ADVERTISEMENT

ವಿಶ್ವಕಪ್ ಹಾಕಿ: ರೋಹಿದಾಸ್ – ಹಾರ್ದಿಕ್ ಮಿಂಚು, ಭಾರತ ತಂಡದ ಶುಭಾರಂಭ

ಸ್ಪೇನ್‌ಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 16:48 IST
Last Updated 13 ಜನವರಿ 2023, 16:48 IST
ರೂರ್ಕೆಲಾದಲ್ಲಿ ಶುಕ್ರವಾರ ನಡೆದ ಹಾಕಿ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಜಯಿಸಿದ ಭಾರತದ ಆಟಗಾರರ ಸಂಭ್ರಮ –ಪಿಟಿಐ ಚಿತ್ರ
ರೂರ್ಕೆಲಾದಲ್ಲಿ ಶುಕ್ರವಾರ ನಡೆದ ಹಾಕಿ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಜಯಿಸಿದ ಭಾರತದ ಆಟಗಾರರ ಸಂಭ್ರಮ –ಪಿಟಿಐ ಚಿತ್ರ   

ರೂರ್ಕೆಲಾ: ಆತಿಥೇಯ ಭಾರತ ತಂಡವು ಶುಕ್ರವಾರ ಆರಂಭವಾದ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ಮುಂದೆ ನಡೆದ ಪಂದ್ಯದಲ್ಲಿ ಉಪನಾಯಕ ಅಮಿತ್ ರೋಹಿದಾಸ್ (12ನೇ ನಿಮಿಷ) ಮತ್ತು ಹಾರ್ದಿಕ್ ಸಿಂಗ್ (26ನೇ ನಿಮಿಷ) ಹೊಡೆದ ಗೋಲುಗಳ ಬಲದಿಂದ ಭಾರತವು ಡಿ ಗುಂಪಿನ ಪಂದ್ಯದಲ್ಲಿ 2–0ಯಿಂದ ಸ್ಪೇನ್ ವಿರುದ್ಧ ಗೆದ್ದಿತು.

ಪೆನಾಲ್ಟಿ ಕಾರ್ನರ್‌ನಲ್ಲಿ ರೋಹಿದಾಸ್ ರಿಬೌಂಡ್ ಆದ ಚೆಂಡನ್ನು ಗೋಲುಪೆಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾದರು. ಅದರೊಂದಿಗೆ ತಂಡದ ಖಾತೆ ತೆರೆದರು. ಅದೇ ಹಾರ್ದಿಕ್ ಅವರು ಫೀಲ್ಡ್‌ ಗೋಲ್ ಗಳಿಸಿದರು.

ADVERTISEMENT

ಭಾರತ ತಂಡಕ್ಕೆ ಒಟ್ಟು ಐದು ಪೆನಾಲ್ಟಿ ಕಾರ್ನರ್‌ಗಳು ಲಭಿಸಿದವು. ಅದರಲ್ಲಿ ನಾಲ್ಕು ಪೆನಾಲ್ಟಿಗಳನ್ನು ಗೋಲುಗಳನ್ನಾಗಿ ಪರಿವರ್ತಿಸುವಲ್ಲಿ ತಂಡ ಯಶಸ್ವಿಯಾಗಲಿಲ್ಲ.

ಇನ್ನೊಂದೆಡೆ ಸ್ಪೇನ್ ತಂಡವು ತನಗೆ ಸಿಕ್ಕ ಮೂರು ಪೆನಾಲ್ಟಿ ಕಾರ್ನರ್‌ಗಳಲ್ಲಿಯೂ ವಿಫಲವಾಯಿತು.

ಇಡೀ ಪಂದ್ಯದಲ್ಲಿ ಚೆಂಡು ಹೆಚ್ಚಿನ ಸಮಯ ಭಾರತದ ನಿಯಂತ್ರಣದಲ್ಲಿತ್ತು. ರಕ್ಷಣಾ ವಿಭಾಗದ ಆಟಗಾರರು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದರು. ಇದರಿಂದಾಗಿ ಸ್ಪೇನ್ ಆಟಗಾರರ ಗೋಲು ಗಳಿಕೆಯ ಪ್ರಯತ್ನಗಳು ವ್ಯರ್ಥವಾದವು.

ಭಾರತ ತಂಡವು ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದೆ.

ಭಾರತ ಹಾಕಿ ತಂಡದ ಅಭಿಮಾನಿ ತ್ರಿವರ್ಣ ಧ್ವಜದೊಂದಿಗೆ ಸಂಭ್ರಮಿಸಿದರು –ಪಿಟಿಐ ಚಿತ್ರ

ಹಬ್ಬದ ಸಂಭ್ರಮ

ಭವ್ಯವಾದ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ಹಬ್ಬದ ವಾತಾವರಣ ನೆಲೆಸಿತ್ತು.

21 ಸಾವಿರ ಆಸನ ಸಾಮರ್ಥ್ಯವಿರುವ ಈ ಕ್ರೀಡಾಂಗಣವು ಸಂಪೂರ್ಣ ಭರ್ತಿಯಾಗಿತ್ತು. ಅಲ್ಲದೇ ಕ್ರೀಡಾಂಗಣದ ಹೊರಗೂ ಸಾವಿರಾರು ಜನರು ಸೇರಿದ್ದರು.

ಸಂಗೀತ, ನೃತ್ಯ ಮತ್ತು ವಿವಿಧ ವೇಷಧಾರಿಗಳ ಸಂಭ್ರಮ ಮುಗಿಲುಮುಟ್ಟಿತ್ತು. ತ್ರಿವರ್ಣ ಧ್ವಜಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಿದ್ದವರು.

ಸುಂದರಗಢ ವಲಯದಲ್ಲಿ ರೂರ್ಕೆಲಾ ಅತಿ ದೊಡ್ಡ ನಗರವಾಗಿದೆ. ಈ ಊರು ಭಾರತ ಹಾಕಿಯ ‘ತೊಟ್ಟಿಲು’ ಎನಿಸಿಕೊಂಡಿದೆ. ಇಲ್ಲಿಂದ 60ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಹಾಕಿ ಪಟುಗಳು ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಆಡಿದ್ದಾರೆ. ಈ ಹಿಂದೆ ಪಂಜಾಬ್‌ನ ಸಂಸಾರಪುರವನ್ನು ಭಾರತ ಹಾಕಿಯ ಕಣಜ ಎಂದು ಹೇಳಲಾಗುತ್ತಿತ್ತು.

ಸದ್ಯ ಹಾಕಿ ಇಂಡಿಯಾದ ಅಧ್ಯಕ್ಷ ಹಾಗೂ ಭಾರತ ತಂಡದ ಮಾಜಿ ನಾಯಕ ದಿಲೀಪ್ ಟಿರ್ಕಿ ಕೂಡ ಇದೇ ಪ್ರದೇಶದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.