ADVERTISEMENT

ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿ: ಕಂಚಿನ ಪದಕಕ್ಕಾಗಿ ಭಾರತ– ಫ್ರಾನ್ಸ್ ಹೋರಾಟ

ಪ್ರಶಸ್ತಿಗಾಗಿ ಜರ್ಮನಿ – ಅರ್ಜೆಂಟೀನಾ ಸೆಣಸು

ಪಿಟಿಐ
Published 4 ಡಿಸೆಂಬರ್ 2021, 15:33 IST
Last Updated 4 ಡಿಸೆಂಬರ್ 2021, 15:33 IST
ಭಾರತ ಜೂನಿಯರ್ ಹಾಕಿ ತಂಡದ ಆಟಗಾರರು– ಪಿಟಿಐ ಚಿತ್ರ
ಭಾರತ ಜೂನಿಯರ್ ಹಾಕಿ ತಂಡದ ಆಟಗಾರರು– ಪಿಟಿಐ ಚಿತ್ರ   

ಭುವನೇಶ್ವರ : ಪ್ರಶಸ್ತಿ ಸ್ಪರ್ಧೆಯಿಂದ ಹೊರಬಿದ್ದಿರುವ ಹಾಲಿ ಚಾಂಪಿಯನ್ ಭಾರತ ಹಾಕಿ ತಂಡವು ಜೂನಿಯರ್ ವಿಶ್ವಕಪ್ ಟೂರ್ನಿಯ ಕಂಚಿನ ಪದಕಕ್ಕಾಗಿ ಭಾನುವಾರಫ್ರಾನ್ಸ್ ವಿರುದ್ಧ ಸೆಣಸಲಿದೆ.

ಶುಕ್ರವಾರ ನಡೆದ ಸೆಮಿಫೈನಲ್‌ ಹಣಾಹಣಿಯಲ್ಲಿ 2–4ರಿಂದ ಜರ್ಮನಿ ಎದುರು ವಿವೇಕ್‌ ಪ್ರಸಾದ್ ಸಾಗರ್ ನಾಯಕತ್ವದ ಭಾರತ ಸೋತಿತ್ತು. ಇದರೊಂದಿಗೆ ತಂಡದ ಪ್ರಶಸ್ತಿ ಉಳಿಸಿಕೊಳ್ಳುವ ಕನಸು ಕಮರಿತ್ತು.

2016ರಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತದ ಆಟ ಜರ್ಮನಿ ವಿರುದ್ಧದ ನಾಲ್ಕರಘಟ್ಟದ ಪಂದ್ಯದಲ್ಲಿ ಮಂಕಾಗಿತ್ತು. ಸ್ಥಿರ ಆಟದ ಕೊರತೆ ಕಂಡುಬಂದಿತ್ತು.

ADVERTISEMENT

ಜರ್ಮನಿ ತಂಡದ ಎದುರು ಸಾಧಾರಣ ಸಾಮರ್ಥ್ಯ ತೋರಿದ್ದ ಯಶದೀಪ್ ಸಿವಾಚ್‌, ಉಪನಾಯಕ ಸಂಜಯ್ ಕುಮಾರ್‌, ಶ್ರದ್ಧಾನಂದ ತಿವಾರಿ ಮತ್ತು ಅಭಿಷೇಕ್ ಲಾಕ್ರಾ ಈ ಪಂದ್ಯದಲ್ಲಿ ಮಿಂಚುವ ನಿರೀಕ್ಷೆಯಲ್ಲಿದ್ದಾರೆ.

‘ಫ್ರಾನ್ಸ್ ಎದುರಿನ ಪಂದ್ಯದಲ್ಲಿ ನಮ್ಮ ಆಟಗಾರರು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ. ಜರ್ಮನಿಯ ಎದುರು ತೀರ್ಮಾನ ತೆಗೆದುಕೊಳ್ಳುವ ಹಂತದಲ್ಲಿ ನಾವು ಎಡವಿದೆವು‘ ಎಂದು ಭಾರತ ತಂಡದ ಮುಖ್ಯ ಕೋಚ್ ಗ್ರಹಾಂ ರೀಡ್‌ ಹೇಳಿದ್ದಾರೆ.

ಜರ್ಮನಿ–ಅರ್ಜೆಂಟೀನಾ ಫೈನಲ್ ಹಣಾಹಣಿ: ಭಾನುವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ಜರ್ಮನಿ ತಂಡಕ್ಕೆ ಅರ್ಜೆಂಟೀನಾ ಸವಾಲು ಎದುರಾಗಿದೆ. ಜರ್ಮನಿ ತಂಡ ಆರು ಬಾರಿ ಚಾಂಪಿಯನ್ ಆಗಿದ್ದು, ಗೆಲುವಿನ ವಿಶ್ವಾಸಲ್ಲಿದೆ.

2005ರಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದ ಅರ್ಜೆಂಟೀನಾ ತಂಡವೂ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ತಂಡವು ಫ್ರಾನ್ಸ್ ಎದುರು ಗೆದ್ದಿತ್ತು. ನಿಗದಿತ ಅವಧಿಯಲ್ಲಿ ಗೋಲುರಹಿತವಾಗಿದ್ದ ಪಂದ್ಯದಲ್ಲಿ ಶೂಟೌಟ್‌ನಲ್ಲಿ 3–1ರಿಂದ ಅರ್ಜೆಂಟೀನಾ ಗೆದ್ದಿತ್ತು.

ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ಜರ್ಮನಿ 3–2ರಿಂದ ಅರ್ಜೆಂಟೀನಾ ತಂಡವನ್ನು ಮಣಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.