ADVERTISEMENT

ಹಾಕಿ: ಚೀನಾಗೆ ಮಣಿದ ಭಾರತ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 16:20 IST
Last Updated 11 ಸೆಪ್ಟೆಂಬರ್ 2025, 16:20 IST
ಗೋಲು ಹೊಡೆಯುವ ಯತ್ನದಲ್ಲಿ ಚೀನಾದ ಆಟಗಾರ್ತಿ –‘ಎಕ್ಸ್‌’ ಚಿತ್ರ
ಗೋಲು ಹೊಡೆಯುವ ಯತ್ನದಲ್ಲಿ ಚೀನಾದ ಆಟಗಾರ್ತಿ –‘ಎಕ್ಸ್‌’ ಚಿತ್ರ   

ಹಾಂಗ್‌ಝೌ (ಚೀನಾ) (ಪಿಟಿಐ): ಭಾರತ ತಂಡವು ಮಹಿಳಾ ಏಷ್ಯಾ ಕಪ್ ಹಾಕಿ ಟೂರ್ನಿಯ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಗುರುವಾರ ಆತಿಥೇಯ ಚೀನಾ ಎದುರು 1–4ರಿಂದ ಪರಾಭವಗೊಂಡಿತು. ಟೂರ್ನಿಯಲ್ಲಿ ಭಾರತ ತಂಡಕ್ಕೆ ಇದು ಮೊದಲ ಸೋಲು.

ಭಾರತ ತಂಡದ ಪರ ಮುಮ್ತಾಜ್‌ ಖಾನ್‌ ಅವರು (39ನೇ ನಿಮಿಷ) ಏಕೈಕ ಗೋಲು ದಾಖಲಿಸಿದರು. ಚೀನಾ ತಂಡದ ಝೌ ಮೀರಂಗ್‌ (4ನೇ ಹಾಗೂ 56ನೇ ನಿ.) ಎರಡು ಗೋಲು ಹೊಡೆದರೆ, ಶೆನ್‌ ಯಾಂಗ್‌ (31ನೇ ನಿ.) ಹಾಗೂ ತಾನ್‌ ಜಿಂಜುವಾಂಗ್‌ (49ನೇ ನಿ.) ತಲಾ ಒಂದು ಗೋಲು ಗಳಿಸಿದರು.

ಭಾರತದ ವನಿತೆಯರು ಆರಂಭದಿಂದಲೂ ತೀವ್ರ ಪೈಪೋಟಿ ನೀಡಿದರೂ, ಸಿಕ್ಕ ಮೂರು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲನ್ನಾಗಿ ಪರಿವರ್ತಿಸುವಲ್ಲಿ ಎಡವಿದ್ದು ಹಿನ್ನಡೆಯಾಯಿತು.

ADVERTISEMENT

ಭಾರತವು ಬುಧವಾರ ನಡೆದ ಸೂಪರ್‌ ಫೋರ್‌ ಹಂತದ ಮೊದಲ ಪಂದ್ಯದಲ್ಲಿ ಕೊರಿಯಾ ತಂಡವನ್ನು 4–2ರಿಂದ ಮಣಿಸಿತ್ತು.

ಸೂಪರ್‌ ಫೋರ್‌ ಸುತ್ತಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಭಾನುವಾರ (ಸೆ.14) ನಡೆಯಲಿರುವ ಫೈನಲ್‌ಗೆ ಅರ್ಹತೆ ಪಡೆಯಲಿವೆ. ವಿಜೇತ ತಂಡಕ್ಕೆ ಮುಂದಿನ ವರ್ಷ ನಡೆಯಲಿರುವ ಹಾಕಿ ವಿಶ್ವಕಪ್‌ಗೆ ನೇರ ಪ್ರವೇಶ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.