ADVERTISEMENT

ಜೂನಿಯರ್‌ ಬಾಕ್ಸಿಂಗ್‌: ಭಾರತಕ್ಕೆ 25 ಪದಕ, 10 ಸ್ಪರ್ಧೆಗಳಲ್ಲಿ ಚಿನ್ನ

ಪಿಟಿಐ
Published 30 ಏಪ್ರಿಲ್ 2025, 13:16 IST
Last Updated 30 ಏಪ್ರಿಲ್ 2025, 13:16 IST
ಸಂಸ್ಕಾರ್ ವಿನೋದ್ -ಎಕ್ಸ್ ಚಿತ್ರ
ಸಂಸ್ಕಾರ್ ವಿನೋದ್ -ಎಕ್ಸ್ ಚಿತ್ರ   

ಅಮ್ಮಾನ್‌‌, ಜೋರ್ಡನ್‌: ಜೂನಿಯರ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪ್ರಬಲ್ಯ ಮುಂದುವರಿದಿದೆ. 15 ವರ್ಷದೊಳಗಿನವರ ವಿಭಾಗದಲ್ಲಿ ‌25 ಪದಕಗಳನ್ನು ಗೆದ್ದು ಅಗ್ರಸ್ಥಾನದಲ್ಲಿದೆ.

ಭಾರತದ ಮಹಿಳಾ ಬಾಕ್ಸರ್‌ಗಳು ಮಂಗಳವಾರ ನಡೆದ‍ 15 ತೂಕ ವಿಭಾಗಗಳ ಫೈನಲ್‌ ಸ್ಪರ್ಧೆಯಲ್ಲಿ 10 ಚಿನ್ನ ಗೆದ್ದುಕೊಂಡರು. ಜೊತೆಗೆ ನಾಲ್ಕು ಕಂಚಿನ ಪದಕ ಜಯಿಸಿದರು.

15 ವರ್ಷದೊಳಗಿನವರ ಬಾಲಕಿಯರ ವಿಭಾಗದಲ್ಲಿ ಕೋಮಲ್ (30–33 ಕೆ.ಜಿ) 3–2 ಅಂತರದಿಂದ ಕಜಕಸ್ತಾನದ ಐಯಾರು ಒಂಗಾರ್ಬೆಕ್ ಅವರನ್ನು ಸೋಲಿಸುವುದರೊಂದಿಗೆ ಭಾರತದ ಚಿನ್ನದ ಬೇಟೆ ಆರಂಭವಾಯಿತು. ನಂತರ ಖುಷಿ ಅಹ್ಲಾವತ್ (35 ಕೆ.ಜಿ), ತಮನ್ನಾ (37 ಕೆ.ಜಿ) ಸ್ವರ್ಣ ಗೆದ್ದರು.

ADVERTISEMENT

ಸ್ವಿ (40 ಕೆ.ಜಿ), ಮಿಲ್ಕಿ ಮೀನಮ್ (43 ಕೆ.ಜಿ), ಪ್ರಿನ್ಸಿ (52 ಕೆ.ಜಿ), ನವ್ಯಾ (58 ಕೆ.ಜಿ), ಸುನೈನಾ (61 ಕೆ.ಜಿ), ತೃಶಾನಾ ಮೋಹಿತೆ (67 ಕೆ.ಜಿ) ಮತ್ತು ವಂಶಿಕಾ (70+ ಕೆ.ಜಿ) ಅವರೂ ಚಿನ್ನಕ್ಕೆ ಮುತ್ತಿಟ್ಟರು.

15 ವರ್ಷದೊಳಗಿನವರ ಬಾಲಕರ ವಿಭಾಗದ ಫೈನಲ್‌ನಲ್ಲಿ ಭಾರತದ ನಾಲ್ವರು ಸ್ಪರ್ಧಿಸಿದ್ದರು. ಸಂಸ್ಕಾರ್ ವಿನೋದ್ (35 ಕೆಜಿ) ಚಿನ್ನ ಗೆದ್ದರೆ, ಉಳಿದ ಮೂವರು ಬೆಳ್ಳಿ ಪದಕ ಜಯಿಸಿದರು. ಏಳು ಮಂದಿ ಕಂಚು ತಮ್ಮದಾಗಿಸಿಕೊಂಡರು.

17 ವರ್ಷದೊಳಗಿನವರ ವಿಭಾಗದಲ್ಲಿ 18 ಪದಕಗಳು ಈಗಾಗಲೇ ಖಚಿತವಾಗಿದ್ದು, ಬುಧವಾರ ಫೈನಲ್‌ ಸ್ಪರ್ಧೆ ನಡೆಯಲಿದೆ. ಚಿನ್ನದ ಪದಕದ ಸುತ್ತಿನಲ್ಲಿ ಭಾರತ ಏಳು ಮಂದಿ ಕಣದಲ್ಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.