ADVERTISEMENT

20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್: ಭಾರತ ರಿಲೇ ತಂಡದ ‘ಬೆಳ್ಳಿ’ ನಗೆ

ಪಿಟಿಐ
Published 3 ಆಗಸ್ಟ್ 2022, 14:33 IST
Last Updated 3 ಆಗಸ್ಟ್ 2022, 14:33 IST
ಭರತ್ ಶ್ರೀಧರ್, ಪ್ರಿಯಾ ಮೋಹನ್, ರೂಪಾಲ್ ಮತ್ತು ಕಪಿಲ್‌– ಸಾಯ್ ಮೀಡಿಯಾ ಟ್ವಿಟರ್‌ ಚಿತ್ರ
ಭರತ್ ಶ್ರೀಧರ್, ಪ್ರಿಯಾ ಮೋಹನ್, ರೂಪಾಲ್ ಮತ್ತು ಕಪಿಲ್‌– ಸಾಯ್ ಮೀಡಿಯಾ ಟ್ವಿಟರ್‌ ಚಿತ್ರ   

ಕ್ಯಾಲಿ, ಕೊಲಂಬಿಯಾ:ಕರ್ನಾಟಕದಪ್ರಿಯಾಮೋಹನ್ಅವರನ್ನೊಳಗೊಂಡ ಭಾರತ4X400 ಮಿಟರ್ಸ್ ಮಿಶ್ರ ರಿಲೇ ತಂಡವು 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದೆ. ಇಲ್ಲಿ ಪದಕ ಜಯಿಸುವುದರೊಂದಿಗೆ ತಾನೇ ಸ್ಥಾಪಿಸಿದ್ದ ಏಷ್ಯನ್ ಜೂನಿಯರ್ ದಾಖಲೆಯನ್ನು ತಂಡ ಉತ್ತಮಪಡಿಸಿಕೊಂಡಿತು.

ಪ್ರಿಯಾ, ಭರತ್ ಶ್ರೀಧರ್, ರೂಪಾಲ್‌ ಚೌಧರಿ ಮತ್ತು ಕಪಿಲ್ ಅವರಿದ್ದ ತಂಡವು ಬುಧವಾರ ನಡೆದ ಫೈನಲ್‌ನಲ್ಲಿ 3 ನಿಮಿಷ 17.76 ಸೆಕೆಂಡುಗಳಲ್ಲಿ ಗುರಿ ತಲುಪಿತು. ಅಮೆರಿಕ (3 ನಿ. 17.69 ಸೆಕೆಂಡು) ತಂಡವು ಚಿನ್ನ ಗೆದ್ದರೆ, ಜಮೈಕಾ (3 ನಿ.19.98 ಸೆ.) ತಂಡಕ್ಕೆ ಕಂಚು ಒಲಿಯಿತು.

ಭಾರತ ತಂಡವು ಸೋಮವಾರ ಹೀಟ್ಸ್‌ನಲ್ಲಿ 3 ನಿಮಿಷ 19.62 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಏಷ್ಯನ್ ಜೂನಿಯರ್ ವಿಭಾಗದಲ್ಲಿ ದಾಖಲೆ ಬರೆದಿತ್ತು.

ADVERTISEMENT

ಭಾರತ ಸತತ ಎರಡನೇ ಆವೃತ್ತಿಯಲ್ಲಿ ಈ ವಿಭಾಗದಲ್ಲಿ ಪದಕ ಗೆದ್ದುಕೊಂಡಿದೆ. ಕಳೆದ ವರ್ಷ ನೈರೋಬಿಯಲ್ಲಿ ನಡೆದ ಕಳೆದ ಆವೃತ್ತಿಯಲ್ಲಿ ಕಂಚು ಜಯಿಸಿತ್ತು. 2021ರಲ್ಲೇ ಈ ವಿಭಾಗವನ್ನು ಮೊದಲ ಬಾರಿಗೆ ನಡೆಸಲಾಗಿತ್ತು.

ವೀಸಾ ಸಮಸ್ಯೆಯಿಂದಾಗಿ ಭಾರತ ತಂಡವು ಸ್ಪರ್ಧೆಗಿಂತ ಕೇವಲ ಒಂದು ದಿನ ಮೊದಲು ಇಲ್ಲಿ ತಲುಪಿತ್ತು. ಹೀಗಾಗಿ ತಂಡದ ಬೆಳ್ಳಿ ಪದಕದ ಸಾಧನೆ ವಿಶೇಷ ಎನಿಸಿದೆ.

ಮಂಗಳವಾರ ಪ್ರಿಯಾ ಹಾಗೂ ರೂಪಾಲ್‌ 400 ಮೀಟರ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದರು. ಮಹಿಳೆಯರ 800 ಮೀ. ವಿಭಾಗದಲ್ಲಿ ಆಶಾಕಿರಣ ಬಾರ್ಲಾ ಫೈನಲ್ಸ್ ತಲುಪುವಲ್ಲಿ ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.