ADVERTISEMENT

ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ | ಮಹಿಳಾ ಹಾಕಿ; ಭಾರತಕ್ಕೆ ಥಾಯ್ಲೆಂಡ್‌ ಸವಾಲು

ಪಿಟಿಐ
Published 26 ಅಕ್ಟೋಬರ್ 2023, 23:30 IST
Last Updated 26 ಅಕ್ಟೋಬರ್ 2023, 23:30 IST
ಸವಿತಾ ಪೂನಿಯಾ
ಸವಿತಾ ಪೂನಿಯಾ   

ರಾಂಚಿ: ಹಾಂಗ್‌ಝೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡ ಭಾರತ ಮಹಿಳೆಯರ ಹಾಕಿ ತಂಡವು ಶುಕ್ರವಾರ ಇಲ್ಲಿ ಆರಂಭವಾಗುವ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ (ಎಸಿಟಿ) ಟೂರ್ನಿಯ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್‌ ತಂಡದ ವಿರುದ್ಧ ಅಭಿಯಾನ ಆರಂಭಿಸಲಿದೆ.

ಸವಿತಾ ಪೂನಿಯಾ ನೇತೃತ್ವದ ಭಾರತ ತಂಡವು ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದೆ. ಏಷ್ಯನ್‌ ಕ್ರೀಡಾಕೂಟದಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದ ಚೀನಾ ಮತ್ತು ಕೊರಿಯಾ ತಂಡಗಳ ವಿರುದ್ಧ ಪರಾಕ್ರಮ ಮೆರೆಯಲು ಇಲ್ಲಿ ವೇದಿಕೆ ಸಿಗಲಿದೆ. 

ಭಾರತ ತಂಡದ ಮುಖ್ಯ ಕೋಚ್‌ ಯಾನೆಕ್ ಶೋಪ್‌ಮನ್‌ ಮಾರ್ಗದರ್ಶನದಲ್ಲಿ ತಂಡ ಕಣಕ್ಕೆ ಇಳಿಯಲಿದೆ. ಗಾಯದ ಕಾರಣಕ್ಕಾಗಿ ಅನುಭವಿ ಮಿಡ್‌ಫೀಲ್ಡರ್‌ ಸುಶೀಲಾ ಚಾನು ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅವರ ಸ್ಥಾನವನ್ನು ಬಲ್ಜೀತ್ ಕೌರ್ ತುಂಬಲಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ತಂಡದಲ್ಲಿದ್ದ ವೈಷ್ಣವಿ ವಿಠಲ್ ಫಾಲ್ಕೆ ಅವರನ್ನು ಶರ್ಮಿಳಾ ದೇವಿ ಜೊತೆಗೆ ಬದಲಿ ಆಟಗಾರ್ತಿಯರಾಗಿ ಹೆಸರಿಸಲಾಗಿದೆ.

ADVERTISEMENT

ಆತಿಥೇಯ ಭಾರತ ಸೇರಿದಂತೆ ಹಾಲಿ ಚಾಂಪಿಯನ್‌ ಜಪಾನ್, ಚೀನಾ, ಕೊರಿಯಾ, ಮಲೇಷ್ಯಾ ಮತ್ತು ಥಾಯ್ಲೆಂಡ್ ತಂಡಗಳು ಟೂರ್ನಿಯಲ್ಲಿ ಸ್ಪರ್ಧಿಸಲಿವೆ. ಆರು ತಂಡಗಳು ರೌಂಡ್ ರಾಬಿನ್ ಲೀಗ್ ಹಂತದಲ್ಲಿ ಪರಸ್ಪರ ಸೆಣಸಾಡಿ, ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಮುನ್ನಡೆಯಲಿವೆ.

ಭಾರತ ತಂಡವು ಅ.28ರಂದು ಮಲೇಷ್ಯಾ ವಿರುದ್ಧ, ಅ.30ರಂದು ಚೀನಾ ವಿರುದ್ಧ, ಅ.31ರಂದು ಜಪಾನ್‌ ವಿರುದ್ಧ, ನ.2ರಂದು ಕೊರಿಯಾ ವಿರುದ್ಧ ಸೆಣಸಲಿದೆ. ನ.4 ಮತ್ತು 5ರಂದು ಕ್ರಮವಾಗಿ ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯಗಳು ನಡೆಯಲಿವೆ.

ಭಾರತ ತಂಡವು 2016ರಲ್ಲಿ ಮೊದಲ ಬಾರಿ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. 2018ರ ಆವೃತ್ತಿಯಲ್ಲಿ ರನ್ನರ್‌ ಅಪ್‌ ಸ್ಥಾನ ಪಡೆದಿತ್ತು. ಇದೇ ಮೊದಲ ಬಾರಿ ಎಸಿಟಿ ಟೂರ್ನಿಯ ಆತಿಥ್ಯ ಭಾರತಕ್ಕೆ ಲಭಿಸಿದೆ.

ಮುಂದಿನ ಜನವರಿಯಲ್ಲಿ ಒಲಿಂಪಿಕ್ಸ್‌ ಅರ್ಹತಾ ಟೂರ್ನಿ ರಾಂಚಿಯಲ್ಲೇ ನಡೆಯಲಿದ್ದು, ಅದರ ಪೂರ್ವಸಿದ್ಧತೆಗೆ ಈ ಟೂರ್ನಿ ಭಾರತ ತಂಡಕ್ಕೆ ಉತ್ತಮ ವೇದಿಕೆಯಾಗಲಿದೆ.

ಭಾರತ ಮಹಿಳಾ ಹಾಕಿ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.