ಗುಲ್ವೀರ್ ಸಿಂಗ್
ನವದೆಹಲಿ: ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ಗುಲ್ವೀರ್ ಸಿಂಗ್ ಅವರು ಒಳಾಂಗಣ 5,000 ಮೀ. ಓಟದ ಏಷ್ಯನ್ ದಾಖಲೆಯನ್ನು ಮುರಿದರು. ಜೊತೆಗೆ ವರ್ಷದ ಕೊನೆಯಲ್ಲಿ ನಡೆಯುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೂ ಅರ್ಹತೆ ಪಡೆದರು.
ಅಮೆರಿಕದ ಬಾಸ್ಟನ್‌ನಲ್ಲಿ ಶುಕ್ರವಾರ ನಡೆದ ಡಿಎಂಆರ್ ಚಾಲೆಂಜ್ ಒಳಾಂಗಣ ಕೂಟದಲ್ಲಿ ಗುಲ್ವೀರ್ ಈ ದೂರವನ್ನು 12 ನಿಮಿಷ 59.77 ಸೆ.ಗಳಲ್ಲಿ ಪೂರೈಸಿ ಈ ಸಾಧನೆಗೆ ಪಾತ್ರರಾದರು. 5000 ಮೀ. ಓಟವನ್ನು 13 ನಿಮಿಷಗಳ ಒಳಗೆ ಕ್ರಮಿಸಿದ ಭಾರತದ ಮೊದಲ ಓಟಗಾರನೆಂಬ ಹಿರಿಮೆಯೂ 26 ವರ್ಷ ವಯಸ್ಸಿನ ಸೇನಾಪಡೆಯ ಗುಲ್ವೀರ್ ಅವರದ್ದಾಯಿತು.
ಥಾಯ್ಲೆಂಡ್‌ನ ಕೀರನ್ ತುಂಟಿವೇಟ್ ಅವರು 2022ರಲ್ಲಿ ಸ್ಥಾಪಿಸಿದ ಏಷ್ಯನ್ ಒಳಾಂಗಣ ಓಟದ ದಾಖಲೆಯನ್ನು (13ನಿ.08.41 ಸೆ.) ಅವರು ಮುರಿದರು. ಅವರು 5000 ಮೀ. ಒಳಾಂಗಣ ಓಟದಲ್ಲಿ ರಾಷ್ಟ್ರೀಯ ದಾಖಲೆಯನ್ನು (13ನಿ.11.82 ಸೆ.) 12 ಸೆಕೆಂಡುಗಳಿಂದ ಉತ್ತಮಪಡಿಸಿದರು.
ಟೋಕಿಯೊದಲ್ಲಿ ನಿಗದಿಯಾಗಿರುವ 2025ರ (ಸೆಪ್ಟೆಂಬರ್ 13 ರಿಂದ 21) ವಿಶ್ವ ಚಾಂಪಿಯನ್‌ಷಿಪ್‌ಗೆ ಪ್ರವೇಶ ಅರ್ಹತಾ ಮಟ್ಟವನ್ನು 13ನಿ.01.00ಗೆ ನಿಗದಿಪಡಿಸಲಾಗಿದೆ.
ಆದರೆ ಗುಲ್ವೀರ್ ಅವರ ದಾಖಲೆ ಅವಧಿಯನ್ನು ರಾಷ್ಟ್ರೀಯ ಹೊರಾಂಗಣ ದಾಖಲೆಯನ್ನಾಗಿ ಪರಿಗಣಿಸಲಾಗದು ಎಂದು ಭಾರತದ ಮುಖ್ಯ ಅಥ್ಲೆಟಿಕ್ ಕೋಚ್ ರಾಧಾಕೃಷ್ಣನ್ ನಾಯರ್ ತಿಳಿಸಿದ್ದಾರೆ.
‘ಅದು ಒಳಾಂಗಣ ರಾಷ್ಟ್ರೀಯ ದಾಖಲೆ ಮತ್ತು ಏಷ್ಯನ್ ಒಳಾಂಗಣ ದಾಖಲೆ. ತಿರುವುಗಳು (ಲ್ಯಾಪ್‌ಗಳು) ಕಡಿಮೆ ಇರುವ ಕಾರಣ ಹೊರಾಂಗಣ ಟ್ರ್ಯಾಕ್‌ನಲ್ಲಿ ಅಥ್ಲೀಟುಗಳು ಇನ್ನೂ ವೇಗವಾಗಿ ಓಡಬಹುದು’ ಎಂದು ನಾಯರ್ ಹೇಳಿದರು.
‘ರೇಸ್ ವೇಳೆ ಮೈಲಿಗಲ್ಲು ಸ್ಥಾಪನೆಯಾಗಿರುವುದರಿಂದ ಸಂಸತವಾಗಿದೆ. ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೂ ಅರ್ಹತೆಯನ್ನು ಸಂಪಾದಿಸಿರುವುದರಿಂದ ಖುಷಿಯಾಗಿದೆ’ ಎಂದರು.
ಒಲಿಂಪಿಕ್ 1500 ಮೀ. ಓಟದ ಚಾಂಪಿಯನ್ ಕೋಲ್ ಹೋಕರ್ (ಅಮೆರಿಕ) 12ನಿ.57.82 ಸೆ.ಗಳಲ್ಲಿ ದೂರ ಕ್ರಮಿಸಿ ಚಿನ್ನ ಗೆದ್ದರು. ಅಮೆರಿಕದ ಕೂಪರ್ ಟಿಯರೆ (12:57.97 ಸೆ.) ಬೆಳ್ಳಿ ಹಾಗೂ ಆಸ್ಟ್ರೇಲಿಯಾದ ಜಾಕ್ ರೇನರ್ (12:59.43ಸೆ.) ಕಂಚಿನ ಪದಕ ತಮ್ಮದಾಗಿಸಿಕೊಂಡರು.
ರಾಷ್ಟ್ರೀಯ 10000 ಮೀ. ಓಟದ ದಾಖಲೆಯೂ (28:14.88 ಸೆ.) ಗುಲ್ವೀರ್ ಹೆಸರಿನಲ್ಲಿದೆ. ಕಳೆದ ವರ್ಷ ಜಪಾನ್‌ನ ಹಚಿಯೊಜಿಯಲ್ಲಿ ಅವರು ಈ ದಾಖಲೆ ಸ್ಥಾಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.