ADVERTISEMENT

ಹಾಕಿ: ಬ್ರಿಟನ್ ವಿರುದ್ಧ ಭಾರತಕ್ಕೆ ರೋಚಕ ಜಯ

ಎಫ್‌ಐಎಚ್ ಪ್ರೊ ಲೀಗ್ ಹಾಕಿ: ಶೂಟೌಟ್‌ನಲ್ಲಿ ಹೊರಹೊಮ್ಮಿದ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 17:07 IST
Last Updated 3 ಜೂನ್ 2023, 17:07 IST
ಭಾರತ ತಂಡದ ಹರ್ಮನ್‌ಪ್ರೀತ್ ಸಿಂಗ್
ಭಾರತ ತಂಡದ ಹರ್ಮನ್‌ಪ್ರೀತ್ ಸಿಂಗ್    

ಲಂಡನ್: ಹರ್ಮನ್‌ಪ್ರೀತ್  ಸಿಂಗ್ ನಾಯಕತ್ವದ ಭಾರತ ತಂಡವು ಎಫ್‌ಐಎಚ್ ಪ್ರೊ ಲೀಗ್ ಹಾಕಿ ಪಂದ್ಯದಲ್ಲಿ ಜಯಗಳಿಸಿತು.

ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 4–2ರಿಂದ ಪೆನಾಲ್ಟಿ ಶೂಟೌಟ್‌ನಲ್ಲಿ ಗ್ರೇಟ್‌ ಬ್ರಿಟನ್ ಎದುರು ಜಯಭೇರಿ ಬಾರಿಸಿತು.

ನಿಗದಿತ ವೇಳೆಯಲ್ಲಿ ಉಭಯ ತಂಡಗಳು 4–4ರ ಸಮಬಲ ಸಾಧಿಸಿದವು. ಭಾರತದ ಹರ್ಮನ್‌ಪ್ರೀತ್ ಸಿಂಗ್ (7ನೇ ನಿ), ಮನದೀಪ್ ಸಿಂಗ್ (19ನೇ ನಿ), ಸುಖಜೀತ್ ಸಿಂಗ್ (28ನಿ) ಮತ್ತು ಅಭಿಷೇಕ್ (50ನಿ) ಗೋಲು ಗಳಿಸಿದರು.

ADVERTISEMENT

ಆದರೆ ಅತಿಥೇಯ ತಂಡದ ಸ್ಯಾಮ್ ವಾರ್ಡ್ (8, 40, 47 ಹಾಗೂ 53ನೇ ನಿಮಿಷ) ಒಬ್ಬರೇ ನಾಲ್ಕು ಗೋಲು ಬಾರಿಸಿದರು. ಭಾರತ ತಂಡದ ಸುಲಭ ಗೆಲುವಿನ ಆಸೆಗೆ ಅಡ್ಡಗಾಲು ಹಾಕಿದರು. ಇದರಿಂದಾಗಿ ಪಂದ್ಯವು ಪೆನಾಲ್ಟಿ ಶೂಟೌಟ್‌ ಹಂತಕ್ಕೆ ತಲುಪಿತು.

ಭಾರತದ ಆಟಗಾರರು ಹಲವು ಬಾರಿ ಲಭಿಸಿದ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲುಗಳಲ್ಲಿ ಪರಿವರ್ತಿಸುವಲ್ಲಿ ಎಡವಿದರು.  ಬ್ರಿಟನ್ ತಂಡವು ಆರಂಭದಲ್ಲಿಯೇ ಗೋಲು ಗಳಿಸುವ ಕೆಲವು ಪ್ರಯತ್ನಗಳಿಗೆ ಭಾರತದ ಗೋಲ್‌ಕೀಪರ್ ಕ್ರಿಷನ್ ಬಹಾದ್ದೂರ್ ಪಾಠಕ್  ಅಡ್ಡಿಯಾದರು.

ಶೂಟೌಟ್ ಹಂತದಲ್ಲಿ  ಮನಪ್ರೀತ್ ಸಿಂಗ್, ಹರ್ಮನ್‌ಪ್ರೀತ್, ಲಲಿತ್‌ ಕುಮಾರ್ ಉಪಾಧ್ಯಾಯ ಮತ್ತು ಅಭಿಷೇಕ್ ತಲಾ ಒಂದು ಗೋಲು ಹೊಡೆದರು. ಬ್ರಿಟನ್ ತಂಡಕ್ಕೆ ಐದು ಅವಕಾಶಗಳಲ್ಲಿ ಎರಡು ಗೋಲು ಗಳಿಸಲಷ್ಟೇ ಸಾಧ್ಯವಾಯಿತು. ವಿಲ್ ಕೆಲ್ನಾನ್ ಗೋಲು ಹೊಡೆಯುವಲ್ಲಿ ಯಶಸ್ವಿಯಾದರು. ಆದರೆ ಝೆಚೆರಿ ವಾಲೆಸ್, ಶಿಪರ್ಲಿ ಮತ್ತು ರೊಪರ್ ಗೋಲು ಗಳಿಸುವಲ್ಲಿ ವಿಫಲರಾದರು.

ಭಾರತಕ್ಕೆ ಬೋನಸ್ ಪಾಯಿಂಟ್ ಲಭಿಸಿತು. 12 ಪಂದ್ಯಗಳಿಂದ 24 ಅಂಕ ಗಳಿಸಿ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಬ್ರಿಟನ್ (11 ಪಂದ್ಯ, 26 ಅಂಕ) ಇದೆ.

ಹರ್ಮನ್‌ಪ್ರೀತ್ ಬಳಗವು  ಜೂನ್ 7ರಂದು ಈಂಡೊವನ್‌ನಲ್ಲಿ ನೆದರ್ಲೆಂಡ್ಸ್‌ ಎದುರು ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.