ಡಿ.ಗುಕೇಶ್, ವಿಶ್ವನಾಥನ್ ಆನಂದ್
(ಪಿಟಿಐ ಚಿತ್ರ)
ನವದೆಹಲಿ: ವಿಶ್ವ ಚೆಸ್ ಚಾಂಪಿಯನ್‌ಷಿಪ್ ಗೆದ್ದ ಅತಿ ಕಿರಿಯ ಭಾರತೀಯ ಎಂದೆನಿಸಿರುವ ಡಿ.ಗುಕೇಶ್ ಅವರನ್ನು ಐದು ಬಾರಿಯ ವಿಶ್ವ ಚಾಂಪಿಯನ್, ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಅಭಿನಂದಿಸಿದ್ದಾರೆ.
ಇದೇ ವೇಳೆ ಕಿವಿಮಾತು ಕೂಡ ಹೇಳಿದ್ದಾರೆ. ಯಶಸ್ಸಿನೊಂದಿಗೆ ಟೀಕೆಗಳು ಸಾಮಾನ್ಯ. ಅದನ್ನು ಕಡೆಗಣಿಸುವಂತೆ ಸಲಹೆ ಮಾಡಿದ್ದಾರೆ.
ಸಿಂಗಪುರದಲ್ಲಿ ನಡೆದ ಫೈನಲ್‌ನ ನಿರ್ಣಾಯಕ 14ನೇ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಮಣಿಸಿದ್ದ ಗುಕೇಶ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.
ಆ ಮೂಲಕ ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್ ಬಳಿಕ ವಿಶ್ವ ಚೆಸ್ ಚಾಂಪಿಯನ್‌ಷಿಪ್ ಗೆದ್ದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಗುಕೇಶ್ ಪಾತ್ರರಾಗಿದ್ದರು. ಗುಕೇಶ್ ಅವರಿಗೆ ಮಾರ್ಗದರ್ಶನ ನೀಡುವಲ್ಲಿಯೂ ಆನಂದ್ ಮಹತ್ವದ ಪಾತ್ರ ವಹಿಸಿದ್ದರು.
ಆದರೆ ಫೈನಲ್ ಆಟದ ಗುಣಮಟ್ಟದ ಬಗ್ಗೆ ಮಾಜಿ ವಿಶ್ವ ಚಾಂಪಿಯನ್ ರಷ್ಯಾದ ವ್ಲಾಡಿಮಿರ್ ಕ್ರಾಮ್ನಿಕ್ ಅಸಮಾಧಾನ ತೋಡಿಕೊಂಡಿದ್ದರು. 'ಬಾಲಿಶ ಆಟ, ನಮಗೆಲ್ಲರಿಗೂ ತಿಳಿದಿರುವಂತೆಯೇ ಇದು ಚದುರಂಗ ಆಟದ ಅಂತ್ಯವಾಗಿದೆ' ಎಂದು ಟೀಕಿಸಿದ್ದರು.
ಐದು ಬಾರಿಯ ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲಸನ್ ಸಹ ಟೀಕೆ ಮಾಡಿದ್ದು, 'ಇದು ಇಬ್ಬರು ವಿಶ್ವ ಚಾಂಪಿಯನ್‌ಷಿಪ್ ಸ್ಪರ್ಧಿಗಳ ನಡುವಣ ಆಟದಂತೆ ಭಾಸವಾಗುತ್ತಿಲ್ಲ. ಪಂದ್ಯಾವಳಿಯ ಎರಡು ಅಥವಾ ಮೂರನೇ ಸುತ್ತಿನ ಆಟದಂತೆ ತೋರುತ್ತಿದೆ' ಎಂದು ಹೇಳಿದ್ದರು.
ಆದರೆ ಗುಕೇಶ್ ಮೆಂಟರ್ ಆಗಿರುವ ಆನಂದ್, ಗುಕೇಶ್ ಯಶಸ್ಸಿನ ಬಗ್ಗೆ ತುಂಬಾ ಹೆಮ್ಮೆ ವ್ಯಕ್ತಪಡಿಸಿದ್ದಾರೆ. 'ಇತಿಹಾಸ ರಚನೆಯಾಯಿತು. ನಾನು ತುಂಬಾ ಸಂತಸಗೊಂಡಿದ್ದೇನೆ' ಎಂದು ಹೇಳಿದ್ದಾರೆ.
'ಪ್ರತಿ ಪಂದ್ಯದ ಬಳಿಕವೂ ಟೀಕೆಗಳು ಬರುತ್ತವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಟೀಕೆಗಳನ್ನು ಕಡೆಗಣಿಸಿ, ಅಷ್ಟೇ. ನಿಮ್ಮಗೆಲ್ಲರಿಗೂ ಗುಕೇಶ್ ಸಾಧನೆಯ ಬಗ್ಗೆ ತಿಳಿದಿದೆ. ಮತ್ತಷ್ಟು ಪ್ರಬಲ ಆಟಗಾರನಾಗಿ ಹೊರಹೊಮ್ಮಿದ್ದಾರೆ' ಎಂದು ಹೊಗಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.