ನಾಗ್ಪುರ: ‘ನಾನು ಕಳೆದುಕೊಳ್ಳುವುದು ಏನೂ ಇರದ ಕಾರಣ ಕೋನೇರು ಹಂಪಿ ವಿರುದ್ಧ ಫಿಡೆ ಮಹಿಳಾ ಚೆಸ್ ವಿಶ್ವಕಪ್ ಫೈನಲ್ ಪಂದ್ಯ ಆಡುವಾಗ ಯಾವುದೇ ಒತ್ತಡದಲ್ಲಿ ಇರಲಿಲ್ಲ’ ಎಂದು ಗ್ರ್ಯಾಂಡ್‌ಮಾಸ್ಟರ್ ದಿವ್ಯಾ ದೇಶಮುಖ್ ಹೇಳಿದರು.
ಜಾರ್ಜಿಯಾದ ರಾಜಧಾನಿ ಬಟುಮಿಯಿಂದ ಬುಧವಾರ ತಡರಾತ್ರಿ ಮುಂಬೈ ಮೂಲಕ ಇಲ್ಲಿಗೆ ಮರಳಿದ ಯುವ ಸಾಧಕಿಗೆ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ನೀಡಲಾಯಿತು.
ಕ್ಲಾಸಿಕಲ್ ಸುತ್ತಿನ ಎರಡು ಪಂದ್ಯಗಳು ‘ಡ್ರಾ’ ಆದ ನಂತರ ಕಾಲಮಿತಿಯ ಟೈಬ್ರೇಕರ್‌ನಲ್ಲಿ 19 ವರ್ಷ ವಯಸ್ಸಿನ ದಿವ್ಯಾ, 38 ವರ್ಷ ವಯಸ್ಸಿನ ಅನುಭವಿ ಎದುರಾಳಿಯನ್ನು ಮಣಿಸಿದ್ದರು.
ಫೈನಲ್ ಆಡುವಾಗ ಒತ್ತಡ ಎದುರಾಗಿತ್ತೇ ಎಂಬ ಪ್ರಶ್ನೆಗೆ, ‘ನಾನು ಅಪಾಯದಲ್ಲಿದ್ದೆ ಎಂಬ ಭಾವನೆಯೇ ನನಗೆ ಮೂಡಿರಲಿಲ್ಲ. ಆಕೆ (ಹಂಪಿ) ಮಾಡಿದ ತಪ್ಪು ನನಗೆ ಗೆಲುವು ತಂದುಕೊಟ್ಟಿತು’ ಎಂದು ದಿವ್ಯಾ ಪಿಟಿಐ ವಿಡಿಯೋಸ್‌ಗೆ ಗುರುವಾರ ತಿಳಿಸಿದರು.
‘ಫಲಿತಾಂಶ ನನ್ನ ಕೈಯಲ್ಲಿಲ್ಲದ ಕಾರಣ ನಾನು ನನ್ನ ಆಟದ ಕಡೆಗಷ್ಟೇ ಗಮನ ಕೇಂದ್ರೀಕರಿಸಿದೆ. ಬೇರೇನೂ ಯೋಚಿಸಿರಲಿಲ್ಲ’ ಎಂದು ಹೇಳಿದರು.
ದಿವ್ಯಾ ಈ ಟೂರ್ನಿಗಿಳಿಯುವಾಗ ಪ್ರಶಸ್ತಿಗೆ ನೆಚ್ಚಿನ ಆಟಗಾರ್ತಿಯಾಗಿರಲಿಲ್ಲ. ಒಂದೂ ಗ್ರ್ಯಾಂಡ್‌ಮಾಸ್ಟರ್ ನಾರ್ಮ್ ಇರಲಿಲ್ಲ. ಆದರೆ ದಿವ್ಯಾ ವಿಶ್ವಕಪ್ ವಿಜೇತೆ ಆದ ಅವರು ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದರು.
ತಮ್ಮ ಯಶಸ್ಸಿನಿಂದ ಮಹಿಳಾ ಚೆಸ್‌ಗೆ ದೊಡ್ಡ ಮಟ್ಟದ ಉತ್ತೇಜನ ಸಿಗಬಹುದು ಎಂಬ ವಿಶ್ವಾಸ ಅವರದು. ‘ಈ ಯಶಸ್ಸಿನಿಂದ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈ ಆಟದತ್ತ ಆಕರ್ಷಿತರಾಗಬಹುದು’ ಎಂಬ ಆಶಯ ವ್ಯಕ್ತಪಡಿಸಿದರು.
‘ಯುವ ಜನಾಂಗಕ್ಕೆ ನನ್ನದೇನೂ ಸಂದೇಶವಿಲ್ಲ. ಆದರೆ ತಂದೆ–ತಾಯಿ ಉತ್ತೇಜನ ಬಹುಮುಖ್ಯ. ಯಶಸ್ಸಿಗಿಂತ ವೈಫಲ್ಯದ ವೇಳೆಯೇ ಅವರಿಗೆ ಪೋಷಕರ ನೆರವು ಹೆಚ್ಚು ಅಗತ್ಯವಿರುತ್ತದೆ’ ಎಂದು ದಿವ್ಯಾ ಅಭಿಪ್ರಾಯಪಟ್ಟರು.
ವಿಮಾನ ನಿಲ್ದಾಣಕ್ಕೆ ಬಂದಿಳಿಯುವಾಗ ತಮ್ಮ ಯಶಸ್ಸಿನ ಶ್ರೇಯವನ್ನು ಅವರು ತಂದೆ–ತಾಯಿಗೆ ಸಮರ್ಪಿಸಿದ್ದರು.
‘ನನ್ನ ವೃತ್ತಿಜೀವನದಲ್ಲಿ ತಂದೆ–ತಾಯಿ ವಹಿಸಿದ ಪಾತ್ರ ಬಲುದೊಡ್ಡದು. ಅವರ ನೆರವಿಲ್ಲದೇ ಹೋಗಿದ್ದಲ್ಲಿ ನಾನು ಈ ಹಂತಕ್ಕೆ ತಲುಪಲು ಆಗುತ್ತಿರಲಿಲ್ಲ. ನನ್ನ ಕುಟುಂಬ, ನನ್ನ ಪೋಷಕರು, ಸೋದರಿ ಆರ್ಯಾ, ನನ್ನ ಮೊದಲ ಕೋಚ್ ರಾಹುಲ್ ಜೋಶಿ ಅವರಿಗೆ ಶ್ರೇಯ ಸಲ್ಲಬೇಕು. ನಾನು ಗ್ರ್ಯಾಂಡ್‌ಮಾಸ್ಟರ್ ಆಗಬೇಕೆಂದು ಜೋಶಿ ಸರ್ ಸದಾ ಆಶಿಸುತ್ತಿದ್ದರು. ಈ ಗೆಲುವು ಅವರಿಗಾಗಿ’ ಎಂದು ದಿವ್ಯಾ ತಮ್ಮ ಮೊದಲ ಕೋಚ್ ಅವರನ್ನು ಸ್ಮರಿಸಿದರು. 2020ರಲ್ಲಿ ಜೋಶಿ ಅವರು 40ನೇ ವಯಸ್ಸಿನಲ್ಲಿ ನಿಧನರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.