ADVERTISEMENT

ಚೀನಾ–ಐರ್ಲೆಂಡ್‌ ಸಮಬಲದ ಹೋರಾಟ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 17:52 IST
Last Updated 4 ಡಿಸೆಂಬರ್ 2018, 17:52 IST
ಗೋಲು ಗಳಿಸಿದ ಖುಷಿಯಲ್ಲಿ ಐರ್ಲೆಂಡ್‌ ತಂಡದ ಅಲನ್‌ ಸದರ್ನ್‌
ಗೋಲು ಗಳಿಸಿದ ಖುಷಿಯಲ್ಲಿ ಐರ್ಲೆಂಡ್‌ ತಂಡದ ಅಲನ್‌ ಸದರ್ನ್‌   

ಭುವನೇಶ್ವರ: ಹಾಕಿ ವಿಶ್ವಕಪ್‌ನಲ್ಲಿ ಚೊಚ್ಚಲ ಗೆಲುವು ದಾಖಲಿಸುವ ಚೀನಾ ತಂಡದ ಕನಸು ಮಂಗಳವಾರವೂ ಕೈಗೂಡಲಿಲ್ಲ.

ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಐರ್ಲೆಂಡ್‌ ಎದುರಿನ ‘ಬಿ’ ಗುಂಪಿನ ಹೋರಾಟವನ್ನು ಚೀನಾ 1–1 ಗೋಲುಗಳಿಂದ ಡ್ರಾ ಮಾಡಿಕೊಂಡಿತು.

ಈ ಹಿಂದೆ ಐರ್ಲೆಂಡ್‌ ಎದುರು ಎರಡು ಬಾರಿ ಸೋತಿದ್ದ ಚೀನಾ ತಂಡ ಈ ಪಂದ್ಯದಲ್ಲಿ ದಿಟ್ಟ ಆಟ ಆಡಿತು. ಡು ಚೆನ್‌ ಪಡೆಯ ಆಟಗಾರರು ಚೆಂಡಿನೊಂದಿಗೆ ನಿರಂತರವಾಗಿ ಎದುರಾಳಿ ಆವರಣ ಪ್ರವೇಶಿಸುವ ಪ್ರಯತ್ನ ನಡೆಸಿದರು. ಇನ್ನೊಂದೆಡೆ ಐರ್ಲೆಂಡ್‌ ಕೂಡಾ ಪರಿಣಾಮಕಾರಿ ಸಾಮರ್ಥ್ಯ ತೋರಿತು. ಹೀಗಾಗಿ ಮೊದಲ ಕ್ವಾರ್ಟರ್‌ನ ಆಟ ಸಮಬಲದೊಂದಿಗೆ ಅಂತ್ಯವಾಯಿತು.

ADVERTISEMENT

ಎರಡನೇ ಕ್ವಾರ್ಟರ್‌ನಲ್ಲಿ ಐರ್ಲೆಂಡ್‌ ತಂಡ ಮಿಂಚಿತು. ಈ ತಂಡದ ಆಟಗಾರರು 10 ಬಾರಿ ಆವರಣ ಪ್ರವೇಶಿಸಿ ಎದುರಾಳಿ ಪಾಳಯದಲ್ಲಿ ಆತಂಕ ಮೂಡಿಸಿದ್ದರು. ಆದರೆ ಚೆಂಡನ್ನು ಗುರಿ ಮುಟ್ಟಿಸುವಲ್ಲಿ ವಿಫಲರಾದರು.

ಮೂರನೇ ಕ್ವಾರ್ಟರ್‌ನಲ್ಲಿ ಚೀನಾ ತಂಡಕ್ಕೆ ಯಶಸ್ಸು ಸಿಕ್ಕಿತು. 43ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಜಿನ್‌ ಗುವೊ ಚೆಂಡನ್ನು ಗುರಿ ಮುಟ್ಟಿಸಿದರು. ಈ ಸಂಭ್ರಮ ಎದುರಾಳಿ ‍ಪಾಳಯದಲ್ಲಿ ಹೆಚ್ಚು ಕಾಲ ಉಳಿಯಲು ಐರ್ಲೆಂಡ್‌ ತಂಡದ ಅಲನ್‌ ಸದರ್ನ್‌ ಅವಕಾಶ ನೀಡಲಿಲ್ಲ. 44ನೇ ನಿಮಿಷದಲ್ಲಿ ಅವರು ಫೀಲ್ಡ್‌ ಗೋಲು ಬಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.