ADVERTISEMENT

ಗುವಾಹಟಿ ಮಾಸ್ಟರ್ಸ್ ಬ್ಯಾಡ್ಮಿಂಟನ್: ಸಾರಸ್ವಾತ್‌ಗೆ ಚೊಚ್ಚಲ ಸೂಪರ್ 100 ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 13:30 IST
Last Updated 7 ಡಿಸೆಂಬರ್ 2025, 13:30 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ಗುವಾಹಟಿ: ಭಾರತದ ಆಟಗಾರರ ವ್ಯವಹಾರವಾಗಿದ್ದ ಫೈನಲ್‌ನಲ್ಲಿ ರಾಜಸ್ಥಾನದ ಸಂಸ್ಕಾರ್‌ ಸಾರಸ್ವತ್ ಅವರು ಮೂರು ಗೇಮ್‌ಗಳ ಸೆಣಸಾಟದ ನಂತರ ಮಿಥುನ್‌ ಮಂಜುನಾಥ್ ಅವರನ್ನು ಸೋಲಿಸಿ ಗುವಾಹಟಿ ಮಾಸ್ಟರ್ಸ್‌ ಪ್ರಶಸ್ತಿ ಗೆದ್ದುಕೊಂಡರು. ಇದು ಸಾರಸ್ವತ್‌ ಅವರಿಗೆ ಮೊದಲ ಸೂಪರ್ 100 ಪ್ರಶಸ್ತಿಯಾಗಿದೆ.

ಭಾನುವಾರ 50 ನಿಮಿಷಗಳವರೆಗೆ ನಡೆದ ಫೈನಲ್‌ನಲ್ಲಿ ಜೋಧಪುರದ ಸಾರಸ್ವತ್‌ 21–11, 17–21, 21–13 ರಿಂದ ಮಾಜಿ ರಾಷ್ಟ್ರೀಯ ಚಾಂಪಿಯನ್, ಕರ್ನಾಟಕದ ಮಿಥುನ್ ಅವರನ್ನು ಸೋಲಿಸಿದರು. 

ಗುವಾಹಟಿಯ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಸಾರಸ್ವತ್, ದೇಶಿ ಟೂರ್ನಿಯಲ್ಲಿ ಈಗಾಗಲೇ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಚಾಂಪಿಯನ್‌ಷಿಪ್‌ನ ಪುರುಷರ ಡಬಲ್ಸ್‌ನಲ್ಲಿ ಅರ್ಷ್‌ ಮೊಹಮ್ಮದ್ ಜೊತೆಗೂಡಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಇದಕ್ಕೆ ಮೊದಲು ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಸಿಂಗಲ್ಸ್ ಕಿರೀಟ ಧರಿಸಿದ್ದರು.

ADVERTISEMENT

ಬಲಗಾಲಿಗೆ ದೊಡ್ಡ ಪಟ್ಟಿಕಟ್ಟಿಕೊಂಡಿದ್ದ ಸಾರಸ್ವತ್‌ ಮೊದಲ ಗೇಮ್‌ನಲ್ಲಿ 7–7ರಲ್ಲಿ ಮಾಡಿಕೊಂಡಿದ್ದರು. ನಂತರ, 19 ವರ್ಷ ವಯಸ್ಸಿನ ಸಾರಸ್ವತ್ 11–9, 14–10ರಲ್ಲಿ ಮುನ್ನಡೆ ಪಡೆದರು. ಬಳಿಕ ಅವರು ಗೇಮ್ ಪಡೆಯಲು ಕಷ್ಟಪಡಲಿಲ್ಲ.

ಎರಡನೇ ಗೇಮ್‌ನಲ್ಲಿ ಸಾರಸ್ವತ್ ಆಕ್ರಮಣಕಾರಿ ಆಟ ಮುಂದುವರಿಸಿದರು. ಒಂದು ಹಂತದಲ್ಲಿ 8–2ರಲ್ಲಿ ಮುನ್ನಡೆ ಸಹ ಪಡೆದಿದ್ದರು. ದೀರ್ಘ ಸ್ಮಾಶ್‌ಗಳ ಮೂಲಕ ಅವರು ಮಿಥುನ್ ಅವರನ್ನು ಒತ್ತಡಕ್ಕೆ ಗುರಿಪಡಿಸಿದರು. ಆದರೆ ಕರ್ನಾಟಕ ಆಟಗಾರ ಚೇತರಿಸಿಕೊಂಡರು. ಒಂದು ಹಂತದಲ್ಲಂತೂ ಸತತ ಐದು ಪಾಯಿಂಟ್‌ ಪಡೆದು 11–10ರಲ್ಲಿ ಮುನ್ನಡೆ ಸಾಧಿಸಿದರು. ನಂತರ ಹಿಡಿತ ಮಿಥುನ್ ಕಡೆ ವಾಲಿತು. 18–16ರಲ್ಲಿ ಮುನ್ನಡೆದ ಅವರು ಗೇಮ್‌ ಗೆದ್ದರು. ಆ ಮೂಲಕ ಪಂದ್ಯವನ್ನು ನಿರ್ಣಾಯಕ ಗೇಮ್‌ಗೆ ಒಯ್ದರು.

ಮೂರನೇ ಸೆಟ್‌ನಲ್ಲಿ ಬಿರುಸಿನಿಂದ ಆಡಿದ ಸಾರಸ್ವತ್ 7–0 ಮುನ್ನಡೆ ಪಡೆದರಲ್ಲದೇ, ವಿರಾಮದ ವೇಳೆಗೆ 11–5 ಲೀಡ್ ಪಡೆದರು.  ಈ ಹಂತದಲ್ಲಿ ಅವರು ಪಂದ್ಯದಲ್ಲಿ ಹಿಡಿತ ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.