ADVERTISEMENT

ಏಷ್ಯಾ ಅಲ್ಟ್ರಾ ರನ್‌: ಚಿನ್ನ ಜಯಿಸಿದ ಭಾರತ ಪುರುಷರ ತಂಡ

ಏಷ್ಯಾ ಒಷಿಯಾನಿಯಾ 24 ತಾಸುಗಳು ಅಲ್ಟ್ರಾ ರನ್ ಚಾಂಪಿಯನ್‌ಷಿಪ್‌: ಮಹಿಳೆಯರಿಗೆ ಬೆಳ್ಳಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 16:16 IST
Last Updated 3 ಜುಲೈ 2022, 16:16 IST
ಪುರುಷರ ವೈಯಕ್ತಿಕ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಭಾರತದ ಅಮರ್‌ ಸಿಂಗ್ ದೇವಾಂದ (ಮಧ್ಯೆ), ಎರಡನೇ ಸ್ಥಾನ ಗಳಿಸಿದ ಸೌರವ್‌ ಕುಮಾರ್ ರಂಜನ್‌ (ಬಲ) ಮತ್ತು ಮೂರನೇ ಸ್ಥಾನ ಪಡೆದ ಗೀನೊ ಆ್ಯಂಟನಿ– ಪ್ರಜಾವಾಣಿ ಚಿತ್ರ
ಪುರುಷರ ವೈಯಕ್ತಿಕ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಭಾರತದ ಅಮರ್‌ ಸಿಂಗ್ ದೇವಾಂದ (ಮಧ್ಯೆ), ಎರಡನೇ ಸ್ಥಾನ ಗಳಿಸಿದ ಸೌರವ್‌ ಕುಮಾರ್ ರಂಜನ್‌ (ಬಲ) ಮತ್ತು ಮೂರನೇ ಸ್ಥಾನ ಪಡೆದ ಗೀನೊ ಆ್ಯಂಟನಿ– ಪ್ರಜಾವಾಣಿ ಚಿತ್ರ   

ಬೆಂಗಳೂರು: ಉತ್ತಮ ಸಾಮರ್ಥ್ಯ ತೋರಿದ ಭಾರತದ ಪುರುಷರ ತಂಡವು ಅಂತರರಾಷ್ಟ್ರೀಯ ಅಲ್ಟ್ರಾ ರನ್ನರ್ಸ್‌ ಸಂಸ್ಥೆಯ (ಐಎಯು) 24 ತಾಸುಗಳ ಏಷ್ಯಾ ಅಲ್ಟ್ರಾ ರನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದೆ. ಮಹಿಳಾ ತಂಡವು ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು.

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡಿದ್ದ ಚಾಂಪಿಯನ್‌ಷಿಪ್‌ ಭಾನುವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯಗೊಂಡಿತು. ಅಮರ್ ಸಿಂಗ್‌ ದೇವಾಂದ (258.418 ಕಿಲೋ ಮೀಟರ್‌), ಸೌರವ್‌ ಕುಮಾರ್ ರಂಜನ್‌ (242.564 ಕಿ.ಮೀ.) ಮತ್ತು ಗೀನೊ ಆ್ಯಂಟನಿ (238.977 ಕಿ.ಮೀ.) ಅವರಿದ್ದ ಭಾರತ ತಂಡವು ಒಟ್ಟು 739.959 ಕಿ.ಮೀ. ಕ್ರಮಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿತು. ಪುರುಷರ ವೈಯಕ್ತಿಕ ಚಾಂಪಿಯನ್‌ಷಿಪ್‌ನಲ್ಲೂ ಈ ಮೂವರು ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.

ಪುರುಷರ ತಂಡ ವಿಭಾಗದಲ್ಲಿ ಆಸ್ಟ್ರೇಲಿಯಾ (ಒಟ್ಟು 628.405 ಕಿ.ಮೀ.) ಬೆಳ್ಳಿ ಮತ್ತು ಚೀನಾ ತೈಪೆ (563. 591 ಕಿ.ಮೀ.) ಕಂಚು ಜಯಿಸಿದವು.

ADVERTISEMENT

ಅಂಜು ಸೈನಿ, ಆಶಾ ಸಿಂಗ್‌ ಮತ್ತು ಶಶಿ ಮೆಹ್ತಾ ಅವರನ್ನೊಳಗೊಂಡ ಭಾರತ ಮಹಿಳಾ ತಂಡವು 24 ತಾಸುಗಳಲ್ಲಿ 570.70 ಕಿ. ಮೀ. ಸಾಧನೆಯೊಂದಿಗೆ ಎರಡನೇ ಸ್ಥಾನ ಗಳಿಸಿತು. ಕರ್ನಾಟಕದ ಅಶ್ವಿನಿ ಗಣಪತಿ ಭಟ್ ಕೂಡ ಪಾಲ್ಗೊಂಡಿದ್ದರು. ಈ ವಿಭಾಗದಲ್ಲಿ ಆಸ್ಟ್ರೇಲಿಯಾ ಚಿನ್ನ ಜಯಿಸಿದರೆ, ಚೀನಾ ತೈಪೆ ಕಂಚು ಗೆದ್ದಿತು.

ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಚೀನಾ ತೈಪೆಯ ಕುವಾನ್‌ ಜು ಲಿನ್‌ (216.877 ಕಿ.ಮೀ.) ಅಗ್ರಸ್ಥಾನ ಗಳಿಸಿದರೆ,ಆಸ್ಟ್ರೇಲಿಯಾದ ಕ್ಯಾಸಿ ಕೊಹೆನ್‌ ಮತ್ತು ಅಲಿಸಿಯಾ ಹೆರಾನ್‌ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳಿಗೆ ಮುತ್ತಿಟ್ಟರು.

ಫಲಿತಾಂಶಗಳು: ತಂಡ ವಿಭಾಗ: ಪುರುಷರು: ಭಾರತ (ದೂರ:739.959 ಕಿ.ಮೀ.)–1, ಆಸ್ಟ್ರೇಲಿಯಾ–2, ಚೀನಾ ತೈಪೆ–3. ಮಹಿಳೆಯರು: ಆಸ್ಟ್ರೇಲಿಯಾ (ದೂರ: 607.630 ಕಿ.ಮೀ.)–1, ಭಾರತ–2, ಚೀನಾ ತೈಪೆ–3.

ವೈಯಕ್ತಿಕ ವಿಭಾಗ: ಪುರುಷರು: ಅಮರ್‌ ಸಿಂಗ್‌ ದೇವಾಂದ (ದೂರ: 258.418)–1, ಸೌರವ್‌ ಕುಮಾರ್‌ ರಂಜನ್‌–2, ಗೀನೊ ಆ್ಯಂಟನಿ–3 (ಮೂವರು ಭಾರತ). ಮಹಿಳೆಯರು: ಕುವಾನ್‌ ಜು ಲಿನ್‌ (ಚೀನಾ ತೈಪೆ, ದೂರ:216.877 ಕಿ.ಮೀ.)–1, ಕ್ಯಾಸಿ ಕೊಹೆನ್‌–2, ಅಲಿಸಿಯಾ ಹೆರಾನ್‌–3 (ಇಬ್ಬರೂ ಆಸ್ಟ್ರೇಲಿಯಾ).

ಓಪನ್ ವಿಭಾಗ: ಎಲೀಟ್‌ ಮಹಿಳೆಯರು: ಜೋವಾನ್ನಾ ಜಾಕ್ರವೆಸ್ಕಿ (ಪೋಲೆಂಡ್‌, ದೂರ: 199.20 ಕಿ.ಮೀ.)–1. ಪುರುಷರು: ಥಾಮಸ್‌ ಪಾವ್ಲೊಸ್ಕಿ (ಪೋಲೆಂಡ್‌, ದೂರ: 222 ಕಿ.ಮೀ)–1

ಓಪನ್‌ ಮಹಿಳೆಯರು: ತೃಪ್ತಿ ಚೌಹಾನ್‌ (ಭಾರತ, ದೂರ: 134.90 ಕಿ.ಮೀ.)–1. ಪುರುಷರು: ಸಿಕಂದರ್ ಲಾಂಬಾ (ಭಾರತ, ದೂರ:202.36 ಕಿ.ಮೀ.)–1.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.