ICC ರ‍್ಯಾಂಕಿಂಗ್‌ನಲ್ಲಿ ಮಂದಾನಗೆ ಅಗ್ರಸ್ಥಾನ
ಚಿತ್ರಕೃಪೆ: X / @BCCIWomen
ದುಬೈ: ಮಂಗಳವಾರ ಬಿಡುಗಡೆಯಾದ ಐಸಿಸಿ ಮಹಿಳಾ ಏಕದಿನ ರ‍್ಯಾಂಕಿಂಗ್‌ನಲ್ಲಿ ಭಾರತದ ಸ್ಟಾರ್ ಬ್ಯಾಟರ್ ಸ್ಮೃತಿ ಮಂದಾನ ನಂಬರ್–1 ಸ್ಥಾನ ಅಲಂಕರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನ ನಡುವೆಯೂ ಅವರು ಆಕರ್ಷಕ ಅರ್ಧಶತಕ ಸಿಡಿಸಿದ್ದರು.
ಮುಲ್ಲನ್‌ಪುರದಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಮಂದಾನ 63 ಎಸೆತಗಳಲ್ಲಿ 58 ರನ್ ಸಿಡಿಸಿ ಮಿಂಚಿದ್ದರು. ಆದರೆ ಈ ಪಂದ್ಯದಲ್ಲಿ ಭಾರತ ನೀಡಿದ್ದ ಬೃಹತ್ ಗುರಿಯನ್ನು ಆಸ್ಟ್ರೇಲಿಯ ಸುಲಭವಾಗಿ ತಲುಪಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಸೆ. 30ರಿಂದ ಆರಂಭವಾಗಲಿರುವ ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್‌ಗೆ ಮೊದಲು ಮಂದಾನ ನಂ. 1 ಸ್ಥಾನ ಪಡೆದಿರುವುದು ಅವರ ಆತ್ಮವಿಶ್ವಾಸ ಹೆಚ್ಚಿಸಲಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ಮಂದಾನ ಇಂಗ್ಲೆಂಡ್‌ನ ನ್ಯಾಟ್ ಸಿವರ್-ಬ್ರಂಟ್ ಅವರಿಗಿಂತ 7 ಅಂಕಗಳಿಂದ ಹಿಂದಿದ್ದರು. ಆದ್ರೆ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಬಾರಿಸಿದ ಅರ್ಧಶತಕದ ನೆರವಿನಿಂದ ಅವರು ಇಂಗ್ಲೆಂಡ್ ಆಟಗಾರ್ತಿಗಿಂತಲೂ ನಾಲ್ಕು ಪಾಯಿಂಟ್‌ಗಳ ಮುನ್ನಡೆಯೊಂದಿಗೆ ನಂ. 1 ಸ್ಥಾನಕ್ಕೇರಿದರು.
ಬ್ರಂಟ್ ಹಿಂದಿಕ್ಕಿದ ಮಂದಾನ
ಸದ್ಯ, 735 ರೇಟಿಂಗ್‌ನೊಂದಿಗೆ ಮಂದಾನ ಅಗ್ರಸ್ಥಾನದಲ್ಲಿದ್ದರೆ, 731 ಅಂಕಗಳೊಂದಿಗೆ ನ್ಯಾಟ್ ಸಿವರ್-ಬ್ರಂಟ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಸ್ಮೃತಿ ಮಂದಾನ ಅವರು ಮೊದಲ ಬಾರಿಗೆ 2019 ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದರು. ಸದ್ಯ ಈಗ 2025 ರಲ್ಲಿ ಎರಡು ಬಾರಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ.
ಭಾರತ ತಂಡದ ಇನ್ನೋರ್ವ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 64 ರನ್ ಗಳಿಸುವ ಮೂಲಕ ರ‍್ಯಾಂಕಿಂಗ್‌ನಲ್ಲಿ ನಾಲ್ಕು ಸ್ಥಾನ ಜಿಗಿತ ಕಂಡು 42 ನೇ ಸ್ಥಾನಕ್ಕೆ ತಲುಪಿದ್ದಾರೆ. ಇನ್ನೋರ್ವ ಟಾಪ್ ಆರ್ಡರ್ ಆಟಗಾರ್ತಿ ಹರ್ಲೀನ್ ಡಿಯೋಲ್ 54 ರನ್ ಗಳಿಸಿದ ಬಳಿಕ ರ‍್ಯಾಂಕಿಂಗ್‌ನಲ್ಲಿ 43 ನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾ ಪರ ಎಡಗೈ ಆಟಗಾರ್ತಿ ಬೆತ್ ಮೂನಿ ಅಜೇಯ 77 ರನ್ ಗಳಿಸಿ ಮೂರು ಸ್ಥಾನ ಜಿಗಿತ ಕಂಡು 5ನೇ ಸ್ಥಾನಕ್ಕೆ ತಲುಪಿದ್ದಾರೆ. ವೇಗಿ ಕಿಮ್ ಗಾರ್ತ್ ಮತ್ತು ಸ್ಪಿನ್ನರ್ ಅಲಾನಾ ಕಿಂಗ್ ತಲಾ ಒಂದೊಂದು ಸ್ಥಾನ ಜಿಗಿದು ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ. ಇದು ಈ ಇಬ್ಬರು ಆಟಗಾರ್ತಿಯರ ಅತ್ಯುತ್ತಮ ಸಾಧನೆಯಾಗಿದೆ.
ಮೊದಲ ಏಕದಿನ ಪಂದ್ಯದಲ್ಲಿ 1 ವಿಕೆಟ್ ಪಡೆದ ಭಾರತದ ಸ್ಪಿನ್ನರ್ ಸ್ನೇಹ್ ರಾಣಾ 5 ಸ್ಥಾನಗಳ ಜಿಗಿತ ಕಂಡು 13ನೇ ಸ್ಥಾನಕ್ಕೆ ತಲುಪಿದ್ದಾರೆ. ಇಂಗ್ಲೆಂಡ್ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ಏಕದಿನ ರ‍್ಯಾಂಕಿಂಗ್‌ನಲ್ಲಿ ನಂಬರ್ 1 ಬೌಲರ್ ಆಗಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.