ADVERTISEMENT

Tokyo Olympics: ಮಳೆಯಲ್ಲೂ ನಿಲ್ಲದ ಪದಕ ಬೇಟೆ

ಮೊರೊಕ್ಕೊ, ಕ್ಯೂಬಾ ಕ್ರೀಡಾಪಟುಗಳ ಪಾರಮ್ಯ; ಕಮಲ್‌ಜೀತ್ ಕೌರ್‌ಗೆ ನಿರಾಸೆ

ಏಜೆನ್ಸೀಸ್
Published 2 ಆಗಸ್ಟ್ 2021, 19:37 IST
Last Updated 2 ಆಗಸ್ಟ್ 2021, 19:37 IST
ಸೌಫಿಯಾನ್ ಎಲ್ ಬಕಲಿ –ಎಎಫ್‌ಪಿ ಚಿತ್ರ
ಸೌಫಿಯಾನ್ ಎಲ್ ಬಕಲಿ –ಎಎಫ್‌ಪಿ ಚಿತ್ರ   

ಟೋಕಿಯೊ:ಏಕಾಏಕಿ ಸುರಿದ ಭಾರಿ ಮಳೆ ಅಥ್ಲೀಟ್‌ಗಳನ್ನು ಕಕ್ಕಾಬಿಕ್ಕಿ ಮಾಡಿತು. ಸಂಘಟಕರೂ ಸಂಕಟಕ್ಕೆ ಒಳಗಾದರು. ಕೆಲಕಾಲ ಅಡ್ಡಿಯಾದರೂ ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ನ ಸೋಮವಾರ ಸಂಜೆಯ ಸ್ಪರ್ಧೆಗಳು ಮುಂದುವರಿದವು. ನೀರಿನಲ್ಲೇ ಓಡಿದ ಅಥ್ಲೀಟ್‌ಗಳು ಪದಕಗಳ ಬೇಟೆಯಾಡಿದರು. ಆದರೆ ಭಾರತದ ಕಮಲ್‌ಪ್ರೀತ್ ಕೌರ್ ಕನಸು ಕೊಚ್ಚಿಹೋಯಿತು.

ಮಹಿಳೆಯರ ಡಿಸ್ಕಸ್‌ ಥ್ರೋದ ಅರ್ಹತಾ ಸುತ್ತಿನಲ್ಲಿ ಅಮೋಘ ಸಾಧನೆ ಮಾಡಿದ್ದ ಕಮಲ್‌ಪ್ರೀತ್ ಕೌರ್ ಫೈನಲ್‌ನಲ್ಲಿ ಆರನೇ ಸ್ಥಾನದೊಂದಿಗೆ ಮರಳಿದರು. ಅರ್ಹತಾ ಸುತ್ತಿನಲ್ಲಿ 64 ಮೀಟರ್‌ಗಳ ಸಾಧನೆ ಮಾಡಿದ್ದ ಅವರು ಸೋಮವಾರ ಎಸೆದ ಗರಿಷ್ಠ ದೂರ 63.70 ಮೀಟರ್. ಅಮೆರಿಕದ ಅಲ್ಮಾನ್ ವಲರಿ 68.98 ದೂರ ಎಸೆದು ಚಿನ್ನ ಗೆದ್ದರೆ ಜರ್ಮನಿಯ ಪುಡೆನ್ಸ್ ಕ್ರಿಸ್ಟಿನ್66.86 ಮೀಟರ್‌ನೊಂದಿಗೆ ಬೆಳ್ಳಿ ಗಳಿಸಿದರು. ಯಯ್ಮಿ ಪೆರೆಜ್ (65.72) ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಟ್ರ್ಯಾಕ್‌ನಲ್ಲಿ ನಿಂತಿದ್ದ ನೀರು ಕ್ರೀಡಾಪಟುಗಳ ಸಾಧನೆಗೆ ಅಡ್ಡಿಯಾಯಿತು. ಆದರೂ ಕ್ಯೂಬಾ ಮತ್ತು ಮೊರೊಕ್ಕೊದ ಅಥ್ಲೀಟ್‌ಗಳು ಮಿಂಚಿದರು.ಪುರುಷರ 3000 ಮೀಟರ್ಸ್ ಸ್ಟೀಪಲ್‌ಚೇಸ್‌ನಲ್ಲಿ ಮೊರೊಕ್ಕೊದ ಎಲ್‌ ಬಕಾಲಿ ಸೌಫಿಯಾನ್‌ ಚಿನ್ನ ಗೆದ್ದರೆ ಮಹಿಳೆಯರ ಐದು ಸಾವಿರ ಮೀಟರ್ಸ್ ಓಟದಲ್ಲಿ ನೆದರ್ಲೆಂಡ್ಸ್‌ನ ಸಿಫಾನ್ ಹಸನ್ (14 ನಿಮಿಷ 36.79ಸೆಕೆಂಡು) ಚಿನ್ನ ಗಳಿಸಿದರು. ಕೆನ್ಯಾದ ಎಬಿರಿ ಹೆಲೆನ್‌ ಮತ್ತು ಇಥಿಯೋಪಿಯಾದ ಸೆಗೆ ಗುಡಾಫ್‌ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು.

ADVERTISEMENT

ಪುರುಷರ ಲಾಂಗ್‌ಜಂಪ್‌ನಲ್ಲಿ ಗ್ರೀಸ್‌ ಚಿನ್ನ ಗಳಿಸಿದರೆ ಬೆಳ್ಳಿ ಮತ್ತು ಕಂಚಿನ ಪದಕ ಕ್ಯೂಬಾ ಪಾಲಾಯಿತು. ಮಹಿಳೆಯರ 100 ಮೀಟರ್ಸ್ ಹರ್ಡಲ್ಸ್‌ನಲ್ಲಿ ಪೋರ್ಟೊ ರಿಕೊದ ಕಮಾಚೊ ಜಾಸ್ಮಿನ್ ಚಾಂಪಿಯನ್ ಆಗಿ ಆಚ್ಚರಿ ಮೂಡಿಸಿದರು. ಅಮೆರಿಕ ಮತ್ತು ಜಮೈಕಾ ಉಳಿದೆರಡು ಸ್ಥಾನಗಳನ್ನು ಗಳಿಸಿತು.

ಎಲೈನ್ ಥಾಮ್ಸನ್‌ಗೆ ಡಬಲ್ ಚಿನ್ನದ ಕನಸು

ತಮ್ಮದೇ ದೇಶದ ಶೆಲ್ಲಿ ಆ್ಯನ್ ಫ್ರೇಸರ್ ಪ್ರೈಸ್ ಅವರನ್ನು ಮತ್ತೊಮ್ಮೆ ಹಿಂದಿಕ್ಕಿದ ಜಮೈಕಾದ ಎಲೈನ್ ಥಾಮ್ಸನ್‌ ಹೆರಾ 200 ಮೀಟರ್ಸ್ ಓಟದಲ್ಲೂ ಪದಕದ ಭರವಸೆ ಮೂಡಿಸಿದ್ದಾರೆ. ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ (21.66 ಸೆ) ಅವರು ಫೈನಲ್‌ ಪ್ರವೇಶಿಸಿದ್ದಾರೆ.

29 ವರ್ಷದ ಎಲೈನ್ ಥಾಮ್ಸನ್ 100 ಮೀಟರ್ಸ್ ಓಟದಲ್ಲಿ ಶೆಲ್ಲಿ ಅವರನ್ನು ಹಿಂದಿಕ್ಕಿ ಚಿನ್ನ ಗೆದ್ದಿದ್ದರು. 200 ಮೀಟರ್ಸ್ ಫೈನಲ್ ಮಂಗಳವಾರ ನಡೆಯಲಿದೆ.22.13 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಶೆಲ್ಲಿ ಕೂಡ ಫೈನಲ್ ತಲುಪಿದ್ದಾರೆ. 18 ವರ್ಷದ ಓಟಗಾರ್ತಿ ನಮಿಬಿಯಾದ ಕ್ರಿಸ್ಟಿನ್ ಬೋಮಾ 21.97 ಸೆಕೆಂಡುಗಳಲ್ಲಿ ಗುರಿ ತಲುಪಿ 20 ವರ್ಷದೊಳಗಿನವರ ವಿಶ್ವ ದಾಖಲೆ ಸೃಷ್ಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.