ADVERTISEMENT

Tokyo Olympic| ಹಾಕಿ: ಭಾರತ ಪುರುಷರ ತಂಡದ ಶುಭಾರಂಭ

ಹಾಕಿ: ಎರಡು ಗೋಲು ಗಳಿಸಿದ ಹರ್ಮನ್‌ಪ್ರೀತ್‌; ನ್ಯೂಜಿಲೆಂಡ್‌ ಎದುರು ಗೆಲುವು

ಪಿಟಿಐ
Published 24 ಜುಲೈ 2021, 18:24 IST
Last Updated 24 ಜುಲೈ 2021, 18:24 IST
ಹರ್ಮನ್‌ಪ್ರೀತ್ ಸಿಂಗ್ (ಮಧ್ಯದಲ್ಲಿರುವವರು) ಸಹ ಆಟಗಾರರ ಜೊತೆ ಸಂಭ್ರಮಿಸಿದರು –ಪಿಟಿಐ ಚಿತ್ರ
ಹರ್ಮನ್‌ಪ್ರೀತ್ ಸಿಂಗ್ (ಮಧ್ಯದಲ್ಲಿರುವವರು) ಸಹ ಆಟಗಾರರ ಜೊತೆ ಸಂಭ್ರಮಿಸಿದರು –ಪಿಟಿಐ ಚಿತ್ರ   

ಟೋಕಿಯೊ: ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲು ಗಳಿಸಿ ಮಂಚಿದರೆ, ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಗೋಲುಪೆಟ್ಟಿಗೆ ಮುಂದೆ ‘ಗೋಡೆ’ಯಾಗಿ ನಿಂತರು. ಇದರ ಪರಿಣಾಮ ಭಾರತ ಹಾಕಿ ತಂಡ ಶುಭಾರಂಭ ಮಾಡಿತು.

ಶನಿವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ 3–2ರಿಂದ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿತು. ಕೊನೆಯ ಹಂತದಲ್ಲಿ ನ್ಯೂಜಿಲೆಂಡ್ ಭರ್ಜರಿ ಆಟವಾಡಿ ತಿರುಗೇಟು ನಿಡಲು ಪ್ರಯತ್ನಿಸಿತು. ಹೀಗಾಗಿ ಪಂದ್ಯ ರೋಚಕವಾಯಿತು. ಆದರೆ ಸವಾಲನ್ನು ಮೀರಿ ನಿಂತ ಮನಪ್ರೀತ್ ಸಿಂಗ್ ಬಳಗ ವಿಜಯಿಯಾಯಿತು.

ಒಯಿ ಹಾಕಿ ಕ್ರೀಡಾಂಗಣದಲ್ಲಿ 10ನೇ ನಿಮಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ರೂಪಿಂದರ್ ಪಾಲ್ ಸಿಂಗ್ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. 26 ಮತ್ತು 33ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಗಳಿಸಿದ ಗೋಲುಗಳೊಂದಿಗೆ ತಂಡದ ಮುನ್ನಡೆ ಮತ್ತಷ್ಟು ಹೆಚ್ಚಿತು.

ADVERTISEMENT

ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತಕ್ಕೆ ಎಂಟನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಆರನೇ ನಿಮಿಷದಲ್ಲೇ ಆಘಾತ ನೀಡಿತು. ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಕೇನ್ ರಸೆಲ್ ಗೋಲು ಗಳಿಸಿದರು. 3–1ರ ಹಿನ್ನಡೆಯಲ್ಲಿದ್ದಾಗ 43ನೇ ನಿಮಿಷದಲ್ಲಿ ಸ್ಟೀಫನ್ ಜೆನಿಸ್‌ ಗೋಲು ಗಳಿಸಿ ಭರವಸೆ ಮೂಡಿಸಿದರು. ಆದರೆ ನಂತರ ಶ್ರೀಜೇಶ್ ಅವರನ್ನು ವಂಚಿಸಿ ಚೆಂಡನ್ನು ಗುರಿ ಸೇರಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ.

ಗೋಲು ಗಳಿಸದೇ ಇದ್ದರೂ ಸ್ಟ್ರೈಕರ್ ಮನದೀಪ್ ಸಿಂಗ್ ಉತ್ತಮ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. 10ನೇ ನಿಮಿಷದಲ್ಲಿ ತಂಡಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಗಲು ಆವರು ಕಾರಣರಾದರು. ಅದನ್ನು ರೂಪಿಂದರ್ ಗೋಲಾಗಿ ಪರಿವರ್ತಿಸಿದರು. ನಂತರ ಪ್ರಬಲ ದಾಳಿಗೆ ಮುಂದಾದ ನ್ಯೂಜಿಲೆಂಡ್ ನಾಲ್ಕು ಸತತ ಪೆನಾಲ್ಟಿ ಕಾರ್ನರ್‌ಗಳನ್ನು ಗಳಿಸಿತು.

ಮರುಹೋರಾಟ ನಡೆಸಿದ ಭಾರತ ಗುರ್ಜಂತ್ ಮೂಲಕ ಗೋಲು ಗಳಿಸುವ ಅವಕಾಶ ಹೊಂದಿತ್ತು. ಆದರೆ ಎದುರಾಳಿ ತಂಡದ ಗೋಲ್‌ಕೀಪರ್ ಲಿಯಾನ್ ಹೇವಾರ್ಡ್‌ ಅವರು ಆಡ್ಡಿಯಾದರು. ಮೊದಲಾರ್ಧದ ಮುಕ್ತಾಯಕ್ಕೆ ನಾಲ್ಕು ನಿಮಿಷಗಳು ಇದ್ದಾಗ ಮನಪ್ರೀತ್ ಸಿಂಗ್ ಅವರ ಮುನ್ನಡೆಯನ್ನೂ ಹೇವಾರ್ಡ್ ವಿಫಲಗೊಳಿಸಿದರು. ನಿಗದಿತ ಅವಧಿ ಮುಕ್ತಾಯಕ್ಕೆ ಮೂರು ನಿಮಿಷಗಳು ಇದ್ದಾಗ ಭಾರತದ ಮುನ್ನಡೆ ಮತ್ತಷ್ಟು ಹೆಚ್ಚಿಸಲು ಲಲಿತ್ ಉಪಾಧ್ಯಾಯ ಪ್ರಯತ್ನಿಸಿದರು. ಆದರೆ ಆಗಲೂ ಹೇವಾರ್ಡ್ ಅಡ್ಡಿಯಾದರು.

ನಂತರ ನ್ಯೂಜಿಲೆಂಡ್‌ ಸಮಬಲ ಸಾಧಿಸುವ ಗೋಲಿಗಾಗಿ ಭಾರಿ ಹೋರಾಟ ನಡೆಸಿತು. ಭಾರತದ ಆವರಣದಲ್ಲಿ ಸತತ ಆಕ್ರಮಣ ನಡೆಸಿತು. ಆದರೆ ಮೋಹಕ ಗೋಲ್‌ಕೀಪಿಂಗ್ ಮೂಲಕ ಶ್ರೀಜೇಶ್ ಆ ತಂಡಕ್ಕೆ ನಿರಾಸೆ ಉಂಟುಮಾಡಿದರು.

ಮುಂದಿನ ಹಣಾಹಣಿಯಲ್ಲಿ ಭಾರತ ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಪಂದ್ಯ ಭಾನುವಾರ ನಡೆಯಲಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 5–3ರಲ್ಲಿ ಆತಿಥೇಯ ಜಪಾನ್ ವಿರುದ್ಧ ಜಯ ಗಳಿಸಿತು.

***

ಒಲಿಂಪಿಕ್ಸ್‌ನಂಥ ದೊಡ್ಡ ಕೂಟಗಳಲ್ಲಿ ಮೂರು ಪಾಯಿಂಟ್ ಗಳಿಸುವುದು ದೊಡ್ಡ ಸಾಧನೆಯೆ. ಎರಡು ಮತ್ತು ಮೂರನೇ ಕ್ವಾರ್ಟರ್‌ನಲ್ಲಿ ತಂಡ ಉತ್ತಮ ಸಾಮರ್ಥ್ಯ ಪ್ರದರ್ಶಿಸಿತು. ಉಳಿದ ಎರಡು ಕ್ವಾರ್ಟರ್‌ಗಳಲ್ಲಿ ಸ್ವಲ್ಪ ಪ್ರಯಾಸದಲ್ಲೇ ಆಡಿತು.

- ಗ್ರಹಾಂ ರೀಡ್ ಭಾರತ ತಂಡದ ಕೊಚ್

***

ಇತರ ಪಂದ್ಯಗಳ ಫಲಿತಾಂಶ

* ಜಪಾನ್ ವಿರುದ್ಧ ಆಸ್ಟ್ರೇಲಿಯಾಗೆ 5–3ರಲ್ಲಿ ಜಯ

* ಬೆಲ್ಜಿಯಂಗೆ ನೆದರ್ಲೆಂಡ್ಸ್ ವಿರುದ್ಧ 3–1ರಲ್ಲಿ ಜಯ

* ಅರ್ಜೆಂಟೀನಾ–ಸ್ಪೇನ್ ಪಂದ್ಯ 1–1ರಲ್ಲಿ ಡ್ರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.