ADVERTISEMENT

ಡೇವಿಸ್‌ ಕಪ್‌ ಕ್ವಾಲಿಫೈಯರ್ಸ್‌ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 23:23 IST
Last Updated 6 ಫೆಬ್ರುವರಿ 2026, 23:23 IST
ನೆದರ್ಲೆಂಡ್ಸ್‌ ತಂಡದ ನಾಯಕ ಜೆಸ್ಪರ್‌ ಡಿ ಜಾಂಗ್‌ ಹಾಗೂ ಭಾರತದ ಸುಮಿತ್‌ ನಾಲ್‌ ಪ್ರಜಾವಾಣಿ ಚಿತ್ರ
ನೆದರ್ಲೆಂಡ್ಸ್‌ ತಂಡದ ನಾಯಕ ಜೆಸ್ಪರ್‌ ಡಿ ಜಾಂಗ್‌ ಹಾಗೂ ಭಾರತದ ಸುಮಿತ್‌ ನಾಲ್‌ ಪ್ರಜಾವಾಣಿ ಚಿತ್ರ   

ಬೆಂಗಳೂರು: ಭಾರತ–ನೆದರ್ಲೆಂಡ್ಸ್‌ ನಡುವಣ ಡೇವಿಸ್‌ ಕಪ್‌ ಕ್ವಾಲಿಫೈಯರ್ಸ್‌ ಮೊದಲ ಸುತ್ತಿನ ಮುಖಾಮುಖಿ ಇಲ್ಲಿನ ಎಸ್‌.ಎಂ.ಕೃಷ್ಣ ಕ್ರೀಡಾಂಗಣದಲ್ಲಿ ಶನಿವಾರ ಮತ್ತು ಭಾನುವಾರ ನಡೆಯಲಿದೆ. ಶುಕ್ರವಾರ ಡ್ರಾ ಕಾರ್ಯಕ್ರಮ ನಡೆಯಿತು.

ಗಾಯದಿಂದ ಚೇತರಿಸಿಕೊಂಡಿರುವ ಭಾರತದ ಅಗ್ರಮಾನ್ಯ ಸಿಂಗಲ್ಸ್‌ ಆಟಗಾರ ಸುಮಿತ್‌ ನಾಗಲ್ ಅವರು ಈ ಕಾರ್ಯಕ್ರಮದ ಆಕರ್ಷಣೆಯಾಗಿದ್ದರು. ನೆದರ್ಲೆಂಡ್ಸ್‌ ಎದುರಿನ ಪಂದ್ಯಗಳಿಗೆ ಅವರು ಲಭ್ಯವಿರುವುದಾಗಿ ಭಾರತ ತಂಡ ಖಚಿತಪಡಿಸಿತು.

ಶನಿವಾರ ನಡೆಯಲಿರುವ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ, 28 ವರ್ಷ ವಯಸ್ಸಿನ ನಾಗಲ್‌ ಅವರು ವಿಶ್ವ ಕ್ರಮಾಂಕದಲ್ಲಿ 162ನೇ ಸ್ಥಾನದಲ್ಲಿರುವ ಗಯ್‌ ಡೆನ್‌ ಔಡೆನ್‌ ಅವರನ್ನು ಎದುರಿಸಲಿದ್ದಾರೆ. 2025ರ ಪ್ರಾಗ್‌ ಚಾಲೆಂಜರ್‌ ಟೂರ್ನಿಯಲ್ಲಿ ಇವರಿಬ್ಬರು ಎದುರಾಗಿದ್ದರು. ಆ ಪಂದ್ಯದಲ್ಲಿ ಡಚ್‌ ಆಟಗಾರ 6–1, 6–1ರಿಂದ ನಾಗಲ್‌ ಅವರನ್ನು ನಿರಾಯಾಸವಾಗಿ ಮಣಿಸಿದ್ದರು.

ADVERTISEMENT

ಭಾರತ ತಂಡದ ಪಾಲಿಗೆ ದಕ್ಷಿಣೇಶ್ವರ ಸುರೇಶ್‌ ಅವರ ಪಾತ್ರ ನಿರ್ಣಾಯಕವಾಗಿದ್ದು, 6 ಅಡಿ 5 ಇಂಚು ಎತ್ತರದ ಈ ಆಟಗಾರ ಸಿಂಗಲ್ಸ್‌ ಎರಡನೇ ಪಂದ್ಯದಲ್ಲಿ ಎದುರಾಳಿ ತಂಡದ ನಾಯಕ ಜೆಸ್ಪರ್‌ ಡಿ ಜಾಂಗ್‌ ಅವರನ್ನು ಎದುರಿಸಲಿದ್ದಾರೆ.

ಭಾನುವಾರ ನಡೆಯಲಿರುವ ಡಬಲ್ಸ್‌ ಪಂದ್ಯಗಳಲ್ಲಿ ಯೂಕಿ ಭಾಂಬ್ರಿ– ಶ್ರೀರಾಮ್‌ ಬಾಲಾಜಿ ಮೇಲೆ ಆತಿಥೇಯರು ನಿರೀಕ್ಷೆಯಿಟ್ಟುಕೊಂಡಿದ್ದಾರೆ. ತವರಿನ ಅಂಗಳದ ಲಾಭ ಪಡೆದು, ಎದುರಾಳಿ ಆಟಗಾರರ ಮೇಲೆ ಮೇಲುಗೈ ಸಾಧಿಸುವ ವಿಶ್ವಾಸ ಭಾರತದ ಜೋಡಿಯದು.

ಋತ್ವಿಕ್‌ ಬೊಲ್ಲಿಪಲ್ಲಿ ಅವರು ಭಾಂಬ್ರಿ ಅವರ ಜೊತೆಗಾರನಾಗಿ ಕಣಕ್ಕಿಳಿಯುವ ನಿರೀಕ್ಷೆಯಿತ್ತು. ಆದರೆ, ‘ಬಾಲಾಜಿ ಅವರು ವಿವಿಧ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಅವರ ಮೇಲೆ ವಿಶ್ವಾಸವಿಟ್ಟಿರುವೆ’ ಎಂದು ಭಾರತ ತಂಡದ ನಾಯಕ ರೋಹಿತ್‌ ರಾಜ್‌ಪಾಲ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.