
ವಿಯ್ಕ್ ಆನ್ ಝೀ (ನೆದರ್ಲೆಂಡ್ಸ್): ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು 2025ರಲ್ಲಿ ನೆನಪಿನಲ್ಲುಳಿಯುವಂಥ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಈ ವರ್ಷ ಸುಧಾರಿತ ಪ್ರದರ್ಶನ ನೀಡುವ ಗುರಿಯಲ್ಲಿರುವ ಅವರು ಶನಿವಾರ ಆರಂಭವಾಗುವ ಟಾಟಾ ಸ್ಟೀಲ್ ಮಾಸ್ಟರ್ಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ವಿಶ್ವಕಪ್ ವಿಜೇತ ಜಾವೋಖಿರ್ ಸಿಂದರೋವ್ (ಉಜ್ಬೇಕಿಸ್ತಾನ) ಅವರನ್ನು ಎದುರಿಸಲಿದ್ದಾರೆ.
1938ರಲ್ಲಿ ಆರಂಭವಾದ ವಿಶ್ವದ ಅತಿ ಹಳೆಯ ಈ ಎಲೀಟ್ ಟೂರ್ನಿಯನ್ನು ಹಿಂದೆ ಕೋರಸ್ ಚೆಸ್ ಟೂರ್ನಿ ಎಂದು ಕರೆಯಲಾಗುತ್ತಿತ್ತು. 2011ರಿಂದ ಟಾಟಾ ಸ್ಟೀಲ್ ಮಾಸ್ಟರ್ಸ್ ಹೆಸರಿನಲ್ಲಿ ನಡೆಸಲಾಗುತ್ತಿದೆ. ಈ ಹಳೆಯ ಟೂರ್ನಿಯು ಈ ಬಾರಿ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ಸ್‌ಗಳನ್ನು ಸತ್ವಪರೀಕ್ಷೆಗೆ ಒಡ್ಡಿದೆ.
2024ರಲ್ಲಿ ವಿಶ್ವ ಚಾಂಪಿಯನ್ ಕಿರೀಟ ಧರಿಸಿದ್ದ ಗುಕೇಶ್ ಕಳೆದ ವರ್ಷ ಟಾಟಾ ಸ್ಟೀಲ್ ಟೂರ್ನಿಯಲ್ಲಿ ಸ್ವದೇಶದ ಆರ್.ಪ್ರಜ್ಞಾನಂದ ಅವರಿಗೆ ಟೈಬ್ರೇಕರ್‌ನಲ್ಲಿ ಸೋತು ರನ್ನರ್ ಅಪ್ ಆಗಿದ್ದರು. ಈ ವರ್ಷ ಅವರು ಸುಧಾರಿತ ನಿರ್ವಹಣೆ ತೋರುವ ವಿಶ್ವಾಸದಲ್ಲಿದ್ದಾರೆ.
ಆದರೆ ಈ ಟೂರ್ನಿಯ ನಂತರ ಗುಕೇಶ್ ನಿರಾಶೆ ಅನುಭವಿಸಿದ್ದೇ ಹೆಚ್ಚು. ವಿಶ್ವಕಪ್‌ನಲ್ಲಿ ಬೇಗನೇ ಹೊರಬಿದ್ದಿದ್ದ ಅವರು, ಗ್ರ್ಯಾಂಡ್ ಸ್ವಿಸ್ ಟೂರ್ನಿಯಲ್ಲೂ ನಿರಾಶೆ ಕಂಡಿದ್ದರು.
2025ರಲ್ಲಿ ಪ್ರಜ್ಞಾನಂದ ಅವರು ಮಾತ್ರ ಸ್ಥಿರ ಪ್ರದರ್ಶನ ನೀಡಿದ್ದು, ಈ ವರ್ಷದ ಮಾರ್ಚ್ 28 ರಿಂದ ಏಪ್ರಿಲ್ 16ರವರೆಗೆ ಸೈಪ್ರಸ್‌ನಲ್ಲಿ ನಡೆಯಲಿರುವ ಕ್ಯಾಂಡಿಡೇಟ್ಸ್ ಟೂರ್ನಿಗೆ ಸ್ಥಾನ ಪಡೆದ ಭಾರತದ ಏಕಮಾತ್ರ ಆಟಗಾರ ಎನಿಸಿದ್ದಾರೆ. ಅವರು ಮೊದಲ ಸುತ್ತಿನಲ್ಲಿ ಸ್ವದೇಶದ ಅರ್ಜುನ್ ಇರಿಗೇಶಿ ಅವರನ್ನು ಎದುರಿಸಲಿದ್ದಾರೆ.
ಈ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಅರ್ಜುನ್ ಇಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ನೆದರ್ಲೆಂಡ್ಸ್‌ನ ಕರಾವಳಿ ನಗರದಲ್ಲಿ ನಡೆಯುವ ಈ ಟೂರ್ನಿಯಲ್ಲಿ ಅವರು ಮೊದಲ ಬಾರಿ ಪ್ರಶಸ್ತಿ ಗೆಲ್ಲುವ ಆಸೆಯಲ್ಲಿದ್ದಾರೆ. ಭಾರತದ ನಾಲ್ಕನೇ ಆಟಗಾರ ಅರವಿಂದ ಚಿದಂಬರಮ್ ಅವರು 2700 ರೇಟಿಂಗ್ ಕಾಪಾಡಿಕೊಂಡಿದ್ದು, ತಮ್ಮ ವೃತ್ತಿ ಜೀವನದ ಅತಿ ಕಠಿಣ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಅವರು ಮೊದಲ ಸುತ್ತಿನಲ್ಲಿ ಜರ್ಮನಿಯ ಮಥಾಯಸ್ ಬ್ಲೂಬಮ್ ಅವರನ್ನು ಎದುರಿಸಲಿದ್ದಾರೆ.
14 ಮಂದಿ ಆಟಗಾರರಿರುವ ಈ ಟೂರ್ನಿಯ ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ ಅಮೆರಿಕದ ಹ್ಯಾನ್ಸ್ ನೀಮನ್, ಸ್ಲೊವೇನಿಯಾದ ವ್ಲಾದಿಮಿರ್ ಫೆಡೊಸೀವ್ ಅವರನ್ನು, ಜರ್ಮನಿಯ ವಿನ್ಸೆಂಟ್ ಕೀಮರ್, ನೆದರ್ಲೆಂಡ್ಸ್‌ನ ಅನಿಶ್ ಗಿರಿ ಅವರನ್ನು, ಟರ್ಕಿಯ ಯಾಗಿಝ್ ಎರ್ಡೋಗ್ಮಸ್, ಉಜ್ಬೇಕಿಸ್ತಾನದ ನಾದಿರ್ಬೆಕ್ ಅಬ್ದುಸತ್ತಾರೋವ್ ಅವರನ್ನು ಎದುರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.