
ವರುಣ್ ಚಕ್ರವರ್ತಿ
ದುಬೈ: ಲೆಗ್‌ಬ್ರೇಕ್ ಬೌಲರ್ ವರುಣ್ ಚಕ್ರವರ್ತಿ ಅವರು ಬುಧವಾರ ಪ್ರಕಟವಾದ ಐಸಿಸಿ ಟಿ20 ರ್‍ಯಾಂಕಿಂಗ್ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಏಷ್ಯಾ ಕಪ್‌ನಲ್ಲಿ ಯುಎಇ ವಿರುದ್ಧ (1/4) ಮತ್ತು ಪಾಕಿಸ್ತಾನ (24ಕ್ಕೆ1) ವಿರುದ್ಧ ವರುಣ್ ಪರಿಣಾಮಕಾರಿ ಎನಿಸಿದ್ದ ವರುಣ್ ಮೂರು ಸ್ಥಾನ ಬಡ್ತಿ ಪಡೆದು, ವೃತ್ತಿಜೀವನದಲ್ಲಿ ಇದೇ ಮೊದಲು ಬಾರಿ ಈ ಸಾಧನೆಗೆ ಪಾತ್ರರಾಗಿದ್ದಾರೆ.
34 ವರ್ಷ ವಯಸ್ಸಿನ ಚಕ್ರವರ್ತಿ ಅಗ್ರಸ್ಥಾನಕ್ಕೇರಿದ ಭಾರತದ ಮೂರನೇ ಬೌಲರ್. ಈ ಹಿಂದೆ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಮತ್ತು ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಈ ಸಾಧನೆಗೆ ಪಾತ್ರರಾಗಿದ್ದರು.
ಈ ವರ್ಷದ ಫೆಬ್ರುವರಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದು ಇದುವರೆಗಿನ ಅವರ ಉತ್ತಮ ಸಾಧನೆ ಎನಿಸಿತ್ತು. ವರುಣ್ 733 ರೇಟಿಂಗ್ ಪಾಯಿಂಟ್ಸ್ ಗಳಿಸಿದ್ದಾರೆ. ಮಾರ್ಚ್‌ನಿಂದ ಅಗ್ರಸ್ಥಾನದಲ್ಲಿದ್ದ ನ್ಯೂಜಿಲೆಂಡ್‌ನ ಜೇಕಬ್ ಡಫಿ (717) ಎರಡನೇ ಸ್ಥಾನಕ್ಕಿಳಿದಿದ್ದಾರೆ. ರವಿ ಬಿಷ್ಣೋಯಿ ಎಂಟನೇ ಮತ್ತು ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್ 12ನೇ ಸ್ಥಾನದಲ್ಲಿದ್ದಾರೆ. ಕುಲದೀಪ್ 15 ಸ್ಥಾನ ಬಡ್ತಿ ಕಂಡು 23ನೇ ಸ್ಥಾನದಲ್ಲಿದ್ದಾರೆ. ಬೂಮ್ರಾ 4 ಸ್ಥಾನ ಬಡ್ತಿ ಪಡೆದು 40ನೇ ಸ್ಥಾನ ಗಳಿಸಿದ್ದಾರೆ.
ಆಲ್‌ರೌಂಡರ್‌ಗಳ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಅಭಿಷೇಕ್ ಶರ್ಮಾ 4 ಸ್ಥಾನ ಮೇಲೇರಿ 14ನೇ ಕ್ರಮಾಂಕದಲ್ಲಿದ್ದಾರೆ.
ಬ್ಯಾಟರ್‌ಗಳ ವಿಭಾಗದಲ್ಲಿ ಅಭಿಷೇಕ್ ಶರ್ಮಾ ಅಗ್ರಸ್ಥಾನವನ್ನು ಬಲಪಡಿಸಿಕೊಂಡಿದ್ದಾರೆ. ಅವರು 884 ರೇಟಿಂಗ್ ಪಾಯಿಂಟ್ಸ್ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿರುವ ಫಿಲ್ ಸಾಲ್ಟ್ (838) ಅವರು ಶರ್ಮಾ ಅವರಿಗಿಂತ 46 ಪಾಯಿಂಟ್ ಹಿಂದೆಯಿದ್ದಾರೆ. ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ರ್‍ಯಾಂಕಿಂಗ್‌ನಲ್ಲಿ ಕೊಂಚ ಕೆಳಗಿಳಿದು ಕ್ರಮವಾಗಿ ನಾಲ್ಕು ಮತ್ತು ಏಳನೇ ಸ್ಥಾನದಲ್ಲಿದ್ದಾರೆ. ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದ ಯಶಸ್ವಿ ಜೈಸ್ವಾಲ್ 13ನೆ ಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್‌ನ ಜೋಸ್ ಬಟ್ಲರ್ ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಆರಂಭಿಕ ಆಟಗಾರರಾದ ಸಾಲ್ಟ್ ಮತ್ತು ಬಟ್ಲರ್ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಉತ್ತವಾಗಿ ಆಡಿದ್ದರು. ಸಾಲ್ಟ್ 60 ಎಸೆತಗಳಲ್ಲಿ 141 ರನ್ ಸಿಡಿಸಿದ್ದರೆ, ಬಟ್ಲರ್ ಸಹ ಸ್ಫೋಟಕ ಆಟವಾಡಿ 30 ಎಸೆತಗಳಲ್ಲಿ 83 ರನ್ ಬಾರಿಸಿದ್ದರು.
ವರುಣ್‌ಗಿದೆ ಕರ್ನಾಟಕದ ನಂಟು
ಇದಕ್ಕೂ ಮೊದಲು ಜಸ್ಪ್ರೀತ್ ಬುಮ್ರಾ ಮತ್ತು ರವಿ ಬಿಷ್ಣೋಯ್ ಐಸಿಸಿ ಟಿ–20 ರ‍್ಯಾಂಕಿನ್‌ನಲ್ಲಿ ನಂ 1 ಸ್ಥಾನ ಪಡೆದಿದ್ದರು. ವರುಣ್ ಚಕ್ರವರ್ತಿ ಆಗಸ್ಟ್ 29, 1991 ರಂದು ಕರ್ನಾಟಕದ ಬೀದರ್‌ನಲ್ಲಿ ಜನಿಸಿದ್ದು, ಆರ್ಕಿಟೆಕ್ಟ್ ಆಗಿದ್ದ ವರುಣ್, ಕೆಲಸ ಬಿಟ್ಟು ಕ್ರಿಕೆಟ್ ಆಯ್ದುಕೊಂಡರು.
ಸ್ಮೃತಿ ಮಂದಾನ ನಂ.1
ಭಾರತದ ಸ್ಮೃತಿ ಮಂದಾನ ಮತ್ತೊಮ್ಮೆ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದ ನಂಬರ್.1 ಮಹಿಳಾ ಬ್ಯಾಟರ್ ಎನಿಸಿಕೊಂಡಿದ್ದಾರೆ. ಐಸಿಸಿ ಬಿಡುಗಡೆ ಮಾಡಿದ ಇತ್ತೀಚಿನ ಶ್ರೇಯಾಂಕದಲ್ಲಿ, ಮಂದಾನ 735 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್‌ನ ನ್ಯಾಟ್ ಸಿವರ್-ಬ್ರಂಟ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.