ADVERTISEMENT

28ನೇ ಏಷ್ಯನ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್: ಉತ್ತಮ ಸಾಧನೆ ನಿರೀಕ್ಷೆಯಲ್ಲಿ ಭಾರತ

ಪಿಟಿಐ
Published 26 ಮೇ 2025, 23:30 IST
Last Updated 26 ಮೇ 2025, 23:30 IST
ನೀರಜ್‌ ಚೋಪ್ರಾ ಜಾವೆಲಿನ್‌ ಎಸೆತದ ಭಂಗಿ –ಪಿಟಿಐ ಚಿತ್ರ
ನೀರಜ್‌ ಚೋಪ್ರಾ ಜಾವೆಲಿನ್‌ ಎಸೆತದ ಭಂಗಿ –ಪಿಟಿಐ ಚಿತ್ರ   

ಗುಮಿ (ದಕ್ಷಿಣ ಕೊರಿಯಾ): ಸ್ಟಾರ್ ಅಥ್ಲೀಟ್ ನೀರಜ್‌ ಚೋ‍ಪ್ರಾ ಅವರ ಅನುಪಸ್ಥಿತಿಯ ನಡುವೆಯೂ 59 ಸದಸ್ಯರ ಪ್ರಬಲ ಭಾರತ ತಂಡ, ಮಂಗಳವಾರ ಆರಂಭವಾಗುವ 26ನೇ ಏಷ್ಯನ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.

ಡೈಮಂಡ್‌ ಲೀಗ್‌ ಕೂಟಗಳ ಕಡೆ ಗಮನಹರಿಸಿರುವ ಕಾರಣ ನೀರಜ್ ಚೋಪ್ರಾ, ಎರಡು ವರ್ಷಗಳಿಗೊಮ್ಮೆ ನಡೆಯುವ ಏಷ್ಯನ್‌ ಕೂಟದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ಈ ಹಿಂದಿನ ಕೆಲ ಆವೃತ್ತಿಗಳಲ್ಲೂ ಅವರು ಭಾಗಿಯಾಗಿರಲಿಲ್ಲ. ಹೀಗಾಗಿ ಪುರುಷರ ಜಾವೆಲಿನ್ ಥ್ರೊ ಸ್ಪರ್ಧೆಯಲ್ಲಿ ಒಲಿಂಪಿಕ್‌ ಚಾಂಪಿಯನ್, ಪಾಕಿಸ್ತಾನದ ಅರ್ಷದ್‌ ನದೀಮ್ ಅವರು ಆಕರ್ಷಣೆಯಾಗಿದ್ದಾರೆ. ಸಚಿನ್ ಯಾದವ್ ಮತ್ತು ಯಶವೀರ್ ಸಿಂಗ್ ಜಾವೆಲಿನ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ಮಂಗಳವಾರ ನಡೆಯುವ ಪುರುಷರ 20 ಕಿ.ಮೀ. ರೇಸ್‌ ವಾಕ್ ಈ ಕೂಟದ ಮೊದಲ ಪದಕ ನಿರ್ಧರಿಸುವ ಸ್ಪರ್ಧೆಯಾಗಿದೆ. ಇದರಲ್ಲಿ ಭಾರತದ ಸರ್ವಿನ್ ಸೆಬಾಸ್ಟಿಯನ್ (ವೈಯಕ್ತಿಕ ಶ್ರೇಷ್ಠ ಸಾಧನೆ: 1:21:23) ಮತ್ತು ಅಮಿತ್‌ (1:21:47) ಕಣದಲ್ಲಿದ್ದಾರೆ.

ADVERTISEMENT

‘ಇಲ್ಲಿ ಬೆಳಗಿನ ಹವೆ ದೂರ ಅಂತರದ ಸ್ಪರ್ಧೆಗೆ ಸೂಕ್ತವಾಗಿದೆ. ಮಂಗಳವಾರ ನನ್ನ ವೈಯಕ್ತಿಕ ಶ್ರೇಷ್ಠ ಸಾಧನೆ ಸುಧಾರಿಸುವ ವಿಶ್ವಾಸವಿದೆ’ ಎಂದು ಸೆಬಾಸ್ಟಿಯನ್ ಅವರು ಭಾರತ ಅಥ್ಲೆಟಿಕ್ಸ್ ಫೆಡರೇಷನ್‌ (ಎಎಫ್‌ಐ) ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಿಳೆಯರ ಜಾವೆಲಿನ್ ಥ್ರೋ ಸ್ಪರ್ಧೆಯೂ ಮೊದಲ ದಿನ ನಡೆಯಲಿದ್ದು, ಏಷ್ಯನ್ ಗೇಮ್ಸ್‌ ಚಾಂಪಿಯನ್ ಅನ್ನು ರಾಣಿ ಭಾರತದ ಭರವಸೆಯಾಗಿದ್ದಾರೆ. 32 ವರ್ಷ ವಯಸ್ಸಿನ ಅನ್ನುರಾಣಿ ಮಾರ್ಚ್‌ನಲ್ಲಿ ಮುಂಬೈನಲ್ಲಿ ನಡೆದ ಕೂಟದಲ್ಲಿ ಭರ್ಚಿಯನ್ನು 58.82 ಮೀ. ದೂರ ಎಸೆದಿದ್ದು, ಇದು ವರ್ಷದ ಉತ್ತಮ ಪ್ರದರ್ಶನವಾಗಿದೆ. ಆದರೆ ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಗಿಂತ (63.82 ಮೀ.) ಬಹಳ ಕಡಿಮೆ. ಬ್ಯಾಂಕಾಕ್‌ನಲ್ಲಿ ನಡೆದ ಈ ಹಿಂದಿನ ಆವೃತ್ತಿಯಲ್ಲಿ ಅವರು ನಾಲ್ಕನೇ ಸ್ಥಾನ ಗಳಿಸಿದ್ದರು.

ಸರ್ವೇಶ್ ಅನಿಲ್ ಕುಶಾಗ್ರೆ (ಪುರುಷರ ಹೈಜಂಪ್‌ ಕ್ವಾಲಿಫಿಕೇಷನ್ ಸುತ್ತು) ಮತ್ತು ಯೂನುಸ್‌ ಶಾ (ಪುರುಷರ 1,500 ಮೀ. ಹೀಟ್ಸ್‌) ಕೂಡ ಮೊದಲ ದಿನ ಕಣಕ್ಕಿಳಿಯಲಿದ್ದಾರೆ.

ಟ್ರಿಪಲ್‌ ಜಂಪ್‌ನಲ್ಲಿ ಭಾರತದ ಪ್ರವೀಣ್ ಚಿತ್ರವೇಲ್ ಮತ್ತು ಅಬ್ದುಲ್ಲಾ ಅಬೂಬಕ್ಕರ್ ಅವರು ಪದಕ ಗೆಲ್ಲುವ ಉಜ್ವಲ ಅವಕಾಶ ಹೊಂದಿದ್ದಾರೆ. ಅಬೂಬಕ್ಕರ್ ಹಾಲಿ ಚಾಂಪಿಯನ್ ಕೂಡ. ಚಿತ್ರವೇಲ್‌ ಈ ವರ್ಷ 17.37 ಮೀ. ಜಿಗಿದಿದ್ದು, ಇದು ಅವರ ವಿಶ್ವಾಸ ವೃದ್ಧಿಸಿದೆ.

‘ಮೊದಲ ದಿನ ಟ್ರಿಪಲ್ ಜಂಪ್‌ ಕ್ವಾಲಿಫಿಕೇಷನ್‌ ಸುತ್ತು ಇರುವುದಿಲ್ಲ. ಸ್ಪರ್ಧಿಗಳು ಎರಡನೇ ದಿನ ನೇರವಾಗಿ ಫೈನಲ್‌ನಲ್ಲಿ ತಮ್ಮ ಸಾಮರ್ಥ್ಯ ತೋರಲಿದ್ದಾರೆ’ ಎಂದು ರಾಷ್ಟ್ರೀಯ ತಂಡದ ಕೋಚ್‌ ರಾಧಾಕೃಷ್ಣನ್ ನಾಯರ್ ತಿಳಿಸಿದರು.

ಅವಿನಾಶ್ ಸಾಬ್ಳೆ (ಪುರುಷರ 3000 ಮೀ. ಸ್ಟೀಪಲ್‌ಚೇಸ್) ಮತ್ತು ಯುವ ತಾರೆಯರಾದ ಜ್ಯೋತಿ ಯರ್ರಾಜಿ (100 ಮೀ. ಹರ್ಡಲ್ಸ್‌), ಪಾರುಲ್‌ ಚೌಧರಿ (ಮಹಿಳೆಯರ 3000 ಮೀ. ಸ್ಟೀಪಲ್‌ಚೇಸ್‌) ಮೇಲೂ ಕುತೂಹಲದ ಕಣ್ಣು ಇದೆ.

ಈ ಕೂಟದಲ್ಲಿ 43 ದೇಶಗಳ 2000 ಅಥ್ಲೀಟುಗಳು ಭಾಗವಹಿಸುತ್ತಿದ್ದು, ಚೀನಾ ಮತ್ತು ಜಪಾನ್‌ ತಂಡಗಳು ಪದಕಗಳಲ್ಲಿ ಸಿಂಹಪಾಲು ಪಡೆಯುತ್ತಿದೆ. ಭಾರತ ಸಾರ್ವಕಾಲಿಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಬ್ಯಾಂಕಾಕ್‌ನಲ್ಲಿ ನಡೆದ ಈ ಹಿಂದಿನ ಆವೃತ್ತಿಯಲ್ಲಿ ಭಾರತ ಆರು ಚಿನ್ನ, 12 ಬೆಳ್ಳಿ ಮತ್ತು 9 ಕಂಚಿನ ಪದಕ ಸೇರಿದಂತೆ 27 ಪದಕಗಳನ್ನು ಗೆದ್ದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.