ADVERTISEMENT

ಭಾರತೀಯ ಹಾಕಿ ಕ್ರೀಡೆಯ ‘ಗೋಡೆ’ ಮ್ಯಾನ್ಯುವೆಲ್ ಫ್ರೆಡರಿಕ್

ಮ್ಯೂನಿಕ್ ಒಲಿಂಪಿಕ್ಸ್ ಪದಕ ವಿಜೇತ ಆಟಗಾರ ಅಸ್ತಂಗತ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 23:30 IST
Last Updated 31 ಅಕ್ಟೋಬರ್ 2025, 23:30 IST
ಮ್ಯಾನ್ಯುವೆಲ್ ಫ್ರೆಡರಿಕ್
ಮ್ಯಾನ್ಯುವೆಲ್ ಫ್ರೆಡರಿಕ್   

ಬೆಂಗಳೂರು: ಭಾರತದ ಹಾಕಿ ಕ್ರೀಡೆಯ ‘ಗೋಡೆ’ಯಂತಹ ಗೋಲ್‌ಕೀಪರ್‌ಗಳಲ್ಲಿ ಮ್ಯಾನ್ಯುವೆಲ್ ಫ್ರೆಡರಿಕ್ ಅವರೂ ಒಬ್ಬರು. 1972ರಲ್ಲಿ ನಡೆದಿದ್ದ ಮ್ಯೂನಿಕ್ ಒಲಿಂಪಿಕ್ ಕೂಟದಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತ ತಂಡದ ಗೋಲ್‌ಕೀಪರ್ ಆಗಿದ್ದವರು. ಭಾರತದ ಹಾಕಿ ಕ್ರೀಡೆಗೆ ಮಹತ್ವದ ಕಾಣಿಕೆಗಳನ್ನು ನೀಡಿದ ಮ್ಯಾನ್ಯುವೆಲ್ ಇನ್ನು ನೆನಪು ಮಾತ್ರ. 

ವೃಷಣದ ಕ್ಯಾನ್ಸ್‌ರ್‌ನಿಂದ ಬಳಲಿದ್ದ ಮ್ಯಾನ್ಯುವೆಲ್ (78) ಶುಕ್ರವಾರ ನಿಧನರಾದರು.ಅವರಿಗೆ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.

ಕೇರಳದ ಕಣ್ಣೂರು ಜಿಲ್ಲೆಯಲ್ಲಿ (20 ಅಕ್ಟೋಬರ್ 1947) ಮ್ಯನ್ಯುವೆಲ್ ಜನಿಸಿದ್ದರು. ಆರ್ಮಿ ಸರ್ವಿಸ್ ಕಾಪ್ಸ್‌ (ಜಲಂಧರ್) ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್ (ಬೆಂಗಳೂರು)ತಂಡಗಳಲ್ಲಿ ಆಡಿದ್ದವರು. 1960 ಮತ್ತು 70ರ ದಶಕದಲ್ಲಿ ತಮ್ಮ ಎದುರಾಳಿ ತಂಡದ ಆಟಗಾರರಿಗೆ ಸಿಂಹಸ್ವಪ್ನವಾಗಿದ್ದ ಗೋಲ್‌ಕೀಪರ್ ಅವರಾಗಿದ್ದರು. ಆಕ್ರಮಣಶೈಲಿಯ ಅವರ ಕೀಪಿಂಗ್‌ ಜನಜನಿತವಾಗಿತ್ತು. 

ADVERTISEMENT

ಆ ಕಾಲಘಟ್ಟದಲ್ಲಿ ಗೋಲ್‌ಕೀಪರ್‌ಗಳಿಗೆ ರಕ್ಷಾ ಕವಚಗಳು ಈಗಿನಂತೆ ಆಧುನಿಕವಾಗಿರಲಿಲ್ಲ. ಮ್ಯಾನ್ಯುವೆಲ್ ಅವರು ಪ್ಯಾಡ್ ಮತ್ತು ಗ್ಲೌಸ್‌ ಧರಿಸಿಕೊಂಡು ಆಡಿದ್ದರು. ಹೆಲ್ಮೆಟ್ ಧರಿಸುತ್ತಿರಲಿಲ್ಲ. ಆದರೆ ಗೋಲುಪೆಟ್ಟಿಗೆಯತ್ತ ನುಗ್ಗಿ ಬರುವ ಚೆಂಡಿಗೆ ಎದೆಗೊಟ್ಟು ನಿಲ್ಲುವಲ್ಲಿ ಎಂದೂ ಹಿಂಜರಿಯಲಿಲ್ಲ. ಪೆನಾಲ್ಟಿ ಕಾರ್ನರ್ ಮತ್ತು ಸ್ಟೋಕ್ಸ್‌ ಸಂದರ್ಭದಲ್ಲಿ ಚೆಂಡನ್ನು ತಡೆಯಲು ತಮ್ಮದೇ ವಿಭಿನ್ನ ಶೈಲಿ ರೂಢಿಸಿಕೊಂಡಿದ್ದರು. ಎದುರಾಳಿ ಪಾಳೆಯದಲ್ಲಿ ನುಗ್ಗಿ ಚೆಂಡನ್ನು ತಡೆಯುವ ಕಲೆ ಅವರಿಗೆ ಕರಗತವಾಗಿತ್ತು. 

‘ಮ್ಯಾನ್ಯುವೆಲ್ ಅವರು ಎಲ್ಲರಿಗಿಂತ ವಿಭಿನ್ನ ಗೋಲ್‌ಕೀಪರ್ ಆಗಿದ್ದರು. ಬಹಳ ಆಕ್ರಮಣಶೈಲಿಯ ಆಟಗಾರ. ಆ ಕಾಲದಲ್ಲಿದ್ದ ಆಟಗಾರರಲ್ಲಿ  ಅಂತಹ ಸ್ವಭಾವ ಅಪರೂಪವಾಗಿತ್ತು. ಕೆಲವೊಮ್ಮೆ ಅವರ ಶೈಲಿಯನ್ನು ನೋಡಿ ನಾವೇ ಆತಂಕಪಡುತ್ತಿದ್ದೇವು. ಅವರ ಆಟವನ್ನು ಒರಟು ಎಂದು ಎದುರಾಳಿಗಳು ಮತ್ತು ಕೋಚ್‌ಗಳು ದೂರು ನೀಡಿಬಿಟ್ಟರೇನು ಗತಿಯೆಂಬ ಆತಂಕ ಅದಾಗಿತ್ತು. ಆದರೆ ಫ್ರೆಡ್ರಿಕ್ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ’ ಎಂದು ಭಾರತ ತಂಡದ ಮಾಜಿ ಆಟಗಾರ ಬಿ.ಪಿ. ಗೋವಿಂದ ಅವರು ಸ್ಮರಿಸಿದರು. ಕೊಡಗು ಜಿಲ್ಲೆಯ ಗೋವಿಂದ ಅವರು ಮ್ಯಾನ್ಯುವೆಲ್ ಜೊತೆಗೆ ಬಹಳಷ್ಟು ಕಾಲ ಭಾರತ ತಂಡದಲ್ಲಿ ಆಡಿದ್ದರು.

ಒಲಿಂಪಿಕ್ಸ್ ಪದಕ ಜಯಿಸಿದ ಕೇರಳದ ಮೊದಲ ಕ್ರೀಡಾಪಟುವೆಂಬ ಹೆಗ್ಗಳಿಕೆ ಅವರದ್ದು. ಕೇರಳದಲ್ಲಿ ಹಾಕಿ ಕ್ರೀಡೆಯನ್ನು ಆಡುವವರು ತೀರಾ ಕಡಿಮೆಯಿದ್ದ ಕಾಲವದು. ಆದರೂ ಮ್ಯಾನ್ಯುವೆಲ್ ಅವರಲ್ಲಿ ಹಾಕಿ ಆಟದ ಕುರಿತು ಆಸಕ್ತಿ ಗರಿಗೆದರಿತ್ತು. ಅದು ಜಲಂಧರ್‌ನಲ್ಲಿ ಸೇನೆ ಸೇರಿದಾಗ ಅವರ ಕನಸು ನನಸಾಯಿತು. ಅವರ ಕೌಶಲಗಳಿಗೆ  ಅಲ್ಲಿದ್ದವರೆಲ್ಲರೂ ಮನಸೋತರು. ಅಲ್ಲಿಂದ ಮುಂದೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರು. 

70ರ ದಶಕದಲ್ಲಿ ಅವರು ಬೆಂಗಳೂರನಲ್ಲಿ ಎಚ್‌ಎಎಲ್ ಸೇರ್ಪಡೆಯಾದರು. ನಿವೃತ್ತಿಯ ನಂತರವೂ ಅವರು ಹಾಕಿ ಕ್ರೀಡೆಯೊಂದಿಗಿನ ನಂಟು ಉಳಿಸಿಕೊಂಡಿದ್ದರು. ಡಿವೈಇಎಸ್  ತಂಡಗಳಿಗೆ ತರಬೇತಿ ನೀಡಿದ್ದರು. 

‘ಅರ್ಜೆಂಟೀನಾ ಫುಟ್‌ಬಾಲ್ ತಂಡದ   ಎಮಿಲಿಯಾನೊ ಮಾರ್ಟಿನೇಜ್ ಅವರಂತೆ ಮ್ಯಾನ್ಯುವೆಲ್ ಇದ್ದರು. ಅಂತರರಾಷ್ಟ್ರೀಯ ಪಂದ್ಯಗಳಲ್ಲಿಯೂ ಅವರು ಆಕ್ರಮಣಶೈಲಿಯಲ್ಲಿಯೇ ಆಡುತ್ತಿದ್ದ ರೀತಿ ಭಾರತದ ಮಟ್ಟಿಗೆ ಹೊಸದಾಗಿತ್ತು’ ಎಂದು ಮಾಜಿ ಆಟಗಾರ ಜೂಡ್ ಫೆಲಿಕ್ಸ್  ಅವರು ನೆನಪಿಸಿಕೊಂಡರು. 

ನೇರ ನಡೆನುಡಿಯ ಮ್ಯಾನ್ಯುವೆಲ್ ಅವರಿಗೆ ಪ್ರಶಸ್ತಿ ಮತ್ತು ಗೌರವಾದರಗಳು ಬಹಳ ತಡವಾಗಿ ಲಭಿಸಿದವು. ತತ್ವನಿಷ್ಠ ವ್ಯಕ್ತಿಯಾಗಿದ್ದ ಅವರು ಸರ್ಕಾರ ಅಥವಾ ಫೆಡರೇಷನ್‌ಗಳಿಂದ ಯಾವತ್ತೂ ಏನೂ ಬೇಡಿರಲಿಲ್ಲ.
–ಎಂ.ಪಿ. ಗಣೇಶ್, ಭಾರತ ಹಾಕಿ ತಂಡದ ಮಾಜಿ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.