ADVERTISEMENT

ಸ್ಪೆಷಲ್ ಒಲಿಂಪಿಕ್ ವರ್ಲ್ಡ್‌ ಗೇಮ್ಸ್‌: ಹರೀಶ್‌ಗೆ 3 ಚಿನ್ನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2023, 16:04 IST
Last Updated 22 ಜೂನ್ 2023, 16:04 IST
ಪದಕಗಳೊಂದಿಗೆ ಹರೀಶ್ ವಿ
ಪದಕಗಳೊಂದಿಗೆ ಹರೀಶ್ ವಿ   

ಮಂಗಳೂರು: ಜರ್ಮನಿಯ ಬರ್ಲಿನ್‌ನಲ್ಲಿ ನಡೆಯುತ್ತಿರುವ ಸ್ಪೆಷಲ್ ಒಲಿಂಪಿಕ್ಸ್‌ ವರ್ಲ್ಡ್‌ ಗೇಮ್ಸ್‌ನ ಪವರ್ ಲಿಫ್ಟಿಂಗ್‌ನಲ್ಲಿ ನಗರದ ಸಾನಿಧ್ಯ ವಸತಿ ಶಾಲೆ ಮತ್ತು ತರಬೇತಿ ಕೇಂದ್ರದ ವಿದ್ಯಾರ್ಥಿ, ಬೆಂಗಳೂರಿನ ಹರೀಶ್ ವಿ. ಮೂರು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗಳಿಸಿದ್ದಾರೆ.

ಎಂ12 ವಿಭಾಗದ ಬೆಂಚ್‌ಪ್ರೆಸ್‌ ಮತ್ತು ಸ್ಕ್ವಾಟ್‌ನಲ್ಲಿ ಚಿನ್ನ ಗೆದ್ದಿರುವ ಅವರು ಡೆಡ್‍ಲಿಫ್ಟ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಮೂರೂ ವಿಭಾಗಗಳ ಸಮಗ್ರ (ಕಂಬೈನ್ಡ್‌) ಸಾಧನೆಯ ಚಿನ್ನದ ಪದಕವೂ ಅವರ ಪಾಲಾಯಿತು.

ಬೆಂಚ್‍ ಪ್ರೆಸ್‍ನ ಮೊದಲ ಪ್ರಯತ್ನದಲ್ಲಿ 75 ಕೆ.ಜಿ. ಎತ್ತಿದ ಹರೀಶ್ ಎರಡನೇ ಪ್ರಯತ್ನದಲ್ಲಿ 80 ಕೆ.ಜಿ. ಎತ್ತಿ ಚಿನ್ನಕ್ಕೆ ಮುತ್ತಿಕ್ಕಿದರು. ನೌರು ಗಣರಾಜ್ಯದ ಅಗಿರ್‌ ಜಿಂಜೆಲ್ 77.50 ಕೆಜಿ ಎತ್ತಿ ಬೆಳ್ಳಿ ಪದಕ ಗಳಿಸಿದರು.

ADVERTISEMENT

ಸ್ಕ್ವಾಟ್‌ನ ಮೊದಲ ಪ್ರಯತ್ನದಲ್ಲಿ ಹರೀಶ್‌ 130 ಕೆ.ಜಿ. ಎತ್ತಿದ್ದರು. ಎರಡನೇ ಪ್ರಯತ್ನದಲ್ಲಿ 140 ಕೆ.ಜಿ. ಸಾಧನೆಯೊಂದಿಗೆ ಚಿನ್ನ ಗೆದ್ದರು. ಚೀನಾದ ಗುವೊ ಪೆಂಗ್ಯಂಗ್ (92.50 ಕೆಜಿ) ಬೆಳ್ಳಿ ಮತ್ತು ನೌರು ಗಣರಾಜ್ಯದ ಅಗಿರ್ ಜಿಂಜೆಲ್ (85 ಕೆ.ಜಿ.) ಕಂಚಿನ ಪದಕ ಗಳಿಸಿದರು. ಡೆಡ್‍ಲಿಫ್ಟ್‌ನಲ್ಲಿ ಹರೀಶ್ ಅವರ ಸಾಧನೆ 145 ಕೆ.ಜಿ. ಆಗಿತ್ತು. ಗುವೊ ಪೆಂಗ್ಯಂಗ್ 147.50 ಕೆ.ಜಿ. ಸಾಧನೆಯೊಂದಿಗೆ ಚಿನ್ನ ಗಳಿಸಿದರು. 125 ಕೆ.ಜಿ. ಎತ್ತಿದ ಅಗಿರ್ ಜಿಂಜೆಲ್ ಕಂಚಿನ ಪದಕ ಗಳಿಸಿದರು.

ಮೂರೂ ವಿಭಾಗದಲ್ಲಿ ಹರೀಶ್ ಒಟ್ಟು 365 ಕೆ.ಜಿ. ಸಮಗ್ರ ಸಾಧನೆ ಮಾಡಿದರೆ ಅಗಿರ್ ಜಿಂಜೆಲ್ 287.50 ಕೆ.ಜಿ.ಯೊಂದಿಗೆ ಬೆಳ್ಳಿ ಮತ್ತು ಗುವೊ ಪೆಂಗ್ಯಂಗ್ 285 ಕೆ.ಜಿ.ಯೊಂದಿಗೆ ಕಂಚಿನ ಪದಕ ತಮ್ಮದಾಗಿಸಿಕೊಂಡರು.

2018ರಲ್ಲಿ ಸಾನ್ನಿಧ್ಯ ವಸತಿ ಶಾಲೆಗೆ ಸೇರಿದ ಹರೀಶ್‌ ಅವರಿಗೆ ಪ್ರೇಮನಾಥ್ ಉಳ್ಳಾಲ್, ಸರಸ್ವತಿ ಪುತ್ರನ್ ಹಾಗೂ ವಿಶಾಲ್ ಅವರು ತರಬೇತಿ ನೀಡುತ್ತಿದ್ದಾರೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.