೂ ಭಾರತ), ಫ್ಯಾಬಿಯಾನೊ ಕರುವಾನಾ, ವೆಸ್ಲೈ ಸೋ, ಲೆವೊನ ಅರೊನಿಯನ್, ಸ್ಯಾಮ್ ಸೇವಿನ್ (ಎಲ್ಲರೂ ಅಮೆರಿಕ), ಮ್ಯಾಕ್ಸಿಮ್ ವೇಚೀರ್–ಲಾಗ್ರೇವ್, ಅಲಿರೇಜಾ ಫಿರೋಜಾ (ಇಬ್ಬರೂ ಫ್ರಾನ್ಸ್), ಡುಡಾ ಜಾನ್ ಕ್ರೈಜಸೋಫ್ (ಪೋಲೆಂಡ್), ನಾದಿರ್‌ಬೆಕ್ ಅಬ್ದುಸತಾರೋವ್ (ಉಜ್ಬೇಕಿಸ್ಥಾನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.