ADVERTISEMENT

ಬೀಲ್‌ ಚೆಸ್‌ ಉತ್ಸವ: ಹರಿಕೃಷ್ಣಗೆ ಅಗ್ರಸ್ಥಾನ

ಪಿಟಿಐ
Published 19 ಜುಲೈ 2020, 14:17 IST
Last Updated 19 ಜುಲೈ 2020, 14:17 IST
ಪೆಂಟಾಲ ಹರಿಕೃಷ್ಣ (ಬಲ) –ಪಿಟಿಐ ಚಿತ್ರ
ಪೆಂಟಾಲ ಹರಿಕೃಷ್ಣ (ಬಲ) –ಪಿಟಿಐ ಚಿತ್ರ   

ಚೆನ್ನೈ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪೆಂಟಾಲ ಹರಿಕೃಷ್ಣ ಅವರು ಸ್ವಿಟ್ಜರ್ಲೆಂಡ್‌ನಲ್ಲಿ 53ನೇ ಬೀಲ್‌ ಚೆಸ್‌ ಉತ್ಸವದ ಭಾಗವಾಗಿ ನಡೆದ ಎಸೆಂಟಸ್‌ ಚೆಸ್‌960 ಟೂರ್ನಿಯಲ್ಲಿ ಅಗ್ರಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಏಳು ಸುತ್ತುಗಳಲ್ಲಿ ಅವರು ಒಟ್ಟು 5.5 ಪಾಯಿಂಟ್ಸ್‌ ಕಲೆಹಾಕಿದರು.

ಹರಿಕೃಷ್ಣ (ಇಎಲ್‌ಒ ರೇಟಿಂಗ್ಸ್‌ 2690) ಏಳೂ ಸುತ್ತುಗಳಲ್ಲಿ ಅಜೇಯರಾಗುಳಿದರು. ಪೋಲೆಂಡ್‌ನ ರಾಡೊಸ್ಲಾವ್‌ ವೊಜ್ತಾಸ್‌ಜೆಕ್‌ ಅವರು ಅಂತಿಮ ಸುತ್ತಿನಲ್ಲಿ ಸ್ವಿಸ್‌ನ ನೋಯಲ್‌ ಸ್ಟಡರ್‌ ಎದುರು ಸೋತಿದ್ದು ಹರಿಕೃಷ್ಣ ಅವರಿಗೆ ವರವಾಗಿ ಪರಿಣಮಿಸಿತು.‌

ಜರ್ಮನಿಯ 15ರ ಪ್ರಾಯದ ವಿನ್ಸೆಂಟ್‌ ಕೇಮರ್‌ (5 ಪಾಯಿಂಟ್ಸ್) ಟೂರ್ನಿಯಲ್ಲಿ ಎರಡನೇ ಸ್ಥಾನ ಗಳಿಸಿ ಅಚ್ಚರಿ ಮೂಡಿಸಿದರು. 4.5 ಪಾಯಿಂಟ್ಸ್‌ ಗಳಿಸಿದ ರಾಡೊಸ್ಲಾವ್‌ ವೊಜ್ತಾಸ್‌ಜೆಕ್‌ ಮೂರನೇ ಸ್ಥಾನ ಪಡೆದರು.

ADVERTISEMENT

ಮೊದಲ ಸುತ್ತಿನ ಹಣಾಹಣಿಯಲ್ಲಿ ಹರಿಕೃಷ್ಣ ಅವರು ಇಂಗ್ಲೆಂಡ್‌ನ ಮೈಕೆಲ್‌ ಆ್ಯಡಮ್ಸ್‌ ಎದುರು ಡ್ರಾ ಸಾಧಿಸಿದ್ದರು. ಎರಡು ಮತ್ತು ಮೂರನೇ ಸುತ್ತುಗಳಲ್ಲಿ ಕ್ರಮವಾಗಿ ಸ್ವಿಟ್ಜರ್ಲೆಂಡ್‌ನ ಅಲೆಕ್ಸಾಂಡರ್‌ ಡೊನ್‌ಚೆಂಕೊ ಹಾಗೂ ನೋಯಲ್‌ ಸ್ಟಡರ್‌ ಅವರನ್ನು ಮಣಿಸಿದ್ದರು.

34 ವರ್ಷದ ಹರಿಕೃಷ್ಣ ಅವರು ನಾಲ್ಕು ಮತ್ತು ಐದನೇ ಸುತ್ತುಗಳಲ್ಲಿ ಕ್ರಮವಾಗಿ ಕೇಮರ್‌ ಹಾಗೂವೊಜ್ತಾಸ್‌ಜೆಕ್ ಎದುರು ಡ್ರಾಕ್ಕೆ ತೃಪ್ತಿಪಡಬೇಕಾಯಿತು. ನಂತರದ ಎರಡು ಹಣಾಹಣಿಗಳಲ್ಲಿ ಫ್ರಾನ್ಸ್‌ನ ರೊಮೇನ್‌ ಎಡ್ವರ್ಡ್‌ ಹಾಗೂ ಸ್ಪೇನ್‌ನ ಡೇವಿಡ್‌ ಆ್ಯಂಟನ್‌ ಎದುರು ಗೆದ್ದು ಬೀಗಿದರು.

ಕೋವಿಡ್‌ ಹಿನ್ನೆಲೆಯಲ್ಲಿ ವಿಧಿಸಿರುವ ಪ್ರಯಾಣ ನಿರ್ಬಂಧದ ಕಾರಣಯುಎಇಯ ಗ್ರ್ಯಾಂಡ್‌ಮಾಸ್ಟರ್‌ ಸಲೀಮ್‌ ಸಲೇಹ್‌ ಅವರಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಅವರ ಬದಲಿಗೆ ಅಜರ್‌ಬೈಜಾನ್‌ನ ಅರ್ಕಾದಿ ನೈದಿತ್‌ ಅವರು ಕಾಯಿಗಳನ್ನು ಮುನ್ನಡೆಸುವ ಅವಕಾಶ ಪಡೆದರು.

ಟೂರ್ನಿಯ ರ‍್ಯಾಪಿಡ್‌ ವಿಭಾಗದ ಸ್ಪರ್ಧೆಗಳುಭಾನುವಾರವೇ ನಡೆಯಲಿದ್ದು, ಕ್ಲಾಸಿಕಲ್‌ ಸ್ಪರ್ಧೆಗಳು 21ರಂದು ಆರಂಭವಾಗಲಿವೆ.

’ಬೀಲ್‌ ಚೆಸ್‌ ಉತ್ಸವದಲ್ಲಿ, ಕೋವಿಡ್‌ನಿಂದ ಜಾರಿಗೊಳಿಸಲಾಗಿರುವ ಎಲ್ಲ ನಿಯಮಗಳನ್ನು ಪಾಲಿಸಲಾಗುತ್ತಿದೆ‘ ಎಂದು ಟೂರ್ನಿಯ ವೆಬ್‌ಸೈಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.