ADVERTISEMENT

ಕಲಬುರ್ಗಿಯಲ್ಲಿ ‘ಟರ್ಫ್’ ಹಾಕಿ?

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2019, 19:45 IST
Last Updated 10 ಫೆಬ್ರುವರಿ 2019, 19:45 IST
ಸಂಜಯ್ ಬಾಣದ್
ಸಂಜಯ್ ಬಾಣದ್   

ಕಲಬುರ್ಗಿ ಡಿವಿಷನ್‌ನ ಹಾಕಿ ಕ್ರೀಡಾಪಟುಗಳಲ್ಲಿ ಹೊಸ ಕನಸೊಂದು ಚಿಗುರೊಡೆದಿದೆ. ಅದಕ್ಕೆ ಕಾರಣ ಹಾಕಿ ಟರ್ಫ್ ಕ್ರೀಡಾಂಗಣ.

ಇಲ್ಲಿನ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣಕ್ಕೆ ಈಚೆಗೆ ಭೇಟಿ ನೀಡಿದ್ದ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂ ಖಾನ್ ಅವರು ನಗರದಲ್ಲಿ ಹಾಕಿ ಟರ್ಫ್ ಕ್ರೀಡಾಂಗಣ ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ. ಬೆಂಗಳೂರು, ಮೈಸೂರು ಮತ್ತು ಕೊಡಗು ಹೊರತುಪಡಿಸಿದರೆ ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಹಾಕಿ ಟರ್ಫ್ ಕ್ರೀಡಾಂಗಣಗಳಿಲ್ಲ.

ಸಚಿವರ ಭರವಸೆ ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳ ಹಾಕಿ ಪ್ರತಿಭೆಗಳಲ್ಲಿ ಹುಮ್ಮಸ್ಸು ಮೂಡಿಸಿದೆ. ಅಲ್ಲದೆ, ಪ್ರತಿಭಾವಂತ ಕ್ರೀಡಾಪಟುಗಳು ಹೊರಹೊಮ್ಮುವ ನಿರೀಕ್ಷೆಯನ್ನು ಹುಟ್ಟು ಹಾಕಿದೆ.

ADVERTISEMENT

ಕಲಬುರ್ಗಿ ಡಿವಿಷನ್‌ನಲ್ಲಿ ಕಲಬುರ್ಗಿ, ಬಳ್ಳಾರಿ, ಬೀದರ್, ಯಾದಗಿರಿ, ಕೊಪ್ಪಳ, ರಾಯಚೂರು ಜಿಲ್ಲೆಗಳು ಬರುತ್ತವೆ. ನಾಲ್ಕು ದಶಕಗಳ ಹಿಂದೆಯೇ ಹಾಕಿ ಚಟುವಟಿಕೆಗಳು ಆರಂಭವಾಗಿದ್ದರೂ ಹೇಳಿಕೊಳ್ಳುವಂತಹ ಸಾಧನೆ ಮತ್ತು ಕ್ರೀಡಾಪಟುಗಳು ಈ ಜಿಲ್ಲೆಗಳಿಂದ ಮೂಡಿ ಬಂದಿಲ್ಲ. ಅದಕ್ಕೆ ಕಾರಣ ಕ್ರೀಡಾಂಗಣ ಸೇರಿ ಅಗತ್ಯ ಮೂಲಸೌಕರ್ಯಗಳ ಕೊರತೆ.

ಕಲಬುರ್ಗಿಯಲ್ಲಿ ಹಾಕಿ ಇತಿಹಾಸ: 1970ರಲ್ಲಿ ಇಲ್ಲಿ ಹಾಕಿ ಪೊಲೀಸ್ ತಂಡ ಅಸ್ಥಿತ್ವದಲ್ಲಿ ಇತ್ತು. ನಗರದ ಮೋಮಿನಪುರದ ಮೈದಾನದಲ್ಲಿ ಸ್ಥಳೀಯ ಕ್ರೀಡಾಪಟುಗಳು ಆಡುತ್ತಿದ್ದರು. ಗಣರಾಜ್ಯೋತ್ಸವ ಸಂದರ್ಭದಲ್ಲಿ ಮತ್ತು ದಸರಾ ಕ್ರೀಡಾಕೂಟದ ವೇಳೆ ಪಂದ್ಯಗಳು ನಡೆಯುತ್ತಿದ್ದವು ಎಂದು ನೆನಪಿಸಿಕೊಳ್ಳುತ್ತಾರೆ ಹಿರಿಯ ಕ್ರೀಡಾಪಟುಗಳು.

ಎ.ಕೆ.ಶಕೀಲ್ ಅವರು 1975–76ರಿಂದ ನಾಲ್ಕು ಬಾರಿ ಕರ್ನಾಟಕ ವಿವಿಯ ಹಾಕಿ ತಂಡಕ್ಕೆ ಆಯ್ಕೆ ಆಗಿದ್ದರು. ಅಲ್ಲದೆ, ಅವರು ಒಮ್ಮೆ ತಂಡದ ನಾಯಕರೂ ಆಗಿದ್ದರು. ಅಲ್ಲದೆ, ಫಾರೂಖ್, ಸಲ್ವಾರ್ ಯೂಸುಫ್, ಅಬ್ದುಲ್ ಖಾಜಾ ಜಮೀಲ್, ಬಾಬರ್ ಖಾನ್ ಸಾಬ್, ಅಮ್ಜದ್ ಅವರು ವಿವಿ ತಂಡಕ್ಕೆ ಆಡಿದ್ದರು.

1978–79ರಲ್ಲಿ ಪಿ.ಪಿ.ಆಂಟೋನಿ ಅವರು ಕೋಚ್ ಆಗಿ ಬಂದರು. ಅವರ ಬಳಿ ತರಬೇತಿ ಪಡೆದ ಶರತ್ ಸುಂಕವಾಡಿ, ಅಯೂಬ್ ಖಾನ್, ಶ್ರೀನಿವಾಸ್ ಮಹಾಗಾಂವಕರ್, ರಫೀಕ್, ಗೌಸ್, ಗಫೂರ್ ಅವರು ರೂರಲ್ ಹಾಕಿ ನ್ಯಾಷನಲ್ಸ್ ಟೂರ್ನಿಯಲ್ಲಿ ಆಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಹಾಕಿ ಬಗ್ಗೆ ಒಲವು ಹೆಚ್ಚಾಗುತ್ತಿದ್ದು, ಸಾಧನೆಯೂ ಮೂಡಿಬರುತ್ತಿದೆ. ಹರಿಯಾಣದಲ್ಲಿ ಕಳೆದ ತಿಂಗಳು ನಡೆದ 14 ವರ್ಷದೊಳಗಿನವರ ರಾಷ್ಟ್ರಮಟ್ಟದ ಶಾಲಾ ಟೂರ್ನಿಯಲ್ಲಿ ಭಾಗವಹಿಸಿದ್ದ ರಾಜ್ಯ ತಂಡದಲ್ಲಿ ನಗರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಹಾಸ್ಟೆಲ್‌ನ ಕ್ರೀಡಾಪಟು ಗಣೇಶ್ ಆಡಿದ್ದಾನೆ ಎಂದು ಇಲಾಖೆಯ ಕೋಚ್ ಸಂಜಯ್ ಬಾಣದ್ ಹೇಳಿದರು.

ಹಾಸ್ಟೆಲ್‌ನಲ್ಲಿ 25 ಮಕ್ಕಳು ಹಾಕಿ ತರಬೇತಿ ಪಡೆಯುತ್ತಿದ್ದಾರೆ. ಅಲ್ಲದೆ, ವಿವಿಧ ಶಾಲೆಗಳ 25ಕ್ಕೂ ಹೆಚ್ಚು ಮಕ್ಕಳು ಸಹ ತರಬೇತಿ ಪಡೆಯಲು ಬರುತ್ತಾರೆ ಎಂದರು.

ಇಲ್ಲಿ ಮಣ್ಣಿನ ಕ್ರೀಡಾಂಗಣ ಇದೆ. ಸ್ಟಿಕ್, ಬಾಲ್ ಸೇರಿದಂತೆ ಎಲ್ಲ ಹಾಕಿ ಸಲಕರಣೆಗಳನ್ನು ಟರ್ಫ್‌ ಮೈದಾನಕ್ಕೆ ಅನುಗುಣವಾಗಿ ರೂಪಿಸಲಾಗುತ್ತಿದೆ. ಆದರೆ, ಟರ್ಫ್ ಕ್ರೀಡಾಂಗಣ ಇಲ್ಲದ ಕಾರಣ ಏನೇ ಮಾಡಿದರೂ ವೃತ್ತಿಪರ ತರಬೇತಿ ನೀಡಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಇಲ್ಲಿನ ಮಕ್ಕಳಿಗೆ ಬೆಂಗಳೂರು, ಮೈಸೂರು ಮತ್ತು ಹೊರ ರಾಜ್ಯಗಳ ಮಕ್ಕಳೊಂದಿಗೆ ಸ್ಪರ್ಧೆ ಮಾಡಲು ಆಗುವುದಿಲ್ಲ.

ಈ ಭಾಗದ ಪಾಲಕರಲ್ಲಿ ಹಾಕಿ ಬಗ್ಗೆ ಅಷ್ಟಾಗಿ ಜ್ಞಾನ ಇಲ್ಲದ ಕಾರಣ ಪ್ರೋತ್ಸಾಹವೂ ಅಷ್ಟಕ್ಕಷ್ಟೆ ಇದೆ. ಹೀಗಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ತರಬೇತಿ ನೀಡಲು ಒತ್ತು ನೀಡಲಾಗುತ್ತಿದೆ. ಬೇಸಿಗೆ ಶಿಬಿರ, ಟ್ಯಾಲೆಂಟ್‌ ಕ್ಯಾಂಪ್, ಅಂತರಶಾಲಾ ಟೂರ್ನಿ, ಕಿರು ಟೂರ್ನಿಗಳನ್ನು ಆಯೋಜಿಸಿ ಮಕ್ಕಳನ್ನು ಸೆಳೆಯುವ ಚಿಂತನೆ ಇದೆ ಎನ್ನುತ್ತಾರೆ ಅವರು.

ಸಚಿವರ ಭರವಸೆ ಶೀಘ್ರ ಕಾರ್ಯರೂಪಕ್ಕೆ ಬಂದರೆ ಈ ಭಾಗದಲ್ಲಿ ಉತ್ತಮ ಕ್ರೀಡಾಪಟುಗಳು ಹೊರಹೊಮ್ಮುತ್ತಾರೆ ಎಂಬ ಆಶಯ ಕ್ರೀಡಾಪ್ರೇಮಿಗಳದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.