ADVERTISEMENT

ತೈವಾನ್‌ ಓಪನ್‌ ಅಥ್ಲೆಟಿಕ್ಸ್‌: 6 ಚಿನ್ನದ ಪದಕ ಗೆದ್ದ ಭಾರತದ ಸ್ಪರ್ಧಿಗಳು

ಕೂಟದ ಅಂತಿಮ ದಿನವೂ 6 ಚಿನ್ನದ ಪದಕ ಗೆದ್ದ ಭಾರತದ ಸ್ಪರ್ಧಿಗಳು

ಪಿಟಿಐ
Published 8 ಜೂನ್ 2025, 14:39 IST
Last Updated 8 ಜೂನ್ 2025, 14:39 IST
<div class="paragraphs"><p>ಕೃಷ್ಣ ಕುಮಾರ್‌ ಮತ್ತು&nbsp;ಯಶಸ್‌ ಫಾಲಾಕ್ಷ</p></div>

ಕೃಷ್ಣ ಕುಮಾರ್‌ ಮತ್ತು ಯಶಸ್‌ ಫಾಲಾಕ್ಷ

   

ತೈಪೆ ಸಿಟಿ: ಭಾರತದ ಅಥ್ಲೀಟ್‌ಗಳು ತೈವಾನ್‌ ಓಪನ್‌ ಇಂಟರ್‌ನ್ಯಾಷನಲ್‌ ಅಥ್ಲೆಟಿಕ್ಸ್‌ ಕೂಟದ ಅಂತಿಮ ದಿನವಾದ ಭಾನುವಾರ 6 ಚಿನ್ನದ ಪದಕಗಳನ್ನು ಗೆದ್ದರು. ಶನಿವಾರವೂ 6 ಚಿನ್ನ ಗೆದ್ದಿದ್ದ ಭಾರತ, ಕೂಟದಲ್ಲಿ ಪ್ರಾಬಲ್ಯ ಮೆರೆಯಿತು.

ಪುರುಷರ 4x400 ಮೀ. ರಿಲೆ ಸ್ಪರ್ಧೆಯಲ್ಲಿ ಭಾರತ ತಂಡವು ನೂತನ ಕೂಟ ದಾಖಲೆಯೊಂದಿಗೆ ಸ್ವರ್ಣ ಪದಕ ಜಯಿಸಿತು. ಸಂತೋಷ್ ಟಿ., ವಿಶಾಲ್‌ ಟಿ.ಕೆ., ಧರ್ಮವೀರ್‌ ಚೌಧರಿ ಹಾಗೂ ಮನು ಟಿ.ಎಸ್‌. ಅವರನ್ನೊಳಗೊಂಡ ತಂಡ 3 ನಿಮಿಷ, 5.58 ಸೆಕೆಂಡುಗಳಲ್ಲಿ ಗುರಿ ತಲುಪಿತು.

ADVERTISEMENT

ಮೂರು ಬಾರಿ ರಾಷ್ಟ್ರೀಯ ಚಾಂಪಿಯನ್‌ ಆಗಿರುವ ವಿದ್ಯಾ ರಾಮರಾಜ್‌ ಅವರು ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಪಡೆದುಕೊಂಡರು. ಮೂಲತಃ ತಮಿಳುನಾಡಿನವರಾದ ವಿದ್ಯಾ, ಗುರಿ ಮುಟ್ಟಲು 56.53 ಸೆಕೆಂಡುಗಳನ್ನು ತೆಗೆದುಕೊಂಡರು. ಇದು, ಈ ವರ್ಷದಲ್ಲಿ ಅವರ ಮೂರನೇ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಇದಕ್ಕೂ ಮೊದಲು, ಫೆಡರೇಷನ್‌ ಕಪ್‌ ಫೈನಲ್‌ನಲ್ಲಿ 56.04 ಸೆಕೆಂಡುಗಳಲ್ಲಿ ಹಾಗೂ ಏಷ್ಯನ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ 56.46 ಸೆಕೆಂಡುಗಳಲ್ಲಿ ಅವರು ಗುರಿ ಮುಟ್ಟಿದ್ದರು.

ಮಹಿಳೆಯರ 800 ಮೀ. ಓಟದ ಸ್ಪರ್ಧೆಯಲ್ಲಿ ಪೂಜಾ ಅವರು ಕೂಟ ದಾಖಲೆಯೊಂದಿಗೆ (2 ನಿ., 02.79 ಸೆ.) ಸ್ವರ್ಣ ಪದಕ ಜಯಿಸಿದರು. ಭಾರತದವರೇ ಆದ ಟ್ವಿಂಕಲ್‌ ಚೌಧರಿ ಅವರು 2 ನಿಮಿಷ, 6.96 ಸೆಕೆಂಡುಗಳಲ್ಲಿ ಗುರಿ ತಲುಪಿ, ಬೆಳ್ಳಿ ಪದಕ ಗೆದ್ದರು. ಪುರುಷರ ವಿಭಾಗದ 800 ಮೀ. ಸ್ಪರ್ಧೆಯಲ್ಲಿ ಕೃಷ್ಣ ಕುಮಾರ್‌ 1 ನಿಮಿಷ, 48.46 ಸೆಕೆಂಡುಗಳಲ್ಲಿ ಗುರಿ ತಲುಪಿ, ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಪುರುಷರ ವಿಭಾಗದ 400 ಮೀ. ಸ್ಪರ್ಧೆಯಲ್ಲಿ ಯಶಸ್‌ ಫಾಲಾಕ್ಷ ಅವರು ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ (49.22 ಸೆ.) ಬೆಳ್ಳಿ ಪದಕ ಪಡೆದುಕೊಂಡರು. ಆತಿಥೇಯ ತೈಪೆಯ ಶುಂಗ್‌ ವೈ–ಲಿನ್‌ ಅವರು 49 ಸೆಕೆಂಡುಗಳಲ್ಲಿ ಗುರಿ ತಲುಪಿ, ಚಿನ್ನ ಗಳಿಸಿದರು.

ಮಹಿಳೆಯರ ವಿಭಾಗದ ಉದ್ದ ಜಿಗಿತ ಸ್ಪರ್ಧೆಯಲ್ಲಿ ಭಾರತದ ಶೈಲಿ ಸಿಂಗ್‌ (6.41 ಮೀ.) ಆ್ಯನ್ಸಿ ಸೋಜನ್‌ (6.39 ಮೀ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆಸ್ಟ್ರೇಲಿಯಾದ ಡೆಲ್ಟಾ ಅಮಿಝೊವ್‌ಸ್ಕಿ ಅವರು 6.49 ಮೀ. ಜಿಗಿದು ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಜಾವೆಲಿನ್‌ನಲ್ಲಿ ಭಾರತ ಪಾರಮ್ಯ: ಪುರುಷರ ವಿಭಾಗದ ಜಾವೆಲಿನ್‌ ಎಸೆತದಲ್ಲಿ ಭಾರತದ ರೋಹಿತ್‌ ಯಾದವ್‌ 74.42 ಮೀ. ದೂರ ಎಸೆದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ತೈಪೆಯ ಯುವಾಂಗ್‌ ಶಿಹ್‌–ಫೆಂಗ್‌ (74.04 ಮೀ.) ಹಾಗೂ ಶೆಂಗ್‌ ಶಾಯೊ–ಸುನ್‌ (73.95 ಮೀ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಅನ್ನು ರಾಣಿ ಅವರು (56.82 ಮೀ.) ಚಿನ್ನದ ಪದಕ ಪಡೆದುಕೊಂಡರು. ಶ್ರೀಲಂಕಾದ ಹತರಬಗೆ ಲೆಕಮಾಲಾಗೆ (56.62 ಮೀ.) ಬೆಳ್ಳಿ ಹಾಗೂ ಆತಿಥೇಯ ತೈಪೆಯ ಪಿನ್‌–ಸುನ್‌ ಶು (53.03 ಮೀ.) ಕಂಚಿನ ಪದಕ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.