ಲಿಮಾ (ಪೆರು): ಭಾರತದ ಶೂಟಿಂಗ್ ಸ್ಪರ್ಧಿಗಳು ಐಎಸ್‌ಎಸ್‌ಎಫ್ ವಿಶ್ವ ಕಪ್‌ನ ಅಂತಿಮ ದಿನವಾದ ಸೋಮವಾರ ಟ್ರ್ಯಾಪ್ ಮಿಶ್ರ ವಿಭಾಗದಲ್ಲಿ ಪದಕದ ಸುತ್ತಿಗೇರಲು ವಿಫಲರಾದರು. ಆದರೆ ಒಟ್ಟಾರೆ ಪದಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಿತು.
ಸಿಮ್ರನ್‌ಪ್ರೀತ್ ಕೌರ್ ಬ್ರಾರ್ ಅವರು ಸೋಮವಾರ ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದು ಭಾರತಕ್ಕೆ ಕೊನೆಯ ಪದಕ ಗಳಿಸಿಕೊಟ್ಟಿದ್ದರು. ಭಾರತ ಒಟ್ಟಾರೆ ಈ ವಿಶ್ವಕಪ್‌ನಲ್ಲಿ ಏಳು ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ ಎರಡು ಚಿನ್ನ, ನಾಲ್ಕು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಒಳಗೊಂಡಿದೆ.
ಅಮೆರಿಕ ಸಹ ಏಳು ಪದಕಗಳನ್ನು ಗೆದ್ದರೂ, ಭಾರತಕ್ಕಿಂತ ಒಂದು ಚಿನ್ನ ಹೆಚ್ಚು ಗೆದ್ದಕಾರಣ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಿತು. ಚೀನಾ ನಾಲ್ಕು ಚಿನ್ನ, ಮೂರು ಬೆಳ್ಳಿ ಮತ್ತು ಆರು ಕಂಚಿನ ಪದಕಗಳೊಡನೆ ಅಗ್ರಸ್ಥಾನ ಪಡೆಯಿತು.
ಈ ಕೂಟದಲ್ಲಿ 18 ವರ್ಷ ವಯಸ್ಸಿನ ಸುರುಚಿ ಇಂದರ್ ಸಿಂಗ್ ಅವರು ಎರಡು ಚಿನ್ನ ಗೆದ್ದು ಭಾರತದ ಪರ ಅಮೋಘ ಸಾಧನೆ ತೋರಿದರು. ಅವರು 10 ಮೀ. ಏರ್ ಪಿಸ್ತೂಲ್‌ನಲ್ಲಿ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರನ್ನು ಹಿಂದೆಹಾಕಿದ್ದರು. ನಂತರ ಮಿಶ್ರ ವಿಭಾಗದಲ್ಲಿ ಸೌರಭ್ ಚೌಧರಿ ಅವರೊಂದಿಗೆ ದೇಶಕ್ಕೆ ಎರಡನೇ ಚಿನ್ನ ಗೆದ್ದುಕೊಟ್ಟಿದ್ದರು.
ಸೋಮವಾರ ನಡೆದ ಮಿಶ್ರ ಟ್ರ್ಯಾಪ್ ಸ್ಪರ್ಧೆಯಲ್ಲಿ ಭಾರತದ ಪೃಥ್ವಿರಾಜ್ ತೊಂಡೈಮನ್ ಮತ್ತು ಪ್ರಗತಿ ದುಬೆ 134ರ ಸ್ಕೋರ್‌ನಡೊನೆ ಎಂಟನೇ ಸ್ಥಾನ ಗಳಿಸಿದರು. ಲಕ್ಷಯ್ ಮತ್ತು ನೀರೂ ಅವರಿದ್ದ ತಂಡ (128) 13ನೇ ಸ್ಥಾನ ಪಡೆಯಿತು. ಈ ಸ್ಪರ್ಧೆಯಲ್ಲಿ ಅಗ್ರ ನಾಲ್ಕು ತಂಡಗಳು ಮಾತ್ರ ಪದಕ ಸುತ್ತಿಗೆ ಮುನ್ನಡೆಯುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.