ADVERTISEMENT

ಹರ್ಮನ್‌ಪ್ರೀತ್ ಸಿಂಗ್, ಸವಿತಾಗೆ ಹಾಕಿ ಇಂಡಿಯಾ ಪ್ರಶಸ್ತಿ

ಪಿಟಿಐ
Published 15 ಮಾರ್ಚ್ 2025, 23:30 IST
Last Updated 15 ಮಾರ್ಚ್ 2025, 23:30 IST
ಹರ್ಮನ್‌ಪ್ರೀತ್ ಸಿಂಗ್ 
ಹರ್ಮನ್‌ಪ್ರೀತ್ ಸಿಂಗ್    

ನವದೆಹಲಿ: ಭಾರತ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಮಹಿಳಾ ತಂಡದ ಅನುಭವಿ ಗೋಲ್‌ಕೀಪರ್ ಸವಿತಾ ಪೂನಿಯಾ ಅವರಿಗೆ ಕ್ರಮವಾಗಿ ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಬಲ್ಬೀರ್ ಸಿಂಗ್ ಸೀನಿಯರ್ ಅವರ ಹೆಸರಿನ ಈ ಪ್ರಶಸ್ತಿಯನ್ನು ಪ್ರತಿವರ್ಷ ಉತ್ತಮ ಸಾಧನೆ ಮಾಡಿದ ಆಟಗಾರ ಹಾಗೂ ಆಟಗಾರ್ತಿಗೆ ನೀಡಲಾಗುತ್ತದೆ.  ಭಾರತದ ಹಾಕಿಕ್ರೀಡೆಯ ಶತಮಾನೋತ್ಸವ, 1975ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನೆ ಹಾಗೂ ಹಾಕಿ ಇಂಡಿಯಾ 7ನೇ ವಾರ್ಷಿಕ  ಸಮಾರಂಭದಲ್ಲಿ ಆಟಗಾರರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 

2024ರ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಕಂಚಿನ ಪದಕ ಗೆದ್ದ ಪುರುಷರ ತಂಡವನ್ನು ಹರ್ಮನ್‌ಪ್ರೀತ್ ಮುನ್ನಡೆಸಿದ್ದರು. 2020ರ ಟೋಕಿಯೊ ಒಲಿಂಪಿಕ್ ಕೂಟದ ಕಂಚಿನ ಪದಕ ಗೆದ್ದಿದ್ದ ತಂಡದಲ್ಲಿಯೂ ಅವರು ಆಡಿದ್ದರು. 

ADVERTISEMENT

ಟೋಕಿಯೊ ಒಲಿಂಪಿಕ್ ಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದ ಭಾರತ ಮಹಿಳಾ ತಂಡದಲ್ಲಿ ಸವಿತಾ ಆಡಿದ್ದರು. ಸವಿತಾ ಅವರಿಗೆ ವಾರ್ಷಿಕ ಗೌರವದ ಜೊತೆಗೆ ಬಲ್ಜೀತ್ ಸಿಂಗ್ ಶ್ರೇಷ್ಠ ಗೋಲ್‌ಕೀಪರ್ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಯಿತು. 

‘ಎರಡೂ ಪ್ರಶಸ್ತಿಗಳಿಗೆ ನಾನು ಆಯ್ಕೆಯಾಗಿರುವುದು ಹೆಮ್ಮೆಯಾಗುತ್ತಿದೆ. ತಂಡದ ಉಳಿದ ಆಟಗಾರ್ತಿಯರ ಬೆಂಬಲದಿಂದ ನನಗೆ ಈ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದು ಸವಿತಾ ಹರ್ಷ ವ್ಯಕ್ತಪಡಿಸಿದ್ದಾರೆ.

‘ಪ್ರಶಸ್ತಿ ಸಂದಿರುವುದು ಬಹಳ ಖುಷಿಯಾಗಿದೆ. ಕಠಿಣ ಪರಿಶ್ರಮದಿಂದ ಗುರಿ ಸಾಧನೆ ಮಾಡುವುದು ಸಾಧ್ಯ ನಮ್ಮ ಸಾಧನೆಯು ಯುವ ಆಟಗಾರರಿಗೆ ಪ್ರೇರಣೆಯಾಗಲಿ’ ಎಂದು ಹರ್ಮನ್‌ ಹೇಳಿದ್ದಾರೆ. 

ಅಭಿಷೇಕ್ (ಫಾರ್ವರ್ಡ್), ಹಾರ್ದಿಕ್ ಸಿಂಗ್ (ಮಿಡ್‌ಫೀಲ್ಡರ್), ಅಮಿತ್ ರೋಹಿದಾಸ್ (ಡಿಫೆಂಡರ್) ಅವರಿಗೆ ವಾರ್ಷಿಕ ಪ್ರಶಸ್ತಿ ನೀಡಲಾಯಿತು. 

ಅರೈಜೀತ್ ಸಿಂಗ್ ಹುಂಡಾಲ್ ಅವರಿಗೆ 21 ವರ್ಷದೊಳಗಿನ ಪುರುಷರ ವಿಭಾಗದಲ್ಲಿ ಜುಗರಾಜ್ ಸಿಂಗ್ ಪ್ರಶಸ್ತಿ, ದೀಪಿಕಾ ಅವರಿಗೆ ಮಹಿಳಾ ವಿಭಾಗದ ಪ್ರಶಸ್ತಿ ನೀಡಲಾಯಿತು. ಪಿ.ಆರ್. ಶ್ರೀಜೇಶ್ ಅವರನ್ನೂ ಸನ್ಮಾನಿಸಲಾಯಿತು. 

50 ವರ್ಷಗಳ ಹಿಂದೆ ವಿಶ್ವಕಪ್ ಜಯಿಸಿದ್ದ ಭಾರತ ತಂಡದ ಆಟಗಾರರಿಗೆ ಮೇಜರ್ ಧ್ಯಾನಚಂದ್ ಜೀವಮಾನ ಸಾಧನೆ ಪುರಸ್ಕಾರ ನೀಡಲಾಯಿತು. 

ಕೇಂದ್ರದ ಮಾಜಿ ಕ್ರೀಡಾ ಸಚಿವ ಕಿರಣ್ ರಿಜಿಜು, ಹಾಕಿ ಇಂಡಿಯಾ ಅಧ್ಯಕ್ಷ ದಿಲಿಪ್ ಟಿರ್ಕಿ, ಮಹಾಪ್ರಧಾನ ಕಾರ್ಯದರ್ಶಿ ಭೋಲಾನಾಥ್ ಸಿಂಗ್ ಅವರು ಹಾಜರಿದ್ದರು. 

ಸವಿತಾ ಪೂನಿಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.